ಜೆಸ್ಕಾಂ ಕಚೇರಿಗೆ ಮುತ್ತಿಗೆ

7

ಜೆಸ್ಕಾಂ ಕಚೇರಿಗೆ ಮುತ್ತಿಗೆ

Published:
Updated:

ಯಾದಗಿರಿ: ಗ್ರಾಮೀಣ ಪ್ರದೇಶಗಳಿಗೆ ಜೆಸ್ಕಾಂ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಹಲವಾರು ಗ್ರಾಮಗಳ ರೈತರು ಬುಧವಾರ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಬೆಳಿಗ್ಗೆ ಕ್ಯಾಸಪನಳ್ಳಿ, ಬಸವಂತಪೂರ, ಖಾನಳ್ಳಿ, ವಡ್ನಳ್ಳಿ, ವೆಂಕಟೇಶ ನಗರದ ನೂರಾರು ರೈತರು ಆಗಮಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಎಲ್ಲರೂ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಆಗಮಿಸಿದ್ದು ವಿಶೇಷವಾಗಿತ್ತು.ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಮುತ್ತಿಗೆ ಹಾಕಿದ ರೈತರು, ದುಬಾರಿ ಬೆಲೆಯ ಬೀಜ, ರಸಗೊಬ್ಬರ ಖರೀದಿಸಿ ಶೇಂಗಾ ಬಿತ್ತನೆ ಮಾಡಿದ್ದು, ಎರಡು ತಿಂಗಳು ಕಳೆದಿದೆ. ವಿದ್ಯುತ್ ಸಮಸ್ಯೆಯಿಂದ ಒಂದು ಬಾರಿಯಾದರೂ ಜಮೀನಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಬೆಳೆ ಒಣಗುತ್ತಿದೆ. ನಿತ್ಯ ಪರದಾಡುವಂತಾಗಿದೆ. ನಮ್ಮ ಕೈಯಲ್ಲಿರುವ ಬಡಿಗೆಯನ್ನು ತೆಗೆದುಕೊಂಡು ನಮಗೆ ಹೊಡೆದು ಸಾಯಿಸಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರಿ ರೈತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ ಜೆಸ್ಕಾಂ ಅಧಿಕಾರಿಗಳು, ಸೂಕ್ತ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾವುದು ಎಂದು ಸಮಜಾಯಿಸಿ ನೀಡಿದರು. ಆದರೆ ಸಮಾಧಾನವಾಗದ ರೈತರು, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮತ್ತೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ರೈತರನ್ನು ಭೇಟಿ ಮಾಡಿದ ಹೆಚ್ಚುವರಿ ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಯನ್ನು ಆಲಿಸಿ ಮನವಿ ಪಡೆದರು. ಜಿಲ್ಲಾಧಿಕಾರಿಗಳ ಗಮನಕ್ಕೆ ಕೂಡಲೇ ತರುವುದಾಗಿ ಭರವಸೆ ನೀಡಿದರು.ಕೆಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಖಂಡಪ್ಪ ದಾಸನ, ಸುರೇಶ ಬಸವಂತಪೂರ, ಶಾಂತರಡ್ಡಿ ವಡ್ನಳ್ಳಿ, ಅರ್ಜುನ ಚವ್ಹಾಣ, ವಿರುಪಣ್ಣಗೌಡ, ದೂಲಾ ಪವಾರ ಖಾನಳ್ಳಿ, ದೇವಿಂದ್ರಪ್ಪ ಅಲ್ಲಿಪೂರ ಸೇರಿದಂತೆ ನೂರಾರು ರೈತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry