ಶುಕ್ರವಾರ, ನವೆಂಬರ್ 22, 2019
22 °C

ಜೈಲಿಗೆ ಹೋದವರಿಗೆ ಬಿಜೆಪಿ ಟಿಕೆಟ್ ಇಲ್ಲ

Published:
Updated:

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ವೈ.ಸಂಪಂಗಿ, ನ್ಯಾಯಾಂಗ ಬಂಧನದಲ್ಲಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್ ನೀಡುವುದು ಬೇಡ ಎಂಬ ಸಂದೇಶ ಬಿಜೆಪಿ ರಾಷ್ಟ್ರೀಯ ನಾಯಕರಿಂದ ಬಂದಿದೆ. ಇದರಿಂದ ಕೆಜಿಎಫ್, ಹೆಬ್ಬಾಳ ಮತ್ತು ಮಾಲೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ರಾಜ್ಯ ಬಿಜೆಪಿ ಪಾಲಿಗೆ ಕಗ್ಗಂಟಾಗಿದೆ.`ಈ ಮೂವರಿಗೂ ಟಿಕೆಟ್ ನೀಡುವುದು ಬೇಡ ಎಂಬ ಸ್ಪಷ್ಟವಾದ ಸಂದೇಶವನ್ನು ಪಕ್ಷದ ಹಿರಿಯ ನಾಯಕರು ಕಳುಹಿಸಿದ್ದಾರೆ. ಜೈಲು ವಾಸ ಅನುಭವಿಸಿದವರಿಗೆ ಟಿಕೆಟ್ ನೀಡುವುದನ್ನು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಸ್ಪಷ್ಟವಾಗಿ ವಿರೋಧಿಸಿದ್ದಾರೆ' ಎಂದು ರಾಜ್ಯ ಬಿಜೆಪಿಯ ಮೂಲಗಳು ತಿಳಿಸಿವೆ.`ಮೂವರಿಗೂ ಟಿಕೆಟ್ ನಿರಾಕರಿಸಿ, ಬೇರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ತೀರಾ ಅನಿವಾರ್ಯ ಎಂದು ಕಂಡುಬಂದಲ್ಲಿ ಇದೇ ಮೂವರ ಕುರಿತು ಚರ್ಚೆ ನಡೆಸುವುದಾದಲ್ಲಿ ಅದಕ್ಕೂ ನಮ್ಮ ಅನುಮತಿ ಪಡೆಯಬೇಕು. ಚುನಾವಣೆಯಲ್ಲಿ ಪಕ್ಷ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಲು ಕಠಿಣ ನಿಲುವು ತಳೆಯಬೇಕು ಎಂದು ಈ ನಾಯಕರು ಪಕ್ಷದ ರಾಜ್ಯ ಘಟಕದ ಪ್ರಮುಖರಿಗೆ ನಿರ್ದೇಶನ ನೀಡಿದ್ದಾರೆ' ಎಂದು ಗೊತ್ತಾಗಿದೆ.ಬದಲಿ ಹೆಸರು ಸೂಚಿಸಲು ಸಲಹೆ: ರಾಷ್ಟ್ರೀಯ ನಾಯಕರ ಬಿಗಿ ನಿಲುವಿನಿಂದ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಬಿಜೆಪಿ ನಾಯಕರು, ಮೂವರು ಶಾಸಕರ ಜೊತೆಗೂ ಮಾತುಕತೆ ನಡೆಸಿದ್ದಾರೆ. `ಯಾವುದೇ ರೀತಿಯ ಗಂಭೀರ ಆರೋಪಗಳನ್ನು ಎದುರಿಸುತ್ತಿಲ್ಲದ ನಿಮ್ಮ ಕುಟುಂಬದ ಒಬ್ಬ ಸದಸ್ಯರ ಹೆಸರನ್ನು ನೀವೇ ಸೂಚಿಸಿ. ಇಲ್ಲವಾದರೆ, ನಿಮ್ಮ ಬೆಂಬಲಿಗರಲ್ಲಿ ಒಬ್ಬರ ಹೆಸರನ್ನು ಸೂಚಿಸಿ' ಎಂಬ ಸೂತ್ರವನ್ನು ಅವರ ಮುಂದೆ ಇರಿಸಿದ್ದಾರೆ.ಬಿಜೆಪಿ ಮೂಲಗಳ ಪ್ರಕಾರ, `ನನಗೆ ಟಿಕೆಟ್ ನೀಡಲು ಸಾಧ್ಯವೇ ಇಲ್ಲ ಎಂದಾದಲ್ಲಿ ನನ್ನ ತಾಯಿಗೆ ಟಿಕೆಟ್ ನೀಡಿ' ಎಂದು ಸಂಪಂಗಿ ಕೋರಿದ್ದಾರೆ. ಆದರೆ, ತಮಗೇ ಟಿಕೆಟ್ ನೀಡಬೇಕು ಎಂದು ಹಟ ಹಿಡಿದಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು,  ಕೃಷ್ಣಯ್ಯ ಶೆಟ್ಟಿ, ಈವರೆಗೂ ಪರ್ಯಾಯ ಹೆಸರನ್ನು ಸೂಚಿಸಿಲ್ಲ. ಇನ್ನೊಂದೆಡೆ ಟಿಕೆಟ್‌ಗಾಗಿ ಒತ್ತಡ ಹೇರುವುದನ್ನು ಮುಂದುವರಿಸಿದ್ದಾರೆ.ಶನಿವಾರ ಮೂರನೇ ಪಟ್ಟಿ: ಎರಡು ಹಂತಗಳಲ್ಲಿ 176 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಬಿಜೆಪಿಗೆ, ಉಳಿದ 48 ಕ್ಷೇತ್ರಗಳು ಕಬ್ಬಿಣದ ಕಡಲೆಯಾಗಿವೆ. ಶುಕ್ರವಾರ ಹುಬ್ಬಳ್ಳಿಯಲ್ಲಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಹಾವೇರಿ, ವಿಜಾಪುರ ಮತ್ತಿತರ ಜಿಲ್ಲೆಗಳಲ್ಲಿ ಹೆಚ್ಚು ಪೈಪೋಟಿ ಇರುವ ಕ್ಷೇತ್ರಗಳ ಆಕಾಂಕ್ಷಿಗಳ ಜೊತೆ ನೇರವಾಗಿ ಚರ್ಚೆ ನಡೆಸಿದ್ದಾರೆ.ಶನಿವಾರ ಬೆಳಿಗ್ಗೆ ಪಕ್ಷದ ರಾಜ್ಯ ಕಚೇರಿಯಲ್ಲಿ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ಮತ್ತಿತರರು ಸಭೆಯಲ್ಲಿ ಪಾಲ್ಗೊಳ್ಳುವರು. 30ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಸಭೆಯಲ್ಲಿ ಅಂತಿಮಗೊಳಿಸುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)