ಜೆಸಿಂತಾ ಸಾವು: ಆಸ್ಟ್ರೇಲಿಯಾ ಮಾಧ್ಯಮ ಸಂಸ್ಥೆ ತನಿಖೆ

7

ಜೆಸಿಂತಾ ಸಾವು: ಆಸ್ಟ್ರೇಲಿಯಾ ಮಾಧ್ಯಮ ಸಂಸ್ಥೆ ತನಿಖೆ

Published:
Updated:

ಮೆಲ್ಬರ್ನ್(ಪಿಟಿಐ): ಸಿಡ್ನಿ ಮೂಲದ ರೇಡಿಯೊ ಕೇಂದ್ರದ ನಿರೂಪಕರು ಮಾಡಿದ ಹುಸಿ ಕರೆಯಿಂದಾಗಿ ಮಂಗಳೂರು ಮೂಲದ ನರ್ಸ್ ಜೆಸಿಂತಾ ಲಂಡನ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಮಾಧ್ಯಮ ಕ್ಷೇತ್ರದ ನಿಯಂತ್ರಕ ಸಂಸ್ಥೆ ಗುರುವಾರ ತನಿಖೆ ಆರಂಭಿಸಿದೆ.ಆಸ್ಟ್ರೇಲಿಯಾದ ಮಾಧ್ಯಮ ಕ್ಷೇತ್ರದ ನಿಯಂತ್ರಕ ಎನಿಸಿರುವ ಸಂಪರ್ಕ ಹಾಗೂ ಮಾಧ್ಯಮ ಪ್ರಾಧಿಕಾರ ಸ್ವಯಂಪ್ರೇರಿತವಾಗಿ ಇಂತಹ ಅಪರೂಪದ ತನಿಖೆಗೆ ಮುಂದಾಗಿದೆ. ಸಾಮಾನ್ಯವಾಗಿ ಇಂತಹ ತನಿಖೆ ಕೈಗೊಳ್ಳಲು ಪ್ರಾಧಿಕಾರಕ್ಕೆ ದೂರು ನೀಡಬೇಕಾಗುತ್ತದೆ. ಆದರೆ ಜೆಸಿಂತಾ ಪ್ರಕರಣದಲ್ಲಿ ಯಾವುದೇ ದೂರು ಸಲ್ಲಿಕೆಯಾಗದಿದ್ದರೂ ಪ್ರಾಧಿಕಾರ ಸ್ವಯಂಪ್ರೇರಿತವಾಗಿ ಇದೀಗ ತನಿಖೆ ಆರಂಭಿಸಿರುವುದು ವಿಶೇಷ ಎನಿಸಿದೆ.ಜೆಸಿಂತಾ ಅವರಿಗೆ ಹುಸಿ ಕರೆ ಮಾಡಿದ `2ಡೆ ಎಫ್‌ಎಂ' ಸಂಸ್ಥೆ ತನಗೆ ನೀಡಿರುವ ಪರವಾನಗಿ ಅನ್ವಯವೇ ಕಾರ್ಯನಿರ್ವಹಿಸುತ್ತಿದೆಯೇ ಇಲ್ಲವೆ, ರೇಡಿಯೊ ಜಾಲದ ಕಾರ್ಯಕ್ರಮಗಳು ಸಭ್ಯತೆಯ ಗಡಿಯನ್ನು ಉಲ್ಲಂಘಿಸಿವೆಯೇ ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗುತ್ತದೆ ಎಂದು ಪ್ರಾಧಿಕಾರದ ವಕ್ತಾರರು ತಿಳಿಸಿದರು. ಆದರೆ ಕೈಗೊಳ್ಳಲಾದ ತನಿಖೆಯ ವಿವರಗಳನ್ನು ಮಾತ್ರ ಬಹಿರಂಗಗೊಳಿಸಿಲ್ಲ.ತನಿಖೆಯ ನಂತರ ರೇಡಿಯೊ ಕೇಂದ್ರ ಪರವಾನಗಿ ಕಟ್ಟುಪಾಡುಗಳನ್ನು ಉಲ್ಲಂಘಿಸಿದ್ದು ದೃಢಪಟ್ಟಲ್ಲಿ ಕೇಂದ್ರವು ತನ್ನ ಪ್ರಸಾರದ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಇಲ್ಲವೆ ಭಾರಿ ದಂಡ ತೆರಬೇಕಾಗುತ್ತದೆ. ಹುಸಿ ಕರೆ ಮಾಡಿದ ಇಬ್ಬರು ನಿರೂಪಕರು (ಡಿಜೆ), ಕೇಂದ್ರದ ನಿರ್ದೇಶಕ, ವ್ಯವಸ್ಥಾಪಕ ಮತ್ತಿತರ ಹಿರಿಯ ಸಿಬ್ಬಂದಿಯನ್ನು ಇದೀಗ ವಿಚಾರಣೆಗೆ ಒಳಪಡಿಸಲಾಗುತ್ತಿದೆ.ಸಂತಾಪ: ಈ ನಡುವೆ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಜೆಸಿಂತಾ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಬುಧವಾರ ಸಂಜೆ ಜೆಸಿಂತಾ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. `ಅವರು ತನ್ನ ವೃತ್ತಿಯನ್ನು ಅಪಾರವಾಗಿ ಪ್ರೀತಿಸುತ್ತ್ದ್ದಿದರು. ಅಲ್ಲದೆ ರೋಗಿಗಳ ಆರೋಗ್ಯದ ಬಗ್ಗೆ ಅಪಾರ ಕಾಳಜಿಯೂ ಅವರಿಗೆ ಇತ್ತು. ಆದರೆ ಈಗ ಆಗಿದ್ದೆಲ್ಲ ದುರಂತ. ಈ ಘಟನೆಯಿಂದ ಕೆಲ ಪಾಠ ಕಲಿಯಬೇಕಾಗಿದೆ' ಎಂದು ಕ್ಯಾಮರಾನ್ ಸಂಸತ್ತಿನಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry