ಭಾನುವಾರ, ಏಪ್ರಿಲ್ 18, 2021
31 °C

ಜೈಲಿನಲ್ಲೇ ಪರೀಕ್ಷಾ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಇನ್ನು ಮುಂದೆ ಕೈಗಳಿಗೆ ಕೋಳ ತೊಟ್ಟು ಪೊಲೀಸ್  ಬಿಗಿ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳುವುದು ತಪ್ಪಲಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕಾರಾಗೃಹ ಆವರಣದಲ್ಲೇ ಪರೀಕ್ಷಾ ಕೇಂದ್ರವನ್ನು ಆರಂಭಿಸುವ ಮೂಲಕ ಕೈದಿಗಳಿಗೆ ಕಾರಾಗೃಹದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಿದೆ.ಈ ಹಿಂದೆ ಮುಕ್ತ ವಿ.ವಿ. ಸೇರಿದಂತೆ ವಿವಿಧೆಡೆ ಪರೀಕ್ಷೆ ತೆಗೆದುಕೊಂಡ ಕೈದಿಗಳಿಗೆ ಕೋಳ ತೊಡಿಸಿ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿತ್ತು. ಇದರಿಂದ ಕೈದಿಗಳ ಮನಸ್ಸಿಗೆ ಬೇಸರವಾಗುತ್ತಿತ್ತು. ಕೆಲವರು ಪರೀಕ್ಷೆ ಬರೆಯುವುದನ್ನೇ ನಿಲ್ಲಿಸುತ್ತಿದ್ದರು. ಇದೀಗ ಕಾರಾಗೃಹ ದಲ್ಲೇ ಪರೀಕ್ಷೆ ಬರೆಯಬಹುದಾದ್ದರಿಂದ ಇಂತಹ ಸನ್ನಿವೇಶಗಳು ಇನ್ನು ಮುಂದೆ ನಗರದಲ್ಲಿ ಎದುರಾಗುವುದಿಲ್ಲ. ಕಾರಾಗೃಹ ಆವರಣದಲ್ಲಿ ಮುಕ್ತ ವಿ.ವಿ. ಈಗಾಗಲೇ ಅಧ್ಯಯನ ಕೇಂದ್ರ ತೆರೆದಿದ್ದು, ಮಹಿಳಾ ಮತ್ತು ಪುರುಷ ಕೈದಿಗಳು ಸೇರಿ 53 ಮಂದಿ ವಿವಿಧ ಕೋರ್ಸ್‌ಗಳಿಗೆ ಮಂಗಳವಾರ ಪ್ರವೇಶ ಪಡೆದರು.ಕೆಎಸ್‌ಓಯು ಕೇಂದ್ರ ಕಾರಾಗೃಹ ಅಧ್ಯಯನ ಕೇಂದ್ರದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮುಕ್ತ ವಿ.ವಿ. ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಪ್ರವೇಶಾತಿ ಪಡೆದ ಕೈದಿಗಳಾದ ಅನಿತಾ, ಮಹೇಶ್ ಮತ್ತು ಸಂತೋಷ್ ಅವರಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು.ಮುಕ್ತ ವಿ.ವಿ. ಕುಲಸಚಿವ ಜಯಪ್ರಕಾಶ್ ರಾವ್ ಅವರು ಮಾತನಾಡಿ, ‘ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲರಿಗೂ ಉನ್ನತ ಶಿಕ್ಷಣ ದೊರಕುವುದಿಲ್ಲ. ‘ಎಲ್ಲೆಡೆ-ಎಲ್ಲರಿಗೆ’ ಧ್ಯೇಯ ವಾಕ್ಯದೊಂದಿಗೆ ಮುಕ್ತ ವಿ.ವಿ. ದೂರ ಶಿಕ್ಷಣದ ಮೂಲಕ ಮನೆ ಬಾಗಿಲಿಗೆ ಶಿಕ್ಷಣವನ್ನು ಕೊಂಡೊಯ್ಯುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.ಕಾರಾಗೃಹ ಮುಖ್ಯ ಅಧೀಕ್ಷಕ ಟಿ.ಎಚ್.ಲಕ್ಷ್ಮಿನಾರಾಯಣ, ಅಧೀಕ್ಷಕ ರಮೇಶ್, ಮುಕ್ತ ವಿ.ವಿ. ಡೀನ್ (ಶೈಕ್ಷಣಿಕ) ಪ್ರೊ.ಜಗದೀಶ್, ಜೈಲರ್ ಜೋಗಯ್ಯ, ಡಿ.ಟಿ.ದೇವೇಗೌಡ, ನಾಲಾ ಬೀದಿ ರವಿ ಉಪಸ್ಥಿತರಿದ್ದರು. ಅಂತಃಕರಣ ಸಂಸ್ಥೆಯ ಮುಖ್ಯಸ್ಥರಾದ ನಂಜರಾಜೇ ಅರಸ್ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.