ಜೈಲಿಗೆ ಎಕ್ಸ್‌ರೇ ಅಳವಡಿಸಲು ಸೂಚನೆ

ಶುಕ್ರವಾರ, ಜೂಲೈ 19, 2019
23 °C

ಜೈಲಿಗೆ ಎಕ್ಸ್‌ರೇ ಅಳವಡಿಸಲು ಸೂಚನೆ

Published:
Updated:

ಧಾರವಾಡ: 400ಕ್ಕೂ ಅಧಿಕ ಕೈದಿಗಳಿರುವ ಇಲ್ಲಿನ ಕೇಂದ್ರ ಕಾರಾಗೃಹದ ದವಾಖಾನೆಯಲ್ಲಿ ಎಕ್ಸ್‌ರೇ ಯಂತ್ರ ಇಲ್ಲದೇ ಇರುವುದರಿಂದ ಕಾಯಿಲೆಯಾದ ಕೈದಿಗಳನ್ನು ಹೊರಗಡೆ ಕರೆದುಕೊಂಡು ಹೋಗಬೇಕಾಗಿದೆ. ಅದನ್ನು ತಪ್ಪಿಸಲು ಇಲ್ಲಿಯೇ ಎಕ್ಸ್‌ರೇ ಯಂತ್ರವನ್ನು ಖರೀದಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಚಂದ್ರಶೇಖರ ಹುನಗುಂದ ಕಾರಾಗೃಹ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶನಿವಾರ ಕಾರಾಗೃಹಕ್ಕೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿ, ಕೈದಿಗಳೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದ ಅವರು, `ತುರ್ತು ಪರಿಸ್ಥಿತಿಯಲ್ಲಿ ಕೈದಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದರೆ ಅಂಬುಲೆನ್ಸ್‌ನೊಂದಿಗೆ ತೆರಳಲು ಪೊಲೀಸ್ ಗಸ್ತು ವಾಹನವೂ ಬೇಕು.ಆದರೆ ಎಷ್ಟೋ ಸಂದರ್ಭದಲ್ಲಿ ಎಸ್ಕಾರ್ಟ್ ಇಲ್ಲದ್ದರಿಂದ ಕೈದಿಗಳನ್ನು ಕರೆದುಕೊಂಡು ಹೋಗುವುದೇ ಇಲ್ಲ. ಇದರಿಂದ ಲಾಕಪ್‌ಡೆತ್‌ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೋರ್ಟ್ ಕೊಟ್ಟ ಶಿಕ್ಷೆಯನ್ನು ಮಾತ್ರ ಅನುಭವಿಸಲು ಬಿಡಿ, ಅದರ ಜೊತೆಗೆ ನೀವೂ ಹೀಗೆ ವೈದ್ಯಕೀಯ ನಿರ್ಲಕ್ಷ್ಯ ತೋರಿ ಇನ್ನೊಂದು ಬಗೆಯ ಶಿಕ್ಷೆ ಕೊಡಬೇಡಿ' ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಜೈಲಿನ ಅಡುಗೆ ಕೊಠಡಿ, ಕೈದಿಗಳ ಬ್ಯಾರಕ್‌ಗಳಲ್ಲಿದ್ದ ಸ್ವಚ್ಛತೆಯನ್ನು ಕಂಡು ಹುನಗುಂದ ಅವರು ಸಮಾಧಾನಗೊಂಡರು. ಆದರೆ ಕೆಲ ಬ್ಯಾರಕ್‌ಗಳಲ್ಲಿ ಮಳೆಯಿಂದಾಗಿ ನೀರು ಸೋರಿದ್ದನ್ನು ರಿಪೇರಿ ಮಾಡಿಸಿ, ಬಣ್ಣ ಬಳಿಸುವಂತೆ ಸೂಚನೆ ನೀಡಿದರು.ಪಾಕ ಶಾಲೆ ಇರುವ ಕಟ್ಟಡದ ಎಡಬದಿಯಲ್ಲಿ ನೆಲ ತಗ್ಗು ಬಿದ್ದು ನೀರು ನಿಂತದ್ದನ್ನು ಗಮನಿಸಿ, ಅದನ್ನು ಮೆಟ್ಲಿಂಗ್ ಮಾಡಿಸಬೇಕು ಎಂದರು.ನಮ್ಮನ್ನ ಬಿಡುಗಡೆ ಮಾಡಿಸಿ: ವಿವಿಧ ಬ್ಯಾರಕ್‌ಗಳಲ್ಲಿರುವ ಕೈದಿಗಳು ತಮ್ಮನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿಸಬೇಕು ಎಂದು ಮೊರೆ ಇಟ್ಟರು.ಈ ಬಗ್ಗೆ ರಾಜ್ಯಪಾಲರು ಹಾಗೂ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕು. ಶಿಕ್ಷೆಯ ಆಧಾರದ ಮೇಲೆ ಎಷ್ಟು ವರ್ಷ ಸನ್ನಡತೆ ತೋರಿದ್ದಾರೆ ಎಂಬುದನ್ನು ಗಮನಿಸಿ ಬಿಡುಗಡೆ ಮಾಡುವ ಕ್ರಮ ಜಾರಿಗೆ ಬರಬೇಕು ಎಂದು ಸಲಹೆ ನೀಡಿದರು.ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಬಾದಾಮಿ ತಾಲ್ಲೂಕಿನ ಚಿಮ್ಮನಕಟ್ಟಿಯ ಜುಮ್ಮಣ್ಣ ಕಾಮಣ್ಣವರ ಎಂಬ ಕೈದಿ, `ನಮ್ಮ ತಾಯಿಯ ಸ್ಥಿತಿ ಚಿಂತಾಜನಕವಾಗಿದೆ. ಮನೆಯಲ್ಲಿ ಯಾರೋ ಕಳ್ಳತನ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಪೆರೋಲ್ ಮೇಲೆ ಹೋಗಬೇಕೆಂದರೂ ಬಾದಾಮಿ ಪೊಲೀಸರು ಒಪ್ಪುತ್ತಿಲ್ಲ. ಏಕೆ ಒಪ್ಪುತ್ತಿಲ್ಲ ಎಂಬ ಕಾರಣ ನೀಡುವಂತೆ ಕೋರಿದರೂ ಕಾರಾಗೃಹದ ಅಧಿಕಾರಿಗಳು ನನಗೆ ಮಾಹಿತಿ ನೀಡುತ್ತಿಲ್ಲ. ನೀವೇ ಏನಾದರೂ ಮಾಡಿ' ಎಂದು ಮನವಿ ಮಾಡಿದರು.ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಹುನಗುಂದ, `ಆಯೋಗಕ್ಕೆ ಬರುದ ದೂರುಗಳಲ್ಲದೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವರದಿಗಳನ್ನು ಪರಿಶೀಲಿಸಿ ಆಯೋಗ ಸ್ವತಃ ಪ್ರಕರಣಗಳನ್ನು ದಾಖಲಿಸುತ್ತದೆ.ಹಕ್ಕು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಯೋಗ ಶಿಫಾರಸ್ಸು ಮಾತ್ರ ಮಾಡುವ ಅಧಿಕಾರ ಹೊಂದಿದೆ. ಅವಶ್ಯವಿದ್ದಲ್ಲಿ ರಾಜ್ಯ ಹೈಕೋರ್ಟ್‌ನಿಂದ ಸರ್ಕಾರ ನಿರ್ದೇಶನ ನೀಡುವಂತೆ ಮಾಡುವ ಅವಕಾಶ ಆಯೋಗಕ್ಕಿದೆ' ಎಂದರು.`13,882 ಪ್ರಕರಣಗಳು ಬಾಕಿ'

ರಾಜ್ಯದಲ್ಲಿ ಆಯೋಗ ಅಸ್ತಿತ್ವಕ್ಕೆ ಬಂದ 2007ರ ಜುಲೈದಿಂದ 2013ರ ಮೇ ಅಂತ್ಯದವರೆಗೆ ಒಟ್ಟಾರೆ 40,058 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 26,176 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನೂ 13,882 ಪ್ರಕರಣಗಳು ಬಾಕಿ ಇವೆ.ಧಾರವಾಡ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ ಒಟ್ಟಾರೆ 1,042 ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ 725 ವಿಲೇವಾರಿಯಾಗಿದ್ದು, ಇನ್ನೂ 317 ಪ್ರಕರಣಗಳು ಬಾಕಿ ಇವೆ ಎಂದು ಚಂದ್ರಶೇಖರ ಹುನಗುಂದ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry