ಮಂಗಳವಾರ, ಮಾರ್ಚ್ 2, 2021
31 °C
21ರಿಂದ 25ರವರೆಗೆ ಹಬ್ಬ

ಜೈಪುರ ಸಾಹಿತ್ಯ ಉತ್ಸವಕ್ಕೆ ಇಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ ಸಾಹಿತ್ಯ ಉತ್ಸವಕ್ಕೆ ಇಂದು ಚಾಲನೆ

ಜೈಪುರ (ಪಿಟಿಐ): ಪ್ರತಿಷ್ಠಿತ ಜೈಪುರ ಸಾಹಿತ್ಯೋತ್ಸವ ಗುರುವಾರ ಆರಂಭ ವಾಗಲಿದ್ದು ಕೆನಡಾದ ಕವಿ ಮತ್ತು ಕಾದಂಬರಿಕಾರ್ತಿ ಮಾರ್ಗರೆಟ್‌ ಅಟ್‌ವುಡ್‌, ಲೇಖಕ ರಸ್ಕಿನ್‌ ಬಾಂಡ್‌, ಅಮೆರಿಕದ ಪ್ರಸಿದ್ಧ ಛಾಯಾಗ್ರಾಹಕ ನೀಲ್‌ ಫರ್ಗ್ಯೂಸನ್‌, ಬ್ರಿಟನ್‌ನ ಸ್ಟೀಫನ್‌ ಫ್ರೈ ಮುಂತಾದವರು ಭಾಗವಹಿಸಲಿದ್ದಾರೆ.ಜಗತ್ತಿನ ಅತ್ಯಂತ ದೊಡ್ಡ ಸಾಹಿತ್ಯೋತ್ಸವಗಳಲ್ಲಿ ಒಂದಾದ ಜೈಪುರ ಸಾಹಿತ್ಯೋತ್ಸವ ಐದು ದಿನಗಳ ಕಾಲ ನಡೆಯಲಿದೆ. 2006ರಲ್ಲಿ ಆರಂಭಗೊಂಡಿರುವ ಈ ವಾರ್ಷಿಕ ಉತ್ಸವ 17ನೇ ಶತಮಾನದ ಡಿಗ್ಗಿ ಪ್ಯಾಲೇಸ್‌ನಲ್ಲಿ ನಡೆಯಲಿದೆ. 25ರಂದು ಸಮಾರೋಪಗೊಳ್ಳಲಿದೆ.ಆರಂಭಕ್ಕೆ ಮೊದಲೇ ವಿವಾದ: ಸಾಹಿತ್ಯೋತ್ಸವ ಆರಂಭವಾಗುವುದಕ್ಕೂ ಮೊದಲುವಿವಾದಕ್ಕೆ ಕಾರಣವಾಗಿದೆ. ಸಾಹಿತ್ಯೋತ್ಸವದ ಸ್ಥಳ ಬದಲಾಯಿಸಬೇಕು ಎಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಾಜಸ್ತಾನ ಹೈಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಸಾಹಿತ್ಯೋತ್ಸವಕ್ಕೆ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ವಾರದೊಳಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.ಭಾರಿ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿದ್ದು ಅದರಿಂದಾಗುವ ಸಂಚಾರ ದಟ್ಟಣೆಯ ಕಾರಣಕ್ಕೆ ಈ ಅರ್ಜಿ ಸಲ್ಲಿಸಲಾಗಿದೆ. ಕಳೆದ ವರ್ಷ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದಲ್ಲಿ ಜನ ಸೇರಿದ್ದರು. ಇದರಿಂದಾಗಿ ಸಂಘಟಕರು ಪ್ರವೇಶದ್ವಾರವನ್ನು ಬಂದ್ ಮಾಡಿದ್ದರು.ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಮಾಣದಲ್ಲಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಜೈಪುರ ಪೊಲೀಸ್‌ ಆಯುಕ್ತ ಶ್ರೀನಿವಾಸ ರಾವ್‌ ಜಂಗಾ ತಿಳಿಸಿದ್ದಾರೆ.ಅನಗತ್ಯ ವಿವಾದಗಳಿಗಿಂತ ಸಾಹಿತ್ಯಕ್ಕೆ ಹೆಚ್ಚಿನ ಗಮನ ದೊರೆಯಲಿ ಎಂದು ಆಶಿಸುತ್ತಿದ್ದೇವೆ ಎಂದು ಲೇಖಕ ಮತ್ತು ಸಾಹಿತ್ಯೋತ್ಸವದ ಸಹ ನಿರ್ದೇಶಕ ವಿಲಿಯಂ ಡಾಲ್‌ರಿಂಪಲ್‌ ಹೇಳಿದ್ದಾರೆ.ಈ ಬಾರಿ ಪ್ರಧಾನಿ ಅವರ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯಂ, ಇಸ್ರೇಲಿ ಲೇಖಕ ಡೇವಿಡ್‌ ಗ್ರಾಸ್‌ಮನ್‌, ಬೋಸ್ನಿಯಾ ಲೇಖಕ ಅಲೆಕ್ಸಾಂಡರ್‌ ಹೆಮನ್‌, ಐರ್ಲೆಂಡ್‌ ಲೇಖಕ ಕೋಮ್‌  ಟೊಯ್ಬಿನ್‌ ಮುಂತಾದವರು ಭಾಗವಹಿಸಲಿದ್ದಾರೆ.ಲೇಖಕರು ಮಾತ್ರವಲ್ಲದೆ, ವಿವಿಧ ಕ್ಷೇತ್ರಗಳ ತಜ್ಞರೂ ಭಾಗಿಯಾಗಲಿದ್ದಾರೆ. ಮಹಾತ್ಮ ಗಾಂಧಿ ಅವರ ಮೊಮ್ಮಗಳು ತಾರಾ ಗಾಂಧಿ ಚಟರ್ಜಿ, ಫ್ರಾನ್ಸ್‌ನ ಅರ್ಥಶಾಸ್ತ್ರಜ್ಞ ಥಾಮಸ್‌ ಪಿಕೆಟಿ, ಗೀತರಚನೆಕಾರರಾದ ಜಾವೇದ್‌ ಅಖ್ತರ್‌ ಮತ್ತು ಗುಲ್ಜಾರ್‌ ಮುಂತಾದವರು ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.ಕಾರ್ನಾಡ್‌ ಮಾತು

ಜನವರಿ 23ರಂದು ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರು ಇಂಗ್ಲಿಷ್‌ ಕೃತಿ ‘ಟೈಮ್‌ ಎಂಡ್‌ ದ ಇಂಡಿಯನ್‌ ಇಮ್ಯಾಜಿನೇಷನ್‌’ನ ಭಾಗಗಳನ್ನು ಓದಲಿದ್ದಾರೆ. ನಂತರ ಮೀರ್‌ ಮುಕ್ತಿಯಾರ್‌ ಅಲಿ ಅವರಿಂದ ಸೂಫಿ ಸಂಗೀತ ಕಾರ್ಯಕ್ರಮ ಇದೆ.

ಪುಸ್ತಕೋತ್ಸವ: ಜಗತ್ತಿನ ವಿವಿಧೆಡೆಯ ಪುಸ್ತಕ ಪ್ರಕಾಶಕರಿಗಾಗಿ ‘ಬುಕ್‌ ಮಾರ್ಕ್‌’ ಎಂಬ ಎರಡು ದಿನಗಳ ಸಮಾವೇಶ ನಡೆಯಲಿದೆ. ಇದು 21 ಮತ್ತು 22ರಂದು ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.