ಜೈಲಿನಲ್ಲಿ ಕೊಲೆ ಆರೋಪಿ ಸಾವು

7

ಜೈಲಿನಲ್ಲಿ ಕೊಲೆ ಆರೋಪಿ ಸಾವು

Published:
Updated:

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಕೊಲೆ ಪ್ರಕರಣವೊಂದರ ಆರೋಪಿ ನಂದೀಶ್ (22) ಎಂಬಾತ ಬುಧವಾರ ರಾತ್ರಿ ಸಾವನ್ನಪ್ಪಿದ್ದಾನೆ.ಪತ್ನಿಯನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಆವಲಹಳ್ಳಿ ಪೊಲೀಸರು ನಂದೀಶ್‌ನನ್ನು ಅ.7ರಂದು ಬಂಧಿಸಿದ್ದರು. ಹೊಸಕೋಟೆ ಬಳಿಯ ಗುಂಡೂರು ನಿವಾಸಿಯಾದ ಆತ ಕಾರು ಚಾಲಕನಾಗಿದ್ದ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.ನಂದೀಶ್ ಕಾರಾಗೃಹದ ಸೆಲ್‌ನಲ್ಲಿ ಬುಧವಾರ ಮಧ್ಯಾಹ್ನ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ. ಆತನನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಾತ್ರಿ ವೇಳೆಗೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟ. ಗುರುವಾರ ಆತನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಆತನ ಸಾವಿಗೆ ಕಾರಣ ಏನೆಂದು ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ಬಂದ ನಂತರ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪಘಾತ: ಸಾವು:
ವಿಜಯನಗರ ಬಳಿಯ ಪಟ್ಟೇಗಾರಪಾಳ್ಯ ಮುಖ್ಯರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಬೈಕ್ ಡಿಕ್ಕಿ ಹೊಡೆದು ನಂದೀಶ್‌ಕುಮಾರ್ (21) ಎಂಬುವರು ಮೃತಪಟ್ಟಿದ್ದಾರೆ.ವಿಜಯನಗರ ಸಮೀಪದ ಸರಸ್ವತಿನಗರ ನಿವಾಸಿಯಾದ ನಂದೀಶ್‌ಕುಮಾರ್, ಔಷಧ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಪಟ್ಟೇಗಾರಪಾಳ್ಯ ಮುಖ್ಯರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆಯಿತು. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಬೈಕ್ ಸವಾರ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ವಿಜಯನಗರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry