ಜೆಸಿಂತಾ ಸಾವು: ಡಿಜೆಗಳಿಗೆ ಪಶ್ಚಾತ್ತಾಪ

7

ಜೆಸಿಂತಾ ಸಾವು: ಡಿಜೆಗಳಿಗೆ ಪಶ್ಚಾತ್ತಾಪ

Published:
Updated:
ಜೆಸಿಂತಾ ಸಾವು: ಡಿಜೆಗಳಿಗೆ ಪಶ್ಚಾತ್ತಾಪ

ಸಿಡ್ನಿ (ಪಿಟಿಐ): ಹುಸಿ ಕರೆ ಮೂಲಕ ಮಂಗಳೂರು ಮೂಲದ ನರ್ಸ್ ಜೆಸಿಂತಾ ಅವರ ನಿಗೂಢ ಸಾವಿಗೆ ಕಾರಣರಾದ ರೇಡಿಯೊ `2ಡೇ ಎಫ್‌ಎಂ'ನ ನಿರೂಪಕರಾದ (ಡಿಜೆ) ಮೆಲ್ ಗ್ರೇಗ್ ಮತ್ತು ಮೈಕೆಲ್ ಕ್ರಿಸ್ಟಿಯನ್, ಸೋಮವಾರ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.`ಜೆಸಿಂತಾ ಅವರ ಸಾವು ಅತ್ಯಂತ ನೋವಿನ, ಹೃದಯವಿದ್ರಾವಕ ಸಂಗತಿ' ಎಂದು ಕ್ರಿಶ್ಚಿಯನ್ ಹೇಳಿದ್ದರೆ, `ಇದೊಂದು ಕರುಳು ಹಿಂಡುವಂತಹ ಘಟನೆ' ಎಂದು ಮೈಕೆಲ್ ನುಡಿಯುವ ಮೂಲಕ ಈ ಸಾವಿಗೆ ಕಂಬನಿ ಮಿಡಿದಿದ್ದಾರೆ.ಆಸ್ಟ್ರೇಲಿಯಾದ `ಚಾನೆಲ್ ನೈನ್' ಮತ್ತು `ಸೆವೆನ್ ನೆಟ್‌ವರ್ಕ್' ಸುದ್ದಿವಾಹಿನಿ ನಡೆಸಿದ ಸಂದರ್ಶನದಲ್ಲಿ ಇವರಿಬ್ಬರೂ ಭಾಗವಹಿಸಿ `ಜೆಸಿಂತಾ ಅವರ ಕುಟುಂಬ ಮತ್ತು ಸ್ನೇಹಿತರ ದುಃಖದಲ್ಲಿ ನಾವೂ ಭಾಗಿ' ಎಂದು ಹೇಳಿದ್ದಾರೆ.`ಕಾರ್ಯಕ್ರಮದ ವೇಳೆ ಯಾರಿಗೂ ತೊಂದರೆಯಾಗದ ಈ ಹುಸಿಕರೆಯ ಉಪಾಯ ಹೊಳೆಯಿತು. ಆ ಸಮಯದಲ್ಲಿ ಇದೊಂದು ಮುಠ್ಠಾಳತನ ಎಂದೆನಿಸಿದರೂ, ನಂತರದ ಪರಿಣಾಮ ಅತ್ಯಂತ ಭಯಂಕರ' ಎಂದು ಸಂದರ್ಶಕಿ ಗ್ರಿಮ್‌ಶಾ ಕೇಳಿದ ಪ್ರಶ್ನೆಗೆ ಗ್ರೆಗ್ ಮತ್ತು ಕ್ರಿಶ್ಚಿಯನ್ ಪ್ರತಿಕ್ರಿಯಿಸಿದ್ದಾರೆ.ಡಿಜೆಗಳ ಪರ ರೇಡಿಯೊ(ಮೆಲ್ಬರ್ನ್ ವರದಿ):  ಆದರೆ ಆಸ್ಟ್ರೇಲಿಯಾದ ಎಫ್‌ಎಂ ಚಾನೆಲ್ ತನ್ನಿಬ್ಬರು ನಿರೂಪಕರ ಬೆಂಬಲಕ್ಕೆ ನಿಂತಿದೆ.`ಯುವರಾಣಿ ಗರ್ಭಿಣಿ ಕೇಟ್ ಆರೋಗ್ಯದ ಬಗ್ಗೆ ನರ್ಸ್ ನೀಡಿದ ಮಾಹಿತಿಯನ್ನು ಪ್ರಸಾರ ಮಾಡುವುದಕ್ಕೂ ಮುಂಚೆ, ಚಾನೆಲ್‌ನ ಸಿಬ್ಬಂದಿ ಕನಿಷ್ಠ ಐದು ಬಾರಿ ಆ ಆಸ್ಪತ್ರೆಯನ್ನು ಸಂಪರ್ಕಿಸಲು ಪ್ರಯತ್ನಿಸ್ದ್ದಿದರು' ಎಂದು ಅದು ಸಮರ್ಥಿಸಿಕೊಂಡಿದೆ.

ಗ್ರೆಗ್ ಮತ್ತು ಕ್ರಿಶ್ಚಿಯನ್ ಅವರು ರೇಡಿಯೊ ನಿಯಮಾವಳಿ ಪಾಲಿಸಿದ್ದಾರೆ' ಎಂದು ಹೇಳಿದೆ.  ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕ ಟೊನಿ ಅಬ್ಬೊಟ್, `ನಿರೂಪಕರ ಹುಸಿ ಕರೆ ಭಯಾನಕ ಪ್ರಮಾದ' ಎಂದು ಹೇಳಿದ್ದಾರೆ.ಈ ಮಧ್ಯೆ, ಘಟನೆ ಕುರಿತು ನ್ಯೂಸ್ ಲಿಮಿಟೆಡ್ ಸಂಸ್ಥೆ ನಡೆಸಿದ ಮತ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ 1/3 ರಷ್ಟು ಜನ ಅಂದರೆ 11 ಸಾವಿರಕ್ಕೂ ಹೆಚ್ಚು ಮಂದಿ, `ನಿರೂಪಕರನ್ನು ದೂಷಿಸಬಾರದು' ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಗ್ರೆಗ್ ಮತ್ತು ಕ್ರಿಸ್ಟಿಯನ್ ಬೆಂಬಲಕ್ಕೆ ನಿಂತಿದ್ದಾರೆ.ದೂರು ಸ್ವೀಕಾರ: ಸಂಪರ್ಕ ಮತ್ತು ಮಾಧ್ಯಮ ಪ್ರಾಧಿಕಾರ, ಹುಸಿ ಕರೆ ಕುರಿತು ದೂರು ಸ್ವೀಕರಿಸಿದೆ. ಅಲ್ಲದೆ, ಘಟನೆಯ ವಿಚಾರಣೆಯನ್ನು ಶೀಘ್ರಗತಿಯಲ್ಲಿ ಮುಗಿಸಲಿದೆ ಎಂದು ಆಸ್ಟ್ರೇಲಿಯಾದ ಸಂಪರ್ಕ ಖಾತೆ ಸಚಿವ ಸ್ಟಿಫನ್ ಕನೋರಿ ಸೋಮವಾರ ತಿಳಿಸಿದ್ದಾರೆ.ಸ್ಥಳೀಯ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿಗೆ ತಿಳಿಯದಂತೆ ಮಾತುಕತೆ ದಾಖಲಿಸಿಕೊಳ್ಳುವುದು ಮತ್ತು ಅದನ್ನು ಬಿತ್ತರಿಸುವುದು ಅಪರಾಧ.ಗಂಡನ ಕೋಪ: ಜೆಸಿಂತಾ ಅವರ ಪತಿ ಬೆನೆಡಿಕ್ಟ್ ಅವರು ರೇಡಿಯೊ ನಿರೂಪಕರ ವರ್ತನೆ ಬಗ್ಗೆ ಕೋಪೋದ್ರಿಕ್ತರಾಗಿದ್ದಾರೆ. ಈ ಪ್ರಕರಣವನ್ನು  ಕಿಂಗ್ ಎಡ್ವರ್ಡ್-7 ಆಸ್ಪತ್ರೆ ನಿರ್ವಹಿಸಿದ ರೀತಿಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಮಧ್ಯೆ ಆಸ್ಪತ್ರೆಯ ವಕೀಲರಾದ ಬಿರ್ಚಾಮ್ ಡೈಸನ್ ಬೆಲ್, `ಜೆಸಿಂತಾ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಆಸ್ಪತ್ರೆ ಯೋಚಿಸಿರಲಿಲ್ಲ. ಪ್ರಮಾದಕ್ಕಾಗಿ ಆಕೆಯನ್ನು ದೂರುವಂತಿಲ್ಲ ಎಂದೇ ಆಡಳಿತ ಮಂಡಳಿ ಭಾವಿಸಿತ್ತು ಮತ್ತು ಆಕೆಯ ಬೆಂಬಲಕ್ಕೆ ನಿಂತಿತ್ತು. ದಾದಿಯರ ತಂಡದಲ್ಲಿ ಆಕೆಯನ್ನು ಅತ್ಯಂತ ಕೌಶಲ್ಯವುಳ್ಳ ಸಿಬ್ಬಂದಿ ಎಂದೇ ಪರಿಗಣಿಸಲಾಗಿತ್ತು. ಆಕೆ ಹುಸಿ ಕರೆ ಮಾಡಿದವರ ಹುಚ್ಚಾಟಕ್ಕೆ ಬಲಿಯಾಗಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.ಈ ಘಟನೆಯಿಂದ ಯುವರಾಜ ವಿಲಿಯಂ ಹಾಗೂ ಕೇಟ್ ಇಬ್ಬರೂ ನೊಂದಿದ್ದಾರೆ ಎನ್ನಲಾಗಿದೆ. ಆದರೆ, ರಾಣಿಯ ಹೆಸರಿನಲ್ಲಿ ಹುಸಿ ಕರೆ ಮಾಡಿದ ಬಗ್ಗೆ ರಾಜ ಮನೆತನದವರು ಯಾವುದೇ ದೂರು ದಾಖಲಿಸಿಲ್ಲ.ಆಕೆಯದ್ದು ಲಜ್ಜೆಯ ಸ್ವಭಾವ

ಲಂಡನ್(ಪಿಟಿಐ)
: ಸಂಶಯಾಸ್ಪದವಾಗಿ ಮೃತಪಟ್ಟ ಮಂಗಳೂರು ಮೂಲದ ನರ್ಸ್ ಜೆಸಿಂತಾ `ತುಂಬ ಲಜ್ಜೆಯ ಸ್ವಭಾವದವಳಾಗಿದ್ದಳು' ಎಂದು ಅವರ ಸಹೋದರ ನವೀನ್ ಹೇಳಿದ್ದಾರೆ.`ಅಪ್ಪಟ ಕ್ಯಾಥೊಲಿಕ್ ಆಗಿದ್ದ ಆಕೆ ನ್ಯಾಯನಿಷ್ಠಳಾಗಿದ್ದಳು. ಈ ಘಟನೆಯಿಂದ ಆಕೆ ಆಘಾತಗೊಂಡಿದ್ದಳು' ಎಂದೂ ನವೀನ್ ತಿಳಿಸಿದ್ದಾರೆ.`ಗಟ್ಟಿ ಮನಸ್ಸಿನ ಜೆಸಿಂತಾ ಆತ್ಮಹತ್ಯೆಗೆ ಕಾರಣ ತಿಳಿಯುತ್ತಿಲ್ಲ' ಎಂದು ನಾದಿನಿ ಸೆಲಿನ್ ಬರ್ಬೋಜಾ ಹೇಳಿದ್ದಾರೆ.ನವದೆಹಲಿ ವರದಿ: `ಜೆಸಿಂತಾ ಸಾವು ತೀರ ನೋವಿನ ಸಂಗತಿ. ಈ ಪ್ರಕರಣದ ಹೆಚ್ಚಿನ ವಿವರಗಳು ನಮಗೆ ಲಭ್ಯವಾಗಿಲ್ಲ. ಅವರು ಸಾವು ಯಾಕೆ ಮತ್ತು ಹೇಗೆ ಆಯಿತು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದೇವೆ' ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಸೋಮವಾರ ಇಲ್ಲಿ ಹೇಳಿದ್ದಾರೆ.ಜೆಸಿಂತಾ ಅವರ ಶವವನ್ನು ಭಾರತಕ್ಕೆ ತಂದು, ಇಲ್ಲಿಯೇ ಅಂತ್ಯಸಂಸ್ಕಾರ ಮಾಡಲು ಸಹಕರಿಸುವಂತೆ ಆಕೆಯ ಪತಿಯಿಂದ ಈವರೆಗೆ ಯಾವುದೇ ಮನವಿ ಬಂದಿಲ್ಲ ಎಂದು ವಿದೇಶಾಂಗ ಖಾತೆ ಮೂಲಗಳು ತಿಳಿಸಿವೆ.ಹಿನ್ನೆಲೆ: ಜೆಸಿಂತಾ ಕೆಲಸ ಮಾಡುತ್ತಿದ್ದ ಲಂಡನ್‌ನ ಕಿಂಗ್ ಎಡ್ವರ್ಡ್-7 ಆಸ್ಪತ್ರೆಗೆ ಆಸ್ಟ್ರೇಲಿಯಾದ ರೇಡಿಯೊ ನಿರೂಪಕರು ಕರೆ ಮಾಡಿ ಯುವರಾಣಿ ಕೇಟ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.

ಸ್ವಾಗತಕಾರರ ವಿಭಾಗದವರು ಆ ಸಮಯದಲ್ಲಿ ಇಲ್ಲದ ಕಾರಣ ಕರೆಯನ್ನು ಜೆಸಿಂತಾ ಸ್ವೀಕರಿಸಿ, ಕೇಟ್ ಚಿಕಿತ್ಸೆ ಪಡೆಯುತ್ತಿದ್ದ ಕೋಣೆಗೆ  ವರ್ಗಾಯಿಸಿದ್ದರು. ಅಲ್ಲಿದ್ದ ನರ್ಸ್ ನೀಡಿದ ವಿವರಗಳೆಲ್ಲವನ್ನು ರೇಡಿಯೊ ಪ್ರಸಾರ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry