ಜೈನ ಮುನಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

7

ಜೈನ ಮುನಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

Published:
Updated:
ಜೈನ ಮುನಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಬೆಳಗಾವಿ/ಹುಬ್ಬಳ್ಳಿ:  ಗುಜರಾತ್ ರಾಜ್ಯದ ಜುನಾಗಡದ ಗಿರಿನಾರ್ ಕ್ಷೇತ್ರದಲ್ಲಿ ಜೈನ ಮುನಿ ಪ್ರಬಲ ಸಾಗರ್ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ಜಿಲ್ಲಾ ಜೈನ ಸಮಾಜದ ಸದಸ್ಯರು ನಗರ, ಚಿಕ್ಕೋಡಿ ಮತ್ತು ಹುಬ್ಬಳ್ಳಿಯಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.ಬೆಳಗಾವಿ ನಗರದ ಚಿಕ್ಕ ಬಸದಿಯಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಪ್ರತಿಭಟನಾಕಾರರು, ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಚಿಕ್ಕೋಡಿಯಲ್ಲಿ ಮೌನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಸವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಘಟನೆಗೆ ಕಾರಣರಾದತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಚಿಕ್ಕೋಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸುಮಾರು ಎರಡು ಸಾವಿರ ಜೈನ ಬಾಂಧವರು ಕಪ್ಪು ಪಟ್ಟಿ ಧರಿಸಿ ಪಟ್ಟಣದ ಬಸ್‌ನಿಲ್ದಾಣ ಬಳಿಯಿರುವ ಮಹಾವೀರ ಕೀರ್ತಿಸ್ತಂಭದಿಂದ ಕೆ.ಸಿ. ರಸ್ತೆ ಮೂಲಕ ಬಸವ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿದರು. ಉಪ ವಿಭಾಗಾಧಿಕಾರಿ ಡಾ. ರುದ್ರೇಶ ಗಾಳಿ ಅವರ ಮೂಲಕ ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಹುಬ್ಬಳ್ಳಿಯಲ್ಲಿಯೂ ವಿವಿಧ ಜೈನ ಸಂಘಟನೆಗಳ ಸದಸ್ಯರು ಶುಕ್ರವಾರ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.  ನಂತರ ಶಿರಸ್ತೇದಾರರಿಗೆ ಮನವಿ ಸಲ್ಲಿಸಿದರು. ವರೂರು ಕ್ಷೇತ್ರದ ಧರ್ಮಸೇನ ಭಟ್ಟಾರಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಿಗಂಬರ ಜೈನ ಸಮಾಜದ ಅಧ್ಯಕ್ಷ ಮಹಾವೀರ ಎನ್. ಸೂಜಿ, ಉಪಾಧ್ಯಕ್ಷ ಶಾಂತಿನಾಥ ಕೆ. ಹೋತಪೇಟಿ, ಪ್ರಧಾನ ಕಾರ್ಯದರ್ಶಿ ಆರ್.ಟಿ.ತವನಪ್ಪನವರ, ಕಾರ್ಯದರ್ಶಿ ವಿಮಲಕೀರ್ತಿ ಎನ್.ತಾಳಿಕೋಟಿ ಪಾಲ್ಗೊಂಡಿದ್ದರು.

ಜೈನ ಮುನಿಗಳಿಗೆ ರಕ್ಷಣೆಗೆ ಆಗ್ರಹ

ಬೆಂಗಳೂರು:
`ಕಾಲ್ನಡಿಗೆಯಲ್ಲಿ ದೇಶ ಸಂಚಾರ ಮಾಡುವ ಜೈನ ಮುನಿಗಳ ಮೇಲೆ ಆಕ್ರಮಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಮುನಿಗಳಿಗೆ ಸೂಕ್ತ ರಕ್ಷಣೆ ಕೊಡುವ ಜೊತೆಗೆ ಇಂತಹ ಆಕ್ರಮಣ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು' ಎಂದು ಕರ್ನಾಟಕ ಜೈನ ಸಂಸ್ಥೆಯು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಒತ್ತಾಯಿಸಿದೆ.

ಈ ವಿಷಯವಾಗಿ ಸಂಘದ ಅಧ್ಯಕ್ಷ ಎಸ್. ಜಿತೇಂದ್ರಕುಮಾರ್, ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

`ಹೊಸ ವರ್ಷದ ಮೊದಲ ದಿನವೇ ಗುಜರಾತ್ ರಾಜ್ಯದ ಗಿರಿನಾರ್ ಬೆಟ್ಟದ ಮೇಲೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಪ್ರಬಲಸಾಗರ ಸ್ವಾಮೀಜಿ ಅವರಿಗೆ ಚೂರಿಯಿಂದ ಇರಿಯಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಿಂದ ನಮಗೆ ಆತಂಕವಾಗಿದೆ' ಎಂದು ತಿಳಿಸಿದ್ದಾರೆ.`ಕೆಲ ವರ್ಷಗಳ ಹಿಂದೆ ಮೂರು ದಿನಗಳ ಅವಧಿಯಲ್ಲಿ 10 ಅಪಘಾತಗಳು ಸಂಭವಿಸಿ, ಹಲವು ಜೈನ ಸ್ವಾಮೀಜಿಗಳು ಸಾವನ್ನಪ್ಪಿದ್ದರು. ಈ ಘಟನೆಗಳು ಕೇವಲ ಕಾಕತಾಳೀಯ ಎನ್ನುವುದನ್ನು ಒಪ್ಪಲು ಜೈನ ಸಮುದಾಯ ಸಿದ್ಧವಿಲ್ಲ. ನಂತರದ ದಿನಗಳಲ್ಲೂ ಇಂತಹ ಘಟನೆಗಳು ನಡೆಯುತ್ತಲೇ ಇವೆ' ಎಂದು ನೋವು ತೋಡಿಕೊಂಡಿದ್ದಾರೆ.`ಜೈನ ಮುನಿಗಳ ಮೇಲಿನ ಆಕ್ರಮಣ ಪ್ರಕರಣಗಳ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಬೇಕು ಮತ್ತು ಕಾಲ್ನಡಿಗೆಯಲ್ಲಿ ಸಾಗುವ ಮುನಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಮೂಲಕ ಆದೇಶ ಹೊರಡಿಸಬೇಕು' ಎಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದ್ದಾರೆ.

ಅಪಘಾತ: ಜೈನ ಯಾತ್ರಾರ್ಥಿ ಸಾವು

ಶಿರಾ:  ಜೈನಮುನಿಗಳ ಜೊತೆಗೆ ಗುಜರಾತ್‌ನ ಭಾವನಗರಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಯಾತ್ರಾರ್ಥಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರು ನಿವಾಸಿ ಸುಕರಾಜ್ ಜೈನ್ (62) ಮೃತಪಟ್ಟವರು. ಮೃತರು ಬೆಂಗಳೂರಿನಿಂದ ಪಾದಯಾತ್ರೆಯಲ್ಲಿ ಆಗಮಿಸಿದ್ದು, ತಾಲ್ಲೂಕಿನ ಎಮ್ಮೆರಹಳ್ಳಿಯಲ್ಲಿ ಶುಕ್ರವಾರ ರಾತ್ರಿ ತಂಗಿದ್ದರು.

ತಾವರೇಕೆರೆಯಲ್ಲಿ ತಂಗಿದ್ದ ಜೈನಮುನಿಗಳನ್ನು ಕೂಡಿಕೊಳ್ಳಲು ಮುಂಜಾನೆ 6ಕ್ಕೆ ಪಾದಯಾತ್ರೆ ಆರಂಭಿಸಿ ಶಿರಾದ ಭವಾನಿ ನಗರದ ಎದುರಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಒಬ್ಬಂಟಿಯಾಗಿ ನಡೆದು ಹೋಗುತ್ತಿದ್ದು, ಅವರ ಹಿಂದೆಯೇ ನಡೆದು ಬರುತ್ತಿದ್ದ ಸುಮಾರು 50 ಜನರ ಯಾತ್ರಾರ್ಥಿಗಳ ತಂಡ ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸಲಿಲ್ಲ.ಆದರೆ ಪೊಲೀಸರು ಅಪಘಾತ ಸ್ಥಳಕ್ಕೆ ಧಾವಿಸಿ ಮೃತರ ಗುರುತಿನ ಚೀಟಿ ಪರಿಶೀಲಿಸಿದ ನಂತರ ಜೈನ ಯಾತ್ರಾರ್ಥಿ ಎಂಬುದು ಪತ್ತೆಯಾಗಿದೆ. ಮೃತರು ಬೆಂಗಳೂರು ಜುಮ್ಮ ಮಸೀದಿ ರಸ್ತೆಯ ನಿವಾಸಿಯಾಗಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮಂದರಗಿರಿಯಲ್ಲಿ ಜೈನ ವಿಗ್ರಹ ಭಗ್ನ

ತುಮಕೂರು:
  ಜೈನರ ಯಾತ್ರಾಸ್ಥಳ ತಾಲ್ಲೂಕಿನ ಮಂದರಗಿರಿ ಬೆಟ್ಟದ ಮೇಲಿರುವ ಮಾನ ಸ್ತಂಭದ ಚತುರ್ಮುಖ ವಿಗ್ರಹವನ್ನು ಕಿಡಿಗೇಡಿಗಳು ಒಡೆದು ಹಾಕಿರುವ ಘಟನೆ ಈಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಂದರಗಿರಿಯಲ್ಲಿ 28 ಅಡಿ ಎತ್ತರದ ಮಾನಸ್ತಂಭವಿದೆ. ಸ್ತಂಭದ ಮೇಲೆ ಚತುರ್ಮುಖ ಜೈನ ಮುನಿಗಳ ವಿಗ್ರಹ ಸ್ಥಾಪನೆ ಮಾಡಲಾಗಿತ್ತು. ಕಳೆದ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಸ್ತಂಭದ ಮೇಲೆ ಹತ್ತಿ ವಿಗ್ರಹ  ಭಗ್ನ ಮಾಡಿದ್ದಾರೆ. ಬುಧವಾರ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.ವಿಗ್ರಹ ಭಗ್ನಗೊಳಿಸಿದವರ ಸುಳಿವು ಪತ್ತೆಯಾಗಿಲ್ಲ. ಕಾರಣವೂ ತಿಳಿದು ಬಂದಿಲ್ಲ. ಇತರೆ ಯಾವುದೇ ವಿಗ್ರಹಗಳಿಗೆ ಹಾನಿ ಆಗಿಲ್ಲ ಎಂದು ತುಮಕೂರು ದಿಗಂಬರ ಜೈನ ಸಮಾಜದ ಅಧ್ಯಕ್ಷ ಡಿ.ಎಲ್. ಮಾಣಿಕ್‌ರಾಜ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry