ಮಂಗಳವಾರ, ಮೇ 24, 2022
30 °C

ಜೈನರಿಲ್ಲದ ಊರಲ್ಲೂ ತೀರ್ಥಂಕರರ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಊರಿನಲ್ಲಿ ಜೈನರಿಲ್ಲ. ಆದರೂ ಇಲ್ಲಿ `ಜಿನ್ನೀ~ ದೇವರಿಗೆ ಪೂಜೆ ನಡೆಯುತ್ತದೆ. ಊರ ಮುಂದಣ ಗುಡಿಯಲ್ಲಿನ ಈಶ್ವರನ ಲಿಂಗಕ್ಕೆ ಪೂಜೆಗೈದಂತೆ ಊರ ಮಧ್ಯದಲ್ಲಿರುವ ತೀರ್ಥಂಕರರ ಮೂರ್ತಿಯನ್ನೂ ಜನ ಪೂಜಿಸುತ್ತಾರೆ. ಇದು ಗದಗ ಜಿಲ್ಲೆ ಕಳಸಾಪುರ ಗ್ರಾಮದ ವಿಶೇಷ.ಗದಗಿನಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಕಳಸಾಪುರದಲ್ಲಿ ಕಪ್ಪು ಬಣ್ಣದ ಏಕ ಶಿಲೆಯಲ್ಲಿ ಕೆತ್ತಿದ ತೀರ್ಥಂಕರರ 15 ಅಡಿ ಎತ್ತರದ ಮೂರ್ತಿಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂಥ ಕಾಯೋತ್ಸರ್ಗ ಮೂರ್ತಿಗಳು ಅಪರೂಪವೇ. ಹೀಗಿರುವಾಗ ಹಳೆಯ ಕಾಲದ ಈ ವಿಗ್ರಹವನ್ನು ಗ್ರಾಮಸ್ಥರು ಕಾಳಜಿಯಿಂದ ಕಾಪಾಡಿಕೊಂಡು ಪೂಜೆ ಮಾಡುತ್ತಲೂ ಬಂದಿದ್ದಾರೆ.ಹಬ್ಬ-ಹರಿದಿನಗಳಂದು ಇಲ್ಲಿನ ಹಿಂದೂ ಭಕ್ತರು ಉಳಿದ ದೇವರುಗಳಂತೆ ಈ ಮೂರ್ತಿಗೂ ಪೂಜೆ ಸಲ್ಲಿಸುತ್ತಾರೆ. `ಎಲ್ಲ ದೇವರಂತೆ ಇದು ನಮ್ಮ ದೇವರೇ ಆಗಿದೆ. ನಮ್ಮೂರಿನಲ್ಲಿ ಯಾರೂ ಜೈನರಿಲ್ಲ. ಆದರೂ ಕಾಲದಿಂದಲೂ ಈ ಮೂರ್ತಿಯನ್ನು ಪೂಜಿಸುತ್ತಾ ಬಂದಿದ್ದೇವೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೊರಟೂರು ಮೊದಲಾದ ಭಾಗಗಳಿಂದ ಜೈನರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ~ ಎನ್ನುತ್ತಾರೆ ಗ್ರಾಮದ ಹಿರಿಯರಾದ ಎಚ್. ರಾಮನಗೌಡರ.ರಾಷ್ಟ್ರಕೂಟರ ಕಾಲದ್ದು

ಈ ಮೂರ್ತಿಯ ಪಕ್ಕಕ್ಕೆ ಹೊಂದಿಕೊಂಡಂತೆ ಶಾಸನವೊಂದಿದೆ. `ಈ ವಿಗ್ರಹವು ರಾಷ್ಟ್ರಕೂಟರ ಕಾಲದ್ದೆಂದು ಇಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ನಂತರ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೂರು ಆಳು ಎತ್ತರಕ್ಕೆ ಸಮನಾದ ಏಕಶಿಲಾ ತೀರ್ಥಂಕರ ಉತ್ತರ ಕರ್ನಾಟಕ ಭಾಗದಲ್ಲಿ ವಿರಳ~ ಎನ್ನುತ್ತಾರೆ ಗದುಗಿನ ಅ.ದ. ಕಟ್ಟಿಮನಿ.ಮಣ್ಣು-ಕಲ್ಲುಗಳ ಒಳಗೆ ಬೆರೆತು ಅದೃಶ್ಯವಾಗುವಂತಿದ್ದ ಈ ಮೂರ್ತಿಯ ಹಿನ್ನೆಲೆ, ಅದರ ಪ್ರಾಮುಖ್ಯತೆ  ಕುರಿತು ಎಸ್.ವಿ. ಪಾಟೀಲ ಎಂಬುವರು ದಶಕಗಳ ಹಿಂದೆ ಅಂದಿನ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ರಾಷ್ಟ್ರಪತಿಗಳು ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಪ್ರಾಚೀನ ವಿಗ್ರಹದ ರಕ್ಷಣೆಗೆ ಮುಂದಾಗಿತ್ತು. ದಿ. ಎಂ.ಪಿ. ಪ್ರಕಾಶ್ ಹಾಗೂ ಬಿ.ಟಿ. ಲಲಿತಾ ನಾಯಕ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗಳಾಗಿದ್ದ ಕಾಲದಲ್ಲಿ ಸರ್ಕಾರ ಈ ವಿಗ್ರಹದ ಸ್ಥಳವನ್ನು ಅಭಿವೃದ್ಧಿ ಪಡಿಸಿ, ಮಣ್ಣಿನ ಗುಡ್ಡದಲ್ಲಿದ್ದ ಮೂರ್ತಿಯನ್ನು ಶುಚಿಗೊಳಿಸಿ, ಸುತ್ತಲೂ ಕಲ್ಲಿನ ಕಟ್ಟೆ ನಿರ್ಮಿಸಿತು. ಪ್ರಾಚ್ಯ ವಸ್ತು ಇಲಾಖೆಯಿಂದ ಇದನ್ನು ಸ್ಮಾರಕವೆಂದು ಘೋಷಿಸಲಾಯಿತು ಎಂದು ಸ್ಥಳೀಯರು ನೆನೆಯುತ್ತಾರೆ.ಸದ್ಯ ಮಳೆ ಬಿಸಿಲಿನ ಹೊಡೆತಕ್ಕೆ ಸಿಕ್ಕಿರುವ ಈ ಮೂರ್ತಿಯ ಹಿಂಭಾಗ ಸೀಳಿನಿಂದ ಬಿರುಕು ಬಿಡತೊಡಗಿದೆ. ಅಲ್ಲದೆ ಸ್ಥಳಾಂತರದ ತರುವಾಯ ಬುನಾದಿ ಸಡಿಲಗೊಂಡಿದ್ದು, ಬೀಳುವ ಅಪಾಯವೂ ಇದೆ. ಹೀಗಾಗಿ ಇದಕ್ಕೊಂದು ಶಾಶ್ವತ ಸೂರು ಕಲ್ಪಿಸಿ ಎನ್ನುವುದು ಜನರ ಮೊರೆ.

ಚಿತ್ರ: ಬನೇಶ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.