ಜೈಲಿನಲ್ಲೇ ಹತ್ಯೆಗೆ ಸಂಚು: ಸುಪಾರಿ ಪಡೆದವನ ಸೆರೆ

7

ಜೈಲಿನಲ್ಲೇ ಹತ್ಯೆಗೆ ಸಂಚು: ಸುಪಾರಿ ಪಡೆದವನ ಸೆರೆ

Published:
Updated:

ಗುಲ್ಬರ್ಗ: ಬೆಂಗಳೂರು ಬಳಿಯ ನೆಲಮಂಗಲದ ಕುಖ್ಯಾತ ರೌಡಿ ಬೆತ್ತನಗೆರೆ ಶೀನನನ್ನು ಗುಲ್ಬರ್ಗ ಜೈಲಿನಲ್ಲೇ ಕೊಲೆ ಮಾಡಲು 25 ಲಕ್ಷ ರೂಪಾಯಿ ಸುಪಾರಿ ಪಡೆದಿದ್ದ ರಾಯಚೂರು ಜಿಲ್ಲೆ ಲಿಂಗಸುಗೂರಿನ ಈರಣ್ಣ ಎಂಬಾತನನ್ನು   ಬಂಧಿಸಲಾಗಿದೆ.ಕೊಲೆ ಪ್ರಕರಣವೊಂದರ ಸಂಬಂಧ ಗುಲ್ಬರ್ಗ ಜೈಲಿನಲ್ಲಿರುವ ಬೆತ್ತನಗೆರೆ ಶೀನನನ್ನು ಕೊಲೆ ಮಾಡಲು ಅದೇ ಜೈಲಿನಲ್ಲಿದ್ದ ರಮೇಶ ಎಂಬ ಕೈದಿಗೆ ಆರೋಪಿ ಈರಣ್ಣ ಕಳುಹಿಸಿಕೊಟ್ಟಿದ್ದ ಪಿಸ್ತೂಲು ಮತ್ತು 8 ಗುಂಡು ಕಳೆದ ತಿಂಗಳು ಜೈಲಿನಲ್ಲಿ ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು.ಶೀನನ ಹತ್ಯೆಗೆ ಆತನ ಸಂಬಂಧಿ ಶಂಕರ ಎಂಬಾತ ಒಂದು ಕೋಟಿ ರೂಪಾಯಿಗೆ ಸುಪಾರಿ ನೀಡಿದ್ದ ಎಂದು ತನಿಖೆಯ ವೇಳೆ ಬಹಿರಂಗವಾಗಿದೆ.ಪಿಸ್ತೂಲು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ರಮೇಶನನ್ನು ಫರತಾಬಾತ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆತ ನೀಡಿದ ಸುಳಿವಿನ ಮೇರೆಗೆ ಈರಣ್ಣನನ್ನು ಬಂಧಿಸಲಾಗಿದೆ. ಜೈಲಿನ ಸಿಬ್ಬಂದಿ ನೆರವು ಪಡೆದು ಕೆಲ ಕೈದಿಗಳ ಸಂಪರ್ಕವನ್ನು ಸಾಧಿಸಿ, ಕೊಲೆಗೆ ಪ್ರಯತ್ನ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ತನ್ನ ಹತ್ಯೆಯ ಸಂಚಿನ ಬಗ್ಗೆ ಸುಳಿವು ಸಿಕ್ಕ ಶೀನ ಜೈಲಿನಲ್ಲೇ ತನ್ನ ಕೊಠಡಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಿಕೊಂಡಿದ್ದಾನೆ ಎನ್ನಲಾಗಿದ್ದು, ಪ್ರಕರಣದಲ್ಲಿ ಜೈಲು ಸಿಬ್ಬಂದಿಯೂ ಭಾಗಿಯಾಗಿರುವ ಶಂಕೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry