`ಜೆಮ್‌ಷೆಡ್‌ಪುರ ಮಾದರಿ ಅಭಿವೃದ್ಧಿ'

7
ಟಾಟಾ ಸ್ಟೀಲ್ ಕಂಪೆನಿಯ ಉಪಾಧ್ಯಕ್ಷ ಪಾರ್ಥಸೇನ ಗುಪ್ತಾ ಭರವಸೆ

`ಜೆಮ್‌ಷೆಡ್‌ಪುರ ಮಾದರಿ ಅಭಿವೃದ್ಧಿ'

Published:
Updated:

ಹಾವೇರಿ: ಟಾಟಾ ಕಂಪೆನಿ ಜಿಲ್ಲೆಯಲ್ಲಿ ಟಾಟಾ ಸ್ಟೀಲ್ ಕಾರ್ಖಾನೆ ಪ್ರಾರಂಭಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದು, ಅದು ಸಾಕಾರವಾದರೆ, ಜೆಮ್‌ಶೆಡ್‌ಪುರ ಮಾದರಿಯಲ್ಲಿಯೇ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪೆನಿಯ ಉಪಾಧ್ಯಕ್ಷ ಪಾರ್ಥಸೇನಗುಪ್ತಾ ಹೇಳಿದರು.ತಾಲ್ಲೂಕಿನ ಟಾಟಾ ಮಣ್ಣೂರ ಗ್ರಾಮದಲ್ಲಿ ಟಾಟಾ ಸ್ಟೀಲ್ ಕಂಪೆನಿಯವರು ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಭಾಭವನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾರ್ಖಾನೆ ಸ್ಥಾಪಿಸುವುದರ ಜತೆಗೆ ಜಿಲ್ಲೆಯ ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡಲು ಕಂಪೆನಿ ಸಿದ್ಧವಿದೆ. ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಸೂಕ್ತ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮಣ್ಣೂರಲ್ಲಿ ನಿರ್ಮಿಸಲಾದ ನೂತನ ಶಾಲೆಗೆ ಅಗತ್ಯ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ಟಾಟಾ ಕಂಪೆನಿಯಿಂದಲೇ ಪೂರೈಸಲಾಗುವುದು ಎಂದು ತಿಳಿಸಿದರು.ಟಾಟಾ ಸ್ಟೀಲ್ ಕಂಪೆನಿ ಜೆಮ್‌ಷೆಡ್‌ಪುರದಲ್ಲಿ ಜನರಿಗೆ ಉದ್ಯೋಗ ಮತ್ತು ಉತ್ತಮ ಪರಿಸರ ಒದಗಿಸಿಕೊಡುವ ಮೂಲಕ ಸಾಕಷ್ಟು ಅಭಿವೃದ್ಧಿ ಮಾಡಿದೆ. ತನ್ನ ಲಾಭದಲ್ಲಿ ಕೆಲ ಭಾಗವನ್ನು ಸಮಾಜಕ್ಕೆ ನೀಡುವ ಕಂಪೆನಿ ಕಾರ್ಯ ಶ್ಲಾಘನೀಯ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಸದಾ ಪ್ರವಾಹದ ಭೀತಿ ಎದುರಿಸುತ್ತಿದ್ದ ಮಣ್ಣೂರ ಗ್ರಾಮವನ್ನು ದತ್ತು ಪಡೆದು 140 ಮನೆಗಳನ್ನು, ಶಾಲೆ, ಮೈದಾನ, ಸಭಾಭವನ ನಿರ್ಮಿಸಿಕೊಟ್ಟಿರುವ ಟಾಟಾ ಕಂಪೆನಿಯ ಸ್ಮರಣೀಯ ಕಾರ್ಯ ಮಾಡಿದೆ ಎಂದರು.ಪ್ರತಿ ಮಳೆಗಾಲದಲ್ಲಿ ಮಣ್ಣೂರ ಗ್ರಾಮಸ್ಥರು ತಮ್ಮ ಸಾಮಾನು ಸರಂಜಾಮುಗಳ ಜತೆ ಸ್ಥಳಾಂತರಗೊಂಡು ಪ್ರವಾಹ ಇಳಿದ ಮೇಲೆ ಮತ್ತೆ ಊರಿಗೆ ಮರಳಬೇಕಿತ್ತು. ಈಗ ಆ ಸಮಸ್ಯೆಗೆ ತೀಲಾಂಜಲಿ ಇಡುವಂತೆ ಗ್ರಾಮಸ್ಥರಿಗೆ ಶಾಶ್ವತ ಸೂರು ನಿರ್ಮಿಸಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಿರಹಟ್ಟಿ ಪಕ್ಕೀರಸ್ವಾಮಿ ಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ಹೊಸರಿತ್ತಿಯ ಗುದ್ದಲಿಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಉತ್ತರಖಂಡ ರಾಜ್ಯದ ಸ್ವಾಮಿರಾಮ ಆಶ್ರಮದ ಮಹಾಂತದೇವರು ಮಂಗಳಗಟ್ಟಿ ನೇತೃತ್ವ ವಹಿಸಿದ್ದರು.ತಾ.ಪಂ. ಅಧ್ಯಕ್ಷೆ ರಿಹಾನಚಾಂದ್ ಶೇಖ್, ಜಿ.ಪಂ. ಸದಸ್ಯರಾದ ಸಾವಿತ್ರಮ್ಮ ರಾಮನಗೌಡ್ರ, ಸುಮಾ ಏಕಬೋಟೆ, ಗ್ರಾ.ಪಂ. ಅಧ್ಯಕ್ಷ ಮಲ್ಲಣ್ಣ ಬಣಕಾರ, ಎಸ್‌ಡಿಎಂಸಿ ಅಧ್ಯಕ್ಷ ವಿ.ಬಿ. ಹೊಸಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಮಶೆಟ್ಟಿ, ಟಾಟಾ ಕಂಪೆನಿಯ ಸಂಜಯ್ ಪಟ್ನಾಯಕ, ಕಾಂಗ್ರೆಸ್ ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಸ್‌ಎಫ್‌ಎನ್ ಗಾಜಿಗೌಡ್ರ ಇತರರು ಇದ್ದರು.

ಟಾಟಾ ಸ್ಟೀಲ್‌ನ ಎಸ್.ಬಿ. ಕೊಲ್ಹಾರ ನಿರೂಪಿಸಿದರು.

 

`ರೈತರ ಭೂಮಿ ಒತ್ತಾಯದಿಂದ ಕಿತ್ತುಕೊಳ್ಳುವುದಿಲ್ಲ'

ಹಾವೇರಿ:
ಟಾಟಾ ಸ್ಟೀಲ್ ಕಾರ್ಖಾನೆ ನಿರ್ಮಾಣಕ್ಕೆ ರೈತರಿಂದ ಒತ್ತಾಯದಿಂದ ಭೂಮಿಯನ್ನು ಕಿತ್ತುಕೊಳ್ಳುವುದಿಲ್ಲ. ಸ್ವಯಂ ಪ್ರೇರಣೆಯಿಂದ ರೈತರು ಭೂಮಿ ನೀಡಿದರೆ ಮಾತ್ರ ಟಾಟಾ ಸ್ಟೀಲ್ ಕಾರ್ಖಾನೆ ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ ಎಂದು ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಕೊಠಡಿಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗಳಿಗೆ ನೀಡುವುದಿಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಈಗಾಗಲೇ ತಾವು ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪೆನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಂದಿದ್ದರೂ, ಕಾರ್ಖಾನೆ ಸ್ಥಾಪನೆಗೆ ತಮ್ಮ ಒಪ್ಪಿಗೆ ಇದೆ ಎಂದು ಅರ್ಥವಲ್ಲ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಖಾನೆಗೆ ಭೂಮಿ ನೀಡುವ ನಿರ್ಧರಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry