ಜೈಲಿಗೆ `ದೇವಮಾನವ'

7
ಪೊಲೀಸರಿಂದ ಶೀಘ್ರದಲ್ಲೇ ದೋಷಾರೋಪ ಪಟ್ಟಿ

ಜೈಲಿಗೆ `ದೇವಮಾನವ'

Published:
Updated:

ಜೋಧಪುರ (ಪಿಟಿಐ): ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ `ದೇವಮಾನವ' ಅಸಾರಾಮ್ ಬಾಪು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳಿಕ ಅವರನ್ನು ಜೋಧಪುರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು ಬ್ಯಾರಕ್ ಸಂಖ್ಯೆ 1ರಲ್ಲಿ ಇಡಲಾಗಿದೆ.ಶ್ವೇತವರ್ಣದ ಕುರ್ತಾ, ಪಂಚೆ ಮತ್ತು ತಲೆ ಮೇಲೆ ಕೆಂಪು ಬಣ್ಣದ ಟೋಫಿ ಧರಿಸಿದ್ದ 72 ವರ್ಷದ ಬಾಪು ಅವರನ್ನು ಬಿಗಿ ಭದ್ರತೆ ಮಧ್ಯೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಬಳಿಕ ಮ್ಯಾಜಿಸ್ಟ್ರೇಟ್ ಮನೋಜ್ ಕುಮಾರ್ ಅವರು, ಬಾಪು ಅವರನ್ನು ಸೆಪ್ಟೆಂಬರ್ 15ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.ಇದೇ ವೇಳೆ ಅಸಾರಾಮ್ ಪರ ವಕೀಲರು ಜಾಮೀನು ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಮಂಗಳವಾರ ಕೈಗೆತ್ತಿಗೊಳ್ಳುವ ಸಾಧ್ಯತೆ ಇದೆ. ಬಾಪು ಅವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಸುದ್ದಿ ತಿಳಿಯುತ್ತಲೇ ನ್ಯಾಯಾಲಯದ ಮುಂಭಾಗದಲ್ಲಿ ಜಮಾಯಿಸಿದ್ದ ಕೆಲವರು ಕೋರ್ಟ್ ತೀರ್ಪನ್ನು ಸ್ವಾಗತಿಸಿ ಘೋಷಣೆಗಳನ್ನು ಕೂಗಿದರು.  ನಾಲ್ಕು ಗಂಟೆ ವಿಚಾರಣೆ: ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಸೋಮವಾರ ಅವರನ್ನು ಭಾರಿ ಭದ್ರತೆಯಲ್ಲಿ ಪೊಲೀಸ್ ವ್ಯಾನ್‌ನಲ್ಲಿ ಕೋರ್ಟ್‌ಗೆ ಹಾಜರುಪಡಿಸಲಾಯಿತು. ದಾರಿಯುದ್ದಕ್ಕೂ ಪೊಲೀಸ್ ವಾಹನಗಳು ಅವರಿದ್ದ ವ್ಯಾನ್‌ಗೆ ಭದ್ರತೆ ಒದಗಿಸಿದ್ದವು. ಇದಕ್ಕೂ ಮೊದಲು ಬಾಪು ಅವರನ್ನು ಪೊಲೀಸರು ನಾಲ್ಕು ಗಂಟೆ ವಿಚಾರಣೆಗೆ ಒಳಪಡಿಸಿದರು.ಶನಿವಾರ ಮಧ್ಯರಾತ್ರಿ ಇಂದೋರ್ ಆಶ್ರಮದಲ್ಲಿ ಬಾಪು ಅವರನ್ನು ಬಂಧಿಸಿದ ರಾಜಸ್ತಾನದ ಪೊಲೀಸರು, ಭಾನುವಾರ ದೆಹಲಿ ಮಾರ್ಗವಾಗಿ ಜೋಧಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸ್ಥಳೀಯ ನ್ಯಾಯಾಲಯವು ಒಂದು ದಿನದ ಮಟ್ಟಿಗೆ ಬಾಪು ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.`ತನಿಖೆ ಪೂರ್ಣಗೊಂಡಿರುವುದರಿಂದ ಬಾಪು ಅವರ ಪೊಲೀಸ್ ಕಸ್ಟಡಿ ಅವಧಿ ವಿಸ್ತರಿಸುವಂತೆ ನ್ಯಾಯಾಲಯವನ್ನು ಕೋರಿರಲಿಲ್ಲ. ವಿಚಾರಣೆಗೆ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಈ ಪ್ರಕರಣವನ್ನು ಸಾಬೀತುಪಡಿಸಲು ಬೇಕಾದ ಅಗತ್ಯ ಸಾಕ್ಷ್ಯಧಾರಗಳು ನಮ್ಮ ಬಳಿ ಇವೆ. ನಾವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೇವೆ. ಪ್ರಕರಣದ ಸಂಬಂಧ ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು' ಎಂದು ಡಿಸಿಪಿ ಅಜಯ್ ಲಾಂಬಾ ಸುದ್ದಿಗಾರರಿಗೆ ತಿಳಿಸಿದ್ದಾರೆ.ದೃಢಪಟ್ಟ ಪುರುಷತ್ವ

`ಬಾಪು ಅವರು ನರಸಂಬಂಧಿ ತೊಂದರೆಯಿಂದ ಬಳಲುತ್ತಿದ್ದಾರೆ ಎನ್ನುವುದು ಸಂಪೂರ್ಣ ಸುಳ್ಳು ಎಂಬುದು ಈಗಾಗಲೇ ದೃಢಪಟ್ಟಿದೆ. ನಾವು ಬೇರೆಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸುವುದಿಲ್ಲ' ಎಂದು ಡಿಸಿಪಿ ಅಜಯ್ ಲಾಂಬಾ ಹೇಳಿದ್ದಾರೆ.

`ಬಾಪು ಅವರು ಸಂಪೂರ್ಣ ಆರೋಗ್ಯದಿಂದಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರುವುದಾಗಿ ಅವರನ್ನು ತಪಾಸಣೆ ನಡೆಸಿದ ವೈದ್ಯರ ತಂಡ ತಿಳಿಸಿದೆ. ಅವರು ಆಹಾರ ಕೂಡ ತೆಗೆದುಕೊಳ್ಳುತ್ತಿದ್ದಾರೆ. ಭಾನುವಾರ ಅವರನ್ನು ಇಲ್ಲಿನ ಎಸ್.ಎನ್. ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ಪುರುಷತ್ವ ದೃಢಪಟ್ಟಿದೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಜೋಧಪುರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಮನಾಯಿ ಆಶ್ರಮಕ್ಕೂ ಕರೆದೊಯ್ಯಲಾಗಿತ್ತು' ಎಂದು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry