ಗುರುವಾರ , ಮಾರ್ಚ್ 4, 2021
29 °C

ಜೇನ್ನೊಣಗಳ ಝೇಂಕಾರದಲ್ಲಿ ಈರುಳ್ಳಿ ಬೀಜೋತ್ಪಾ ದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇನ್ನೊಣಗಳ ಝೇಂಕಾರದಲ್ಲಿ ಈರುಳ್ಳಿ ಬೀಜೋತ್ಪಾ ದನೆ

ಸಂಡೂರು: ಗಣಿ ನಾಡು ಸಂಡೂರು ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯ ಹಾಗೆ ಈರುಳ್ಳಿ ಬೀಜೋತ್ಪಾದನೆಯೂ ಹೆಚ್ಚಾಗಿ ಕಂಡು ಬರುತ್ತಿದ್ದು, ಹೊಲಗಳಲ್ಲಿ ಬೀಜೋತ್ಪಾದನೆಗಾಗಿ ನಾಟಿ ಮಾಡಿದ ಈರುಳ್ಳಿ ಬೆಳೆ ಹೂಬಿಟ್ಟು ನಳನಳಿಸುತ್ತಿದೆ.ಈರುಳ್ಳಿಯನ್ನು ಬೆಳೆಯಲು ಮಡಿಗಳಲ್ಲಿ ಬೀಜಗಳನ್ನು ಹಾಕಿ, ಸಸಿ ಮಾಡಿ, ನಂತರದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಈರುಳ್ಳಿ ಬೀಜೋತ್ಪಾದನೆ ಮಾಡಬೇಕೆಂದರೆ, ಈರುಳ್ಳಿ ನೆಟ್ಟು ಬೀಜೋತ್ಪಾದನೆ ಮಾಡಬೇಕು.  ಈರುಳ್ಳಿ ಬೆಳೆ ಹೂಬಿಟ್ಟಿದೆ ಎಂದರೆ, ಬೀಜೋತ್ಪಾದನೆಗೆ ಬೆಳೆದ ಈರುಳ್ಳಿಯೆಂದೇ ಅರ್ಥ.ತಾಲ್ಲೂಕಿನ ಭುಜಂಗನಗರ, ಸಂಡೂರು, ಕೃಷ್ಣಾನಗರ, ಸುಶೀಲಾನಗರ, ತಾರಾನಗರ, ಲಕ್ಷ್ಮೀಪುರ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯ­ಲಾಗುತ್ತದೆ. ಕೆಲವರು ಹೊಲಗಳಲ್ಲಿಯ ಸ್ವಲ್ಪ ಭಾಗದಲ್ಲಿ ಬೀಜೋತ್ಪಾದನೆಗೆ ಈರುಳ್ಳಿ ನಾಟಿ ಮಾಡಿಕೊಂಡರೆ, ಕೆಲವರು ಮಾರಾಟಕ್ಕಾಗಿಯೇ ಈರುಳ್ಳಿ ಬೀಜೋತ್ಪಾದನೆಯಲ್ಲಿ ತೊಡಗಿದ್ದಾರೆ. ಬೆಳೆ, ಖರ್ಚು ಹಾಗೂ ಲಾಭ ಹೇಗೆ?: ಕೃಷ್ಣಾನಗರ ಗ್ರಾಮದ ತಮ್ಮ ಜಮೀನಿನಲ್ಲಿ ಈರುಳ್ಳಿ ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತ ಮೇಟಿ ಕಾಶೀನಾಥ ಅವರು ಈರುಳ್ಳಿ ಬೀಜೋತ್ಪಾದನೆ ಕುರಿತು ಪತ್ರಿಕೆ ಮಾಹಿತಿ ನೀಡಿದರು. ತಾವು ಹಿಂದಿನಿಂದಲೂ ಈರುಳ್ಳಿ ಬೀಜೋತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದೇವೆ. ಮುಂಗಾರು ಹಂಗಾಮಿನ ಬೆಳೆಯನ್ನು ತೆಗೆದುಕೊಂಡ ಕೂಡಲೆ, ಚೆನ್ನಾಗಿ ಒಣಗಿದ ಈರುಳ್ಳಿಯನ್ನು ಖರೀದಿಸಿ, ನಾಟಿ ಮಾಡುತ್ತೇವೆ. ನಾಟಿ ಮಾಡಿ  4 1/2 (ನಾಲ್ಕುವರೆ) ತಿಂಗಳಿಗೆ ಬೆಳೆ ಕಟಾವಿಗೆ ಬರುತ್ತದೆ. ಬೀಜಗಳನ್ನು ಬೇರ್ಪಡಿಸಿ, ಮಾರಾಟ ಮಾಡುತ್ತೇವೆ ಎನ್ನುತ್ತಾರೆ.ಈ ಬಾರಿ ಈರುಳ್ಳಿ ದುಬಾರಿ ಇದ್ದುದರಿಂದ ಎಕರೆಗೆ ಸುಮಾರು ₨80,000 ಸಾವಿರ ಖರ್ಚಾಗಿದೆ. ಇಲ್ಲಿನ ಭೂಗುಣ ಹಾಗೂ ಹವಾಗುಣ ಈರುಳ್ಳಿ ಕೃಷಿಗೆ ಪೂರಕವಾಗಿರುವುದರಿಂದ ಉತ್ತಮ ಬೆಳೆ ಬರುತ್ತದೆ. ಕಳೆದ ವರ್ಷ 2 ಎಕ್ಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೀಜಗಳಿಂದ ಖರ್ಚು ತೆಗೆದು ₨3 ಲಕ್ಷ ಲಾಭ ಬಂದಿದೆ. ಉತ್ತಮ ಬೆಳೆ ಮತ್ತು ಲಾಭ ಬರಬೇಕೆಂದರೆ, ಪ್ರಕೃತಿಯ ಸಹಕಾರವೂ ಅಗತ್ಯವಾಗಿದೆ.ಬಳ್ಳಾರಿ ರೆಡ್ ಎಂದೇ ಕರೆಯಲಾಗುವ ಸ್ಥಳೀಯ ಜವಾರಿ ಈರುಳ್ಳಿ ರುಚಿಗೆ ಹೆಸರಾಗಿದೆ. ಇಲ್ಲಿನ ಈರುಳ್ಳಿಗೆ ಹಾಗೂ ಈರುಳ್ಳಿ ಬೀಜಕ್ಕೆ ಉತ್ತಮ ಬೇಡಿಕೆ ಇದೆ. ಮುಧೋಳ ಹಾಗೂ ಬಾಗಲಕೋಟೆ ಕಡೆಯಿಂದ ವ್ಯಾಪಾರಸ್ಥರು ಬಂದು ಈರುಳ್ಳಿ ಬೀಜವನ್ನು ಖರೀದಿಸುತ್ತಾರೆ. ನೀರಾವರಿ ವ್ಯವಸ್ಥೆ ಇದ್ದರೆ, ಪ್ರಕೃತಿ ಸಹಕರಿಸಿದರೆ ಉತ್ತಮ ಬೆಳೆ ತೆಗೆಯಬಹುದು, ಮಾರುಕಟ್ಟೆ ವ್ಯವಸ್ಥೆ ಪೂರಕವಾಗಿದ್ದರೆ, ಉತ್ತಮ ಲಾಭವನ್ನು ಪಡೆಯಬಹುದೆನ್ನುತ್ತಾರೆ ರೈತ ಮೇಟಿ ಕಾಶೀನಾಥ.ಬೀಜ ಕಟ್ಟಲು ಸಹಕರಿಸುತ್ತಿರುವ ಜೇನ್ನೊಣಗಳು: ಒಂದು ರೀತಿಯಲ್ಲಿ ದುಂಡು ಮಲ್ಲಿಗೆಯ ಹಾಗೆ ಕಾಣುವ ಈರುಳ್ಳಿ ಹೂವಿನ ಗೊಂಚಲಿನ ಮೇಲೆ ಕೂತು ಮಕರಂದವನ್ನು ಹೀರುವ ಜೇನು ನೊಣಗಳು ಒಂದು ರೀತಿಯಲ್ಲಿ ರೈತ ಸ್ನೇಹಿ. ಈರುಳ್ಳಿ ಹೂಗಳು ಕಾಳು ಕಟ್ಟಲು ಜೇನು ನೊಣಗಳು ಸಹಕಾರಿಯಾಗಿವೆ.  ಹೊಲದಲ್ಲಿ ಜೇನು ನೊಣಗಳ ಝೇಂಕಾರವಿದ್ದರೂ, ರೈತರನ್ನು ಅವು ಕಚ್ಚುವುದಿಲ್ಲ ಎನ್ನುತ್ತಾರೆ ರೈತ ಮೇಟಿ ಕಾಶೀನಾಥ.

ವಿ.ಎಂ. ನಾಗಭೂಷಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.