ಗುರುವಾರ , ಮಾರ್ಚ್ 4, 2021
30 °C
ಮೂರು ದಿನವಾದರೂ ಗುಣವಾಗದ ಮಹಾದಾಯಿ ಹೋರಾಟಗಾರರ ನೋವು; ವಿಮ್ಸ್‌ ಆಸ್ಪತ್ರೆಯಲ್ಲಿ ಸಂತ್ರಸರಿಗೆ ಚಿಕಿತ್ಸೆ

ಠಾಣೆಯಲ್ಲಿ ರೈತರಿಗೆ ಮತ್ತೆ ಥಳಿತ: ಐವರು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಠಾಣೆಯಲ್ಲಿ ರೈತರಿಗೆ ಮತ್ತೆ ಥಳಿತ: ಐವರು ಅಸ್ವಸ್ಥ

ಬಳ್ಳಾರಿ: ಮಹಾದಾಯಿ ಹೋರಾಟದ ವೇಳೆ ಬಂಧಿಸಲಾಗಿದ್ದ ಹೋರಾಟಗಾರರ ಪೈಕಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಐವರು ರೈತರು ಅಸ್ವಸ್ಥಗೊಂಡಿದ್ದಾರೆ. ಬಂಧಿಸಿದ ಬಳಿಕ ಠಾಣೆಯಲ್ಲಿ ಇಡೀ ರಾತ್ರಿ ಪೊಲೀಸರು ರೈತರನ್ನು ಮನಬಂದಂತೆ ಥಳಿಸಿದ್ದಾರೆ. ಮೈಮೇಲಿನ ಚರ್ಮ ಸುಲಿದಿದ್ದು, ಒಬ್ಬರ ಕೈಮುರಿದಿರುವ ಸಂಗತಿ ಇದೀಗ ಬಯಲಾಗಿದೆ.

ನವಲಗುಂದ ಗಲಭೆ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರುವವರ ಪೈಕಿ ಐವರ ಆರೋಗ್ಯದಲ್ಲಿ ಏರುಪೇರಾದ ಪರಿಣಾಮ ಅವರನ್ನು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ  ಪೊಲೀಸರು ಗುರುವಾರ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ಐವರ ಪೈಕಿ ನವಲಗುಂದ ತಾಲ್ಲೂಕಿನ ಅಳಗವಾಡಿಯ ಅಜ್ಜಪ್ಪ ಎಂಬುವವರ ಭುಜ ಮತ್ತು ಮೊಣಕಾಲಿನ ಚಲನೆಗೆ ತೊಂದರೆಯಾದ ಪರಿಣಾಮ ಎಕ್ಸ್‌ರೇ ತೆಗೆಸುವಂತೆ ವೈದ್ಯರು ಸಲಹೆ ನೀಡಿದ್ದರು.ಅವರೊಂದಿಗೆ, ಶಿವಾನಂದ, ಭರಮಗೌಡ್ರ, ವೆಂಕಟೇಶ್‌, ಶಂಕರ ಅವರೂ ಚಿಕಿತ್ಸೆ ಪಡೆದರು. ಶಂಕರ ಅವರ ಸೊಂಟದ ಮೇಲೆ ಲಾಠಿಯ ಏಟಿನಿಂದ ಚರ್ಮ ಸುಲಿದಿದ್ದು, ಅವರು ನಡೆದಾಡಲು, ಕುಳಿತುಕೊಳ್ಳಲು ಕಷ್ಟಪಡುತ್ತಿದ್ದು ಕಂಡುಬಂತು.‘ಪೊಲೀಸರ ಲಾಠಿ ಪ್ರಹಾರದಿಂದ ತಮಗೆ ಈ ಪರಿಸ್ಥಿತಿ ಬಂದಿದೆ’ ಎಂದು ಶಂಕರ್‌, ಅಜ್ಜಪ್ಪ, ವೆಂಕಟೇಶ್‌ ‘ಪ್ರಜಾವಾಣಿ’ಯೊಂದಿಗೆ ಸಂಕಟ ತೋಡಿಕೊಂಡರು.

ಹೋರಾಟ ನಡೆಸುತ್ತಿದ್ದ ವೇಳೆ ಲಾಠಿ ಏಟು ತಿಂದು ನಿತ್ರಾಣಗೊಂಡಿದ್ದೆವು. ನೀರು ಕುಡಿಯಲಾಗದೆ, ಊಟ ಸೇರದೆ ತೊಂದರೆ ಅನುಭವಿಸಿದ್ದು, ಕಳೆದೆರಡು ದಿನದಿಂದ ಊಟ ಮಾಡಿಲ್ಲ. ಲಾಠಿ ಏಟಿನ ನೋವು ತಾಳಲಾರದೆ ಚಿಕಿತ್ಸೆಗೆ ಬಂದಿದ್ದೇವೆ ಎಂದು ತಾವು ಅನುಭವಿಸಿದ ನೋವನ್ನು ಹಂಚಿಕೊಂಡರು.ಸಾಂತ್ವನದ ಕೇಂದ್ರವಾದ ಕಾರಾಗೃಹ: ನವಲಗುಂದ ಗಲಭೆ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ 149 ಮಂದಿಗೆ ಸಾಂತ್ವನ ಹೇಳಲು ಮುಖಂಡಲು ಸಾಲಾಗಿ ಬರುತ್ತಿದ್ದು, ಕಾರಾಗೃಹವು ಸಾಂತ್ವನದ ಕೇಂದ್ರವಾಗಿ ಮಾರ್ಪಟ್ಟಿದೆ.ಬುಧವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಕಳಸಾ ಹೋರಾಟಗಾರ ಗಿರೀಶ್‌ ಮಟ್ಟೆಣ್ಣವರ್‌ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ನೂರಾರು ಕಾರ್ಯಕರ್ತರು ನೆರೆದಿದ್ದರು.ಗುರುವಾರ ಬೆಳಿಗ್ಗೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ನಾಡಗೌಡ, ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ದೇಸಾಯಿ ಜಡಿಯಪ್ಪ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಭೇಟಿ ನೀಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.