ಶನಿವಾರ, ಏಪ್ರಿಲ್ 17, 2021
23 °C

ಜೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ:  ಹಲವು ದಿನಗಳಿಂದ ಗ್ರಾಮೀಣ ಭಾಗಕ್ಕೆ ಅಸಮರ್ಪಕ ರೀತಿಯಲ್ಲಿ ವಿದ್ಯುತ್ ಪೂರೈಸುತ್ತಿರುವುದನ್ನು ಖಂಡಿಸಿದ ತಾಲ್ಲೂಕಿನ ಮುಸ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದ ನಾಗರಿಕರು ಮತ್ತು ರೈತರು ಗುರುವಾರ ನಗರದ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ತುಂಗಭದ್ರಾ ನದಿ ತೀರದಲ್ಲಿರುವ ಗ್ರಾಮಗಳಾದ ಢಣಾಪುರ, ಅಯೋಧ್ಯ, ಮುಸ್ಟೂರು, ಮುಸ್ಟೂರು ಕ್ಯಾಂಪ್ ಮೊದಲಾದ ಗ್ರಾಮದ ಸಾರ್ವಜನಿಕರು ಹಾಗೂ ರೈತರು ಕಂಪ್ಲಿ ರಸ್ತೆಯಲ್ಲಿರುವ ಜೆಸ್ಕಾಂ ವಿದ್ಯುತ್ ವಿತರಣಾ ಕಚೇರಿಗೆ ಮುತ್ತಿಗೆ ಹಾಕಿದರು.  ಕಚೇರಿಯ ದ್ವಾರಕ್ಕೆ ತಮ್ಮ ದ್ವಿಚಕ್ರ ವಾಹನಗಳನ್ನು ಅಡ್ಡ ನಿಲ್ಲಿಸಿದ ರೈತರು ಬಳಿಕ ಕಚೇರಿಗೆ ನುಗ್ಗಿ ನಗರ ಮತ್ತಿತರ ಭಾಗಕ್ಕೆ ಸರಬರಾಜಾಗುತ್ತಿದ್ದ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದರು. ಕಚೇರಿಯ ಆಡಳಿತ ಕಾರ್ಯಾಲಯಕ್ಕೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಒಂದು ವಾರದಿಂದ ದಿನಕ್ಕೆ ಕನಿಷ್ಠ 3ರಿಂದ 4 ಗಂಟೆ ವಿದ್ಯುತ್ ಕೊಡುತ್ತಿಲ್ಲ. ನೀಡುವ ವಿದ್ಯುತ್ ಕೂಡ ಗುಣಮಟ್ಟ ಹೊಂದಿಲ್ಲ. ಹೀಗಾಗಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮಳೆಯಿಲ್ಲದೆ ಬೆಳೆ ಬೆಳೆಯದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.ಬೆಳಗ್ಗೆ 8ಕ್ಕೆ ರೈತರು ಆಗಮಿಸಿದ್ದಾರೆ. ಆದರೆ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ರೈತರಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ ಎಂದು ಆರೋಪಿಸಿದ ರೈತರು, ಕೆಲಕಾಲ ಗಂಗಾವತಿ-ಕಂಪ್ಲಿ ರಸ್ತೆ ಸಂಚಾರ ತಡೆ ಹಿಡಿದು ಪ್ರತಿಭಟನೆ ನಡೆಸಿದರು.ವಿವಿಧ ಗ್ರಾಮದ ಸತೀಶ, ಈರಪ್ಪ, ಸುರೇಶ, ಶ್ರೀನಿವಾಸ, ಬಸವನಗೌಡ, ಸಣ್ಣ ಲಿಂಗಪ್ಪ, ಶ್ರೀಧರ, ನಾಗೇಶ್ವರ ರಾವ್, ಅಯ್ಯಪ್ಪ, ಅಂಬಣ್ಣ, ಈಳಿಗೇರ ರಾಜಶೇಖರ, ಆದಿನಾರಾಯಣ, ದಾವಣಗೆರೆ ಸೀನು, ಅಯ್ಯಪ್ಪ, ನಂದೀಶ ಇತರರು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.