ಗುರುವಾರ , ಜನವರಿ 23, 2020
26 °C

ಜೇಕಬ್‌ ಹೊಸ ‘ಸವಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡೂವರೆ ವರ್ಷಗಳ ಅಂತರದ ಬಳಿಕ ಮತ್ತೆ ಬೆಳ್ಳಿಪರದೆಯಲ್ಲಿನ ಪ್ರಯೋಗ ಶುರುಮಾಡಿದ್ದಾರೆ ನಿರ್ದೇಶಕ ಜೇಕಬ್‌ ವರ್ಗೀಸ್‌. ‘ಸವಾರಿ’ ಮತ್ತು ‘ಪೃಥ್ವಿ’ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ವರ್ಗೀಸ್‌, ಮತ್ತೊಂದು ಹೊಸ ‘ಸವಾರಿ’ಗೆ ಚಾಲನೆ ನೀಡಿದ್ದಾರೆ. ಹಳೆಯ ಸವಾರಿಯ ಮುಂದುವರಿದ ಭಾಗ ಈ ಸ್ವಮೇಕ್‌ ‘ಸವಾರಿ’.ಮೊದಲ ಚಿತ್ರದಲ್ಲಿದ್ದ ತಾರಾಬಳಗದಲ್ಲಿ ಕೆಲ ಬದಲಾವಣೆಗಳನ್ನು ಅವರು ಮಾಡಿಕೊಂಡಿದ್ದಾರೆ. ರಘು ಮುಖರ್ಜಿ ಮತ್ತು ಕಮಲಿನಿ ಮುಖರ್ಜಿ ‘ಸವಾರಿ 2’ ಬಳಗದಲ್ಲಿಲ್ಲ. ‘ಗಾಳಿ ಸೀನ’ನಾಗಿ ನಟಿಸಿದ್ದ ಶ್ರೀನಗರ ಕಿಟ್ಟಿ, ಸವಾರಿಯ ಹೊಸ ಅವತರಣಿಕೆಯಲ್ಲಿಯೂ ಮುಂದುವರೆದಿದ್ದಾರೆ. ಕರಣ್‌ ರಾವ್‌ ಮತ್ತು ಗಿರೀಶ್‌ ಕಾರ್ನಾಡ್‌ ಅವರ ಜೊತೆಗೂಡಿದ್ದಾರೆ.‘ಸವಾರಿ 2’ನಲ್ಲಿ ವಿಶೇಷ ಪಾತ್ರವೊಂದಿದೆ. ಅದು ದೊಡ್ಡಬಳ್ಳಾಪುರದ ವಾಸುದೇವ ಎಂಬ ಹೆಸರಿನ ಕತ್ತೆ. ಚಿತ್ರದಲ್ಲಿ ಕತ್ತೆಯ ಪಾತ್ರ ಬಹುಮುಖ್ಯವಾಗಿದೆಯಂತೆ.ತಮ್ಮ ಎರಡನೇ ಸವಾರಿಗೆ ಜೇಕಬ್‌ ವರ್ಗೀಸ್‌ ಇಟ್ಟಿರುವ ಅಡಿಬರಹದ ಸಾಲು ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’. ‘ಸವಾರಿ’ಯಲ್ಲಿ ಸಾಯುವ ಕಿಟ್ಟಿ ಪಾತ್ರ ಮರುಹುಟ್ಟು ಪಡೆಯುವ ಬಗೆ ರೋಚಕವಾಗಿರುತ್ತದೆಯಂತೆ. ರಘುಮುಖರ್ಜಿ ಮತ್ತು ಕಿಟ್ಟಿ ಬೈಕ್‌ನಲ್ಲಿ ಸವಾರಿ ಮಾಡಿದ್ದರೆ, ಇಲ್ಲಿ ಕಿಟ್ಟಿ, ಕರಣ್‌ರಾವ್‌ ಮತ್ತು ಗಿರೀಶ್‌ ಕಾರ್ನಾಡ್‌ ಅವರೊಂದಿಗೆ ಕಾರ್‌ನಲ್ಲಿ ಸವಾರಿ ಹೊರಡಲಿದ್ದಾರೆ. ಅಂದಹಾಗೆ, ವರ್ಗೀಸ್‌ ಅವರದಿಲ್ಲಿ ಬಹುಪಾತ್ರ. ಕಥೆ, ಚಿತ್ರಕಥೆ, ನಿರ್ದೇಶನದ ಜೊತೆಗೆ ಬಂಡವಾಳವನ್ನೂ ಹೂಡುವ ಹೊಣೆಯನ್ನು ಸಹ ಅವರೇ ಹೊತ್ತುಕೊಂಡಿದ್ದಾರೆ.ಬ್ರಿಸ್ಟನ್‌ನಲ್ಲಿ ಅಭಿನಯ ತರಬೇತಿ ಪಡೆದಿರುವ ಕರಣ್‌ರಾವ್‌ಗೆ ಇದು ಚೊಚ್ಚಿಲ ಚಿತ್ರ. ಮಂಜುಮಾಂಡವ್ಯ ಸಂಭಾಷಣೆ, ಮಣಿಕಾಂತ್‌ ಕದ್ರಿ ಸಂಗೀತ ಮತ್ತು ಶಶಿಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ಚಿಕ್ಕಮಗಳೂರು, ಕೆಮ್ಮಣ್ಣುಗುಂಡಿ, ಮಂಗಳೂರುಗಳಲ್ಲಿ ಚಿತ್ರೀಕರಣ ನಡೆಸುವ ಉದ್ದೇಶ ಹಾಕಿಕೊಂಡಿರುವ ವರ್ಗೀಸ್‌ಗೆ ಏಪ್ರಿಲ್‌ ವೇಳೆಗೆ ಚಿತ್ರವನ್ನು ತೆರೆಗೆ ತರಬೇಕು ಎಂಬ ಗುರಿಯೂ ಇದೆ. ಸವಾರಿಗೆ ನಾಯಕಿಯ ಹುಡುಕಾಟದಲ್ಲಿದ್ದಾರೆ ಅವರು.

ಪ್ರತಿಕ್ರಿಯಿಸಿ (+)