ಜೇವರ್ಗಿ: ವಿಜೃಂಭಣೆಯ ಮಹಾಲಕ್ಷ್ಮಿ ಪರ್ವ
ಜೇವರ್ಗಿ: ಪಟ್ಟಣದ ಆರಾಧ್ಯ ದೈವ ಶ್ರೀ ಮಹಾಲಕ್ಷ್ಮಿ ದೇವತೆಯ ಪರ್ವ ಶುಕ್ರವಾರ ಭಕ್ತಸಾಗರದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಶತಮಾನದಿಂದ ಆಚರಿಸುತ್ತಾ ಬಂದಿರುವ ಪರ್ವ, ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿಸಿತ್ತು.
ಪಟ್ಟಣದಿಂದ ಮೂರು ಕಿಲೊ ಮೀಟರ್ ಅಂತರದಲ್ಲಿರುವ `ಆಯಿತಳ~, ಏಳು ಗ್ರಾಮ ಸೀಮೆಗಳ ಮಧ್ಯೆ ಇರುವ ಜಾಗೃತ ಸ್ಥಳ. ಅಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ಆಯಿತಳದಲ್ಲಿ ಜನಸಾಗರ ನೆರೆದಿತ್ತು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು, ಮಹಿಳೆಯರು ಆಯಿತಳಕ್ಕೆ ಆಗಮಿಸಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿ, ಉತ್ತಮ ಮಳೆ-ಬೆಳೆಗಾಗಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಅನೇಕ ಭಕ್ತರು ತಮ್ಮ ಹರಕೆ ತೀರಿಸಿದರು. ಜೇವರ್ಗಿ. ಜೇವರ್ಗಿ (ಕೆ), ಬುಟ್ನಾಳ, ರದ್ದೇವಾಡಗಿ, ಕಟ್ಟಿಸಂಗಾವಿ, ಚನ್ನೂರ ಮತ್ತಿತರ ಗ್ರಾಮಸ್ಥರು ಆಗಮಿಸಿ ಸರದಿಯಲ್ಲಿ ದರ್ಶನ ಪಡೆದರು. ಕೆಲವು ಜನ ದೇವಿಯ ಹರಕೆ ತೀರಿಸಲು ಕಾಲ್ನಡಿಗೆಯಲ್ಲಿ ಆಯಿತಳಕ್ಕೆ ಬಂದಿದ್ದರು.
ವಿಶೇಷ ಅಡುಗೆ ತಯಾರಿಸಿದ ಮಹಿಳೆಯರು ದೇವಿಗೆ ನೈವೇದ್ಯ ಅರ್ಪಿಸಿದ ನಂತರ ತಮ್ಮ ಬಂಧು, ಬಾಂಧವರೊಂದಿಗೆ ಆಯಿತಳದಲ್ಲಿ ಊಟ ಮಾಡಿದರು. ಸ್ಥಳಿಯ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಮಕ್ಕಳು, ಯುವಕರು ಬೆಳಿಗ್ಗೆಯಿಂದಲೇ ತಮ್ಮ ಸ್ನೇಹಿತರೊಂದಿಗೆ ಪರ್ವ ನಡೆಯುವ ಸ್ಥಳ ಆಯಿತಳಕ್ಕೆ ತೆರಳುತ್ತಿರುವುದು ಕಂಡುಬಂತು.
`ಆಯಿತಳ~ದಲ್ಲಿ ಸಣ್ಣ ಪ್ರಮಾಣದ ಜಾತ್ರೆ ನೆರವೇರಿತ್ತು. ಮಕ್ಕಳಿಗೆ ಆಟಿಕೆ ಸಾಮಾನುಗಳು, ತೆಂಗಿನಕಾಯಿ, ಕರ್ಪೂರ ಮೊದಲಾದ ಪೂಜಾ ವಸ್ತುಗಳ ಮಾರಾಟ ಜೋರಾಗಿತ್ತು.
ಭಕ್ತರಿಗೆ ಅನುಕೂಲವಾಗಲೆಂದು ಜೇವರ್ಗಿ-ಗುಲ್ಬರ್ಗ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಆಯಿತಳಕ್ಕೆ ತೆರಳಲು ಜೇವರ್ಗಿ ಸಾರಿಗೆ ಘಟಕದಿಂದ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ಟಂಟಂ, ಆಟೋ, ದ್ವಿಚಕ್ರವಾಹನ, ಸೈಕಲ್ಗಳ ಮೇಲೆ ಪರ್ವಕ್ಕೆ ಬಂದಿದ್ದರು.
ಪಟ್ಟಣದ ಜನತೆ ಆಯಿತಳಕ್ಕೆ ತೆರಳಿದ್ದರಿಂದ ಪಟ್ಟಣದಲ್ಲಿ ಜನರ ಸಂಚಾರ ವಿರಳವಾಗಿತ್ತು. ಮಹಾಲಕ್ಷ್ಮಿ ಟ್ರಸ್ಟ್ ಕಮಿಟಿ ಪರ್ವ ಯಶಸ್ಸಿಗೆ ಶ್ರಮಿಸಿತ್ತು. ಈ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.