ಗುರುವಾರ , ಮೇ 13, 2021
16 °C
ಹಿಂಡಲಗಾ ಜೈಲಿನಿಂದ ಮುಂಬೈ ಉದ್ಯಮಿಗೆ ಬೆದರಿಕೆ ಕರೆ

ಜೈಲರ್ ಸೇರಿ ಒಂಬತ್ತು ಮಂದಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕರ್ತವ್ಯಲೋಪ ಆರೋಪದ ಮೇಲೆ ಹಿಂಡಲಗಾ ಕೇಂದ್ರ ಕಾರಾಗೃಹದ ಜೈಲರ್ ಸೇರಿದಂತೆ ಒಂಬತ್ತು ಸಿಬ್ಬಂದಿಯನ್ನು ಬಂದೀಖಾನೆ ಇಲಾಖೆ ಅಮಾನತುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ.ಹಿಂಡಲಗಾ ಜೈಲಿನಿಂದ ಮೊಬೈಲ್ ಮೂಲಕ ಮುಂಬೈ ರಿಯಲ್ ಎಸ್ಟೇಟ್ ಉದ್ಯಮಿ ರಾಜಾರಾಮ್ ಮಝಾವಕರ್ ಅವರಿಗೆ ಬೆದರಿಕೆ ಕರೆ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ.ಜೈಲರ್ ಅಶೋಕ ಭಜಂತ್ರಿ, ಮುಖ್ಯ ವಾರ್ಡನ್ ಕೆ.ಎನ್.ಬರ್ಕಾರ್, ವಾರ್ಡನ್‌ಗಳಾದ ಶಂಕರ ಬಾಂದ್ರೆ, ಶಿರೋಳ, ರಜಪೂತ್, ಮಗದುಮ್ ಅವರ ಹೆಸರುಗಳು ಗೊತ್ತಾಗಿದೆ. ಉಳಿದವರ ಹೆಸರುಗಳನ್ನು ಪಡೆಯಲು ಜೈಲಿನ ಅಧಿಕಾರಿಗಳನ್ನು ಸಂಪರ್ಕಿಸಿದರೂ ದೊರೆಯಲಿಲ್ಲ.ರಾಜಾರಾಮ್ ಅವರಿಗೆ ಬೆದರಿಕೆ ಕರೆ ಹೋದ ನಂತರ ಅವರ ಮೇಲೆ ಗುಂಡಿನ ದಾಳಿ ಸಹ ನಡೆದಿತ್ತು. ಅದೃಷ್ಟವಶಾತ್ ಅವರು ಪಾರಾಗಿದ್ದರು. ಈ ಬೆದರಿಕೆ ಕರೆಯ ಜಾಡು ಹಿಡಿದು ತನಿಖೆ ನಡೆಸಿದ  ಮುಂಬೈ ಪೊಲೀಸರಿಗೆ ಅದು ಬಂದದ್ದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಎಂಬುದು ಗೊತ್ತಾಯಿತು.ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳ ತಂಡ ಜೈಲಿಗೆ ಬಂದು ತನಿಖೆ ಸಹ ನಡೆಸಿತ್ತು. ಜೈಲಿನಲ್ಲಿರುವ ಛೋಟಾ ರಾಜನ್ ಸಹಚರ ಬಚ್ಚಾಖಾನ್ ಈ ಕರೆ ಮಾಡಿರಬಹುದು ಎಂದು ಶಂಕಿಸಲಾಗಿದೆ.`ಬೆದರಿಕೆ ಕರೆ ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು ಸಹಕಾರ ನೀಡುವಂತೆ ಕೋರಿದ್ದಾರೆ'  ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ. ಬಂದೀಖಾನೆ ಇಲಾಖೆಯ ಪೊಲೀಸ್ ಉಪ ಮಹಾನಿರೀಕ್ಷಕ ರವಿ ಗುರುವಾರ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ, ಸಿಬ್ಬಂದಿ ಅಮಾನತಿಗೆ ಶಿಫಾರಸು ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.