ಸೋಮವಾರ, ನವೆಂಬರ್ 18, 2019
28 °C

`ಜೆಸ್ಕಾಂನಿಂದ ಗ್ರಾಹಕರ ಲೂಟಿ'

Published:
Updated:

ರಾಯಚೂರು: ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿಯು ಗ್ರಾಹಕರನ್ನು ದಿವಾಳಿ ಎಬ್ಬಿಸಿ ಲೂಟಿ ಮಾಡುತ್ತಿದೆ. ಗುಣಮಟ್ಟದ ಸೇವೆ ದೊರಕಿಸುತ್ತಿಲ್ಲ. ಸುಧಾರಣೆಯಾಗುವ ಬದಲು ಕಾಮಗಾರಿ ಕಳಪೆಯಾಗಿದೆ. ಗ್ರಾಹಕರು ಮತ್ತು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಹಿತಾಸಕ್ತಿ ಕಡೆಗಣಿಸಿದೆ. ಕೂಡಲೇ ಸರಿಪಡಿಸಿ ಗ್ರಾಹಕರಿಗೆ ಉತ್ತಮ ಸೇವೆ ದೊರಕಿಸದೇ ಇದ್ದರೆ ಧರಣಿ ಮಾಡಲಾಗುವುದು ಎಂದು ವಿದ್ಯುತ್ ಗ್ರಾಹಕರ ವೇದಿಕೆಯ ವಲಯ ಅಧ್ಯಕ್ಷ ಎಸ್ ರಾಜಶೇಖರ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಅವರು, 2005-06ರಲ್ಲಿ ವ್ಯವಸ್ಥೆ ಸುಧಾರಣೆ ಹೆಸರಿನಲ್ಲಿ 13 ಕೋಟಿಯಷ್ಟು ಎಲ್ ಆ್ಯಂಡ್ ಟಿ ಕಂಪೆನಿಯಡಿ ಕಾಮಗಾರಿ ಕೈಗೊಂಡು ಕಳಪೆಯಾಗಿ ಮಾಡಲಾಗಿದೆ. 2004ರಲ್ಲಿ ಭೂಗತ ಕೇಬಲ್ ಅಳವಡಿಸುವ ನೆಪದಲ್ಲಿ ಗ್ರಾಹಕರಿಗೆ 5 ಸಾವಿರ ಹೊರೆ ಆಗುವಂತೆ, 2006-07ರಲ್ಲಿ ಗ್ರಾಹಕರ ಮನೆ ಹೊರಗೆ ಮೀಟರ್ ಅಳವಡಿಕೆ ಹೆಸರಿನಲ್ಲಿ 50 ಕೋಟಿ ಕರ್ಚು ಮಾಡಿರುವುದು ಗ್ರಾಹಕರಿಗೆ ಹೊರೆ ಆಗುವಂತೆ ಮಾಡಿದೆ ಎಂದು ಅರೋಪಿಸಿದರು.ಗ್ರಾಮೀಣ ಪ್ರದೇಶದ ರಾಜೀವಗಾಂಧಿ ವಿದ್ಯುದ್ದೀಕರಣ ಹೆಸರಿನಲ್ಲಿ ಕಾಮಗಾರಿ ಸರಿ ಆಗಿಲ್ಲ. ರೈತರಿಗೆ ಸ್ವ ಆರ್ಥಿಕ ಯೋಜನೆಯಡಿ ಪಂಪ್‌ಸೆಟ್‌ಗೆ ವಿದ್ಯುತ್ ಕಲ್ಪಿಸಲು ಹಣ ತುಂಬಿಸಿಕೊಂಡು 10 ವರ್ಷಗಳಾದರೂ ಅನೇಕರಿಗೆ ಸರಿಯಾದ ಉಪಕರಣ ಕೊಟ್ಟಿಲ್ಲ. ಲೋಡ್‌ಶೆಡ್ಡಿಂಗ್ ಹಾವಳಿಗಿಂತ ಗ್ರಿಡ್ ಶೆಡ್ಡಿಂಗ್ ಹಾವಳಿ ಹೆಚ್ಚಾಗಿದೆ. ಶೇ 32ರಷ್ಟು ವಿದ್ಯುತ್ ಸೋರಿಕೆ ಹೆಸರಿನಲ್ಲಿ ಲೂಟಿ ಆಗುತ್ತಿದೆ. ಅದನ್ನು ಗ್ರಾಹಕರ ಮೇಲೆ ಹೊರಿಸಲಾಗುತ್ತಿದೆ   ಎಂದು ತಿಳಿಸಿದರು.ಜೆಸ್ಕಾಂ ಕಂಪೆನಿ ಅಕೌಂಟಿಂಗ್ ಬಿಲ್ಲಿಂಗ್ ಮಾಡಲು ಇನ್ಫೋಸಿಸ್ ಕಂಪೆನಿಗೆ ವಹಿಸಿದೆ. 3 ತಿಂಗಳಾದರೂ ವ್ಯವಸ್ಥೆ ಸುಧಾರಣೆ ಕಂಡಿಲ್ಲ. ವರ್ಗಾವಣೆಗೊಂಡ ಸಿಬ್ಬಂದಿ ಕೆಲವೇ ತಿಂಗಳಲ್ಲಿ ಮತ್ತೆ ಬರುತ್ತಾರೆ. ಗ್ರಾಹಕರ ಮತ್ತು ವಿದ್ಯುತ್ ಗುತ್ತಿಗೆದಾರರ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸಿದರು.ಜೆಸ್ಕಾಂ ಸಿಬ್ಬಂದಿ ಕೊರತೆ ನೀಗಿಸಬೇಕು, ಗ್ರಾಹಕರಿಗೆ ಬೇಗ ವಿದ್ಯುತ್ ಬಿಲ್ ಕೊಡಬೇಕು, ಅಕೌಂಟ್ಸ್ ವಿಭಾಗದ ಸಿಬ್ಬಂದಿ ಕಣ್ತಪ್ಪಿನಿಂದ ವಿದ್ಯುತ್ ಬಿಲ್ ಏರುಪೇರಾಗಿ ನೇರವಾಗಿ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗುವುದನ್ನು ತಪ್ಪಿಸಬೇಕು. ಗ್ರಾಹಕರಿಗೆ ತಕ್ಷಣ ವಿದ್ಯುತ್ ಬಿಲ್ ಕೊಡುವ ವ್ಯವಸ್ಥೆ ಆಗಬೇಕು, ಲೋಡ್‌ಶೆಡ್ಡಿಂಗ್ ಅವಧಿಯಲ್ಲಿ ತಪ್ಪದೇ ಮಾಧ್ಯಮದಲ್ಲಿ ಪತ್ರಿಕೆ ಹೇಳಿಕೆ ಕೊಡುವ ವ್ಯವಸ್ಥೆ ಮಾಡಬೇಕು, ಸೌಜನ್ಯ ಕೇಂದ್ರ ದೌರ್ಜನ್ಯ ಕೇಂದ್ರವಾಗದಂತೆ ನೋಡಿಕೊಳ್ಳಬೇಕು, ತುರ್ತು ಸೇವಾ ಕೇಂದ್ರವನ್ನು ಆಯಾ ವಾರ್ಡ್‌ಗಳಲ್ಲಿ ವಿದ್ಯುತ್ ಸೇವೆಗಾಗಿ ಹೊಸದಾಗಿ ಆರಂಭ ಮಾಡಬೇಕು.

ದೂರವಾಣಿ ಸಂಪರ್ಕ ವ್ಯವಸ್ಥೆ ಗ್ರಾಹಕರಿಗೆ ಮಾಡಬೇಕು ಎಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ ನರಸಿಂಹಲು ಗಾಜರಾಳ ಹೇಳಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎಂ ಶಿವಶಂಕರ್, ತಾಲ್ಲೂಕು ಅಧ್ಯಕ್ಷ ಶಾಮಸುಂದರ್, ಜಿಲ್ಲಾ ಖಜಾಂಚಿ ಸುದರ್ಶನ್  ಇದ್ದರು.

ಪ್ರತಿಕ್ರಿಯಿಸಿ (+)