ಬುಧವಾರ, ನವೆಂಬರ್ 13, 2019
23 °C

ಜೆಮ್‌ಫೀಲ್ಡ್ಸ್ ಆಭರಣ ಪ್ರದರ್ಶನ

Published:
Updated:
ಜೆಮ್‌ಫೀಲ್ಡ್ಸ್ ಆಭರಣ ಪ್ರದರ್ಶನ

ಬೆಂಗಳೂರು: ಜೆಮ್‌ಫೀಲ್ಡ್ಸ್ ಕಂಪೆನಿಯು ವಿವಿಧ ಬಣ್ಣದ ಹರಳುಗಳಿಂದ ತಯಾರಿಸಿದ ಆಭರಣಗಳ ಪ್ರದರ್ಶನವನ್ನು ಮಂಗಳವಾರ ನಗರದಲ್ಲಿ ಆಯೋಜಿಸಿತ್ತು. ರೂಪದರ್ಶಿಗಳು ವಿವಿಧ ವಿನ್ಯಾಸದ ಪಚ್ಚೆ ಮತ್ತು ಹರಳುಗಳಿಂದ ತಯಾರಿಸಿದ ಆಭರಣಗಳನ್ನು ಧರಿಸಿ, ಪ್ರದರ್ಶಿಸಿದರು.ಪ್ರದರ್ಶನದ ಬಗ್ಗೆ ವಿವರ ನೀಡಿದ ಜೆಮ್‌ಫೀಲ್ಡ್ಸ್ ಪ್ರಾದೇಶಿಕ ಮಾರುಕಟ್ಟೆ ನಿರ್ದೇಶಕ ರೂಪಕ್ ಸೇನ್, `ಜೆಮ್‌ಫೀಲ್ಡ್ಸ್ ಕಂಪೆನಿಯು ವಿಶಿಷ್ಟ ಬಣ್ಣದ ಹರಳು ಮತ್ತು ಪಚ್ಚೆಗಳಿಂದ ಆಭರಣಗಳನ್ನು ತಯಾರಿಸುತ್ತಿದೆ. ಪಚ್ಚೆಗಳು ವಜ್ರಗಳಿಗಿಂತ ಅಪರೂಪವಾಗಿವೆ. ಇದರಿಂದ ಭಾರತದಲ್ಲಿ ಬಣ್ಣದ ಹರಳು ಮತ್ತು ಪಚ್ಚೆಗಳ ಬೇಡಿಕೆ ನಾಲ್ಕು ವರ್ಷಗಳಲ್ಲಿ ವರ್ಷಕ್ಕೆ ಶೇ 50 ರಷ್ಟು ಹೆಚ್ಚಾಗಿದೆ' ಎಂದು ವಿವರಿಸಿದರು.`ಭಾರತದಲ್ಲಿ ಇಂದು ಪಚ್ಚೆ, ಹರಳುಗಳಿಂದ ತಯಾರಿಸಿದ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತೀಯ ಮಾರುಕಟ್ಟೆಗೆ ನೀಲಮಣಿಗಳ ಆಭರಣಗಳನ್ನು ಈ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳಿಸಲಾಗುವುದು' ಎಂದರು. `ಕಂಪೆನಿಯು ವಿಶ್ವದ ಮುಂಚೂಣಿಯ ಅಂತರರಾಷ್ಟ್ರೀಯ ವಿನ್ಯಾಸಕರೊಂದಿಗೆ ಸಹಯೋಗವನ್ನು ಹೊಂದಿದೆ. ಈ ಸಹಯೋಗದಿಂದ ಹರಳುಗಳ ಸೌಂದರ್ಯ, ಅದರ ಛಾಯೆಗಳು, ಆಕಾರಗಳು ಗಾತ್ರಗಳು ಕೂಡ ಬದಲಾಗಲಿವೆ.ನಿಖರವಾಗಿ ಕತ್ತರಿಸಿ, ಕಲ್ಲುಸಕ್ಕರೆಯಂತೆ ಕಾಣುವ ಹೊಳಪಿನ ಝಾಂಬಿಯಾದ ಹಸುರು ಪಚ್ಚೆಯಿಂದ, ಮೊಝಾಂಬಿಕ್‌ನ ಪಚ್ಚೆಗಳಿಂದ ಆಭರಣಗಳನ್ನು ತಯಾರಿಸಲಾಗಿದೆ' ಎಂದು ಹೇಳಿದರು.`ಝಾಂಬಿಯಾದಲ್ಲಿ ಪಚ್ಚೆ ಮತ್ತು ಪದ್ಮರಾಗಗಳ ಕಾರ್ಯ ನಿರ್ವಹಣೆಯ ನಂತರ ಕಂಪೆನಿಯು ಈಗ ನೀಲಮಣಿಗಳನ್ನು ಮೊಝಾಂಬಿಕ್‌ನಲ್ಲಿ ಸಂಸ್ಕರಣೆ ಮಾಡುತ್ತಿದೆ. ಮೊಝಾಂಬಿಕ್ ಜಾಗತಿಕವಾಗಿ ಅತಿದೊಡ್ಡ ಪಚ್ಚೆ ಉತ್ಪಾದನೆ ಮತ್ತು ಪೂರೈಕೆ ಮಾಡುವ ದೇಶವಾಗಿದೆ' ಎಂದರು.`ಹಾಲಿವುಡ್ ನಟಿ ಮಿಲಾ ಕುನೀಸ್ ಜಾಗತಿಕ ರಾಯಭಾರಿ ಆಗಿದ್ದಾರೆ. ವಿಶ್ವದ ಅತ್ಯಂತ ಮುಂಚೂಣಿಯ ಬಣ್ಣದ ಹರಳುಗಳ ಉತ್ಪಾದಕವಾಗಿರುವ ಕಂಪೆನಿಯು ಝಾಂಬಿಯಾ, ಮೊಝಾಂಬಿಕ್, ಮಡಗಾಸ್ಕರ್, ಭಾರತ, ಬ್ರಿಟನ್, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕಾರ್ಯ ನಿರ್ವಹಣೆಯನ್ನು ಹೊಂದಿದೆ' ಎಂದು ಹೇಳಿದರು.

ಪ್ರತಿಕ್ರಿಯಿಸಿ (+)