ಶನಿವಾರ, ಡಿಸೆಂಬರ್ 7, 2019
22 °C
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಿಂದ ಸಿಬಿಐ ಕ್ಲೀನ್‌ಚಿಟ್‌

ಜೈಲಿನಿಂದ ಇಂದು ಜಗನ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಲಿನಿಂದ ಇಂದು ಜಗನ್‌ ಬಿಡುಗಡೆ

ಹೈದರಾಬಾದ್‌: ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸುಮಾರು 16 ತಿಂಗಳಿಂದ ಜೈಲಿನಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮತ್ತು ಕಡಪ ಸಂಸದ ಜಗನ್‌ಮೋಹನ್‌ ರೆಡ್ಡಿ ಅವರಿಗೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಗನ್‌ ಮಂಗಳ ವಾರ ಚಂಚಲಗುಡ ಜೈಲಿನಿಂದ ಹೊರಬರಲಿದ್ದಾರೆ.ವೈ.ಎಸ್‌. ರಾಜಶೇಖರ್‌ ರೆಡ್ಡಿ ಅವರು  2004ರಿಂದ 2009ರ ವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ­ದಲ್ಲಿ ಎಂಟು ಖಾಸಗಿ ಕಂಪೆನಿಗಳಿಗೆ ಜಗನ್‌ ಲಾಭ ಮಾಡಿಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಆ ಕಂಪೆನಿಗಳು ಜಗನ್‌ ಒಡೆತನದ ಉದ್ಯಮದಲ್ಲಿ ಹೂಡಿಕೆ ಮಾಡಿದ್ದವು. ಹೀಗೆ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಜಗನ್‌ ವಿರುದ್ಧ ಇತ್ತು.‘ಹೈಕೋರ್ಟ್‌ ನಿರ್ದೇಶನದಂತೆ ತನಿಖೆ ಪೂರ್ಣಗೊಳಿಸಿದ್ದೇವೆ. ಜಗನ್‌ ವಿರುದ್ಧ ಯಾವುದೇ ರೀತಿಯ ಸಾಕ್ಷ್ಯಧಾರಗಳು ಸಿಕ್ಕಿಲ್ಲ’ ಎಂದು ಇದಕ್ಕೂ ಮುನ್ನ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತ್ತು.ಎರಡು ಲಕ್ಷ ರೂಪಾಯಿ ಮೊತ್ತದ ಎರಡು ಪ್ರತ್ಯೇಕ ಭದ್ರತಾ ಠೇವಣಿ ಮತ್ತು ನ್ಯಾಯಾಲಯದ ಪೂರ್ವಾ­ನುಮತಿ ಇಲ್ಲದೇ ನಗರ ತೊರೆಯದಂತೆ ಷರತ್ತು ವಿಧಿಸಿ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ದುರ್ಗಾ ಪ್ರಸಾದ್‌ ರಾವ್‌ ಅವರು ಜಾಮೀನು ಮಂಜೂರು ಮಾಡಿದರು.40 ವರ್ಷದ ಜಗನ್‌ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸುವಂತೆ ಈ ವರ್ಷದ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು.  ಜಗನ್‌ ಅವರನ್ನು ಸಿಬಿಐ ಕಳೆದ ಸಾಲಿನ ಮೇ 28ರಂದು ಬಂಧಿಸಿತ್ತು. ಬಳಿಕ ಅವರನ್ನು ಚಂಚಲಗುಡ ಜೈಲಿನಲ್ಲಿ ಇಡಲಾಗಿತ್ತು. ನಾಲ್ವರು ಕಾಂಗ್ರೆಸ್‌ ಸಚಿವರು ಮತ್ತು ಹಲವು ಉನ್ನತ ಅಧಿಕಾರಿಗಳು ಸೇರಿದಂತೆ 70 ಜನರ ವಿರುದ್ಧ ಸಿಬಿಐ 10 ಆರೋಪ ಪಟ್ಟಿ ಸಲ್ಲಿಸಿತ್ತು.ಪ್ರಸಕ್ತ ಲೋಕಸಭೆಯಲ್ಲಿ ಅತ್ಯಂತ ಶ್ರೀಮಂತ ಸಂಸದರಾ­ಗಿರುವ ಜಗನ್‌ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದರು. ಕಾಂಗ್ರೆಸ್‌ ಪಕ್ಷವನ್ನು ತೊರೆದ ಕಾರಣ ದುರು ದ್ದೇಶದಿಂದ ತಮ್ಮನ್ನು ವಿನಾಕಾರಣ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದ್ದರು. 2011ರಲ್ಲಿ ಕಾಂಗ್ರೆಸ್‌ ತೊರೆದ ಜಗನ್‌ ಬಳಿಕ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದ್ದರು.  ಸದ್ಯ ಮುಖ್ಯಮಂತ್ರಿ ಕಿರಣ್‌ಕುಮಾರ್‌ ರೆಡ್ಡಿ ಅವರ ಸಂಪುಟದಲ್ಲಿರುವ ಬಹುತೇಕ ಸಚಿವರು ವೈಎಸ್‌ ರಾಜಶೇಖರ್‌ ರೆಡ್ಡಿ ಅವರ ಸಂಪುಟದಲ್ಲೂ ಸಚಿವರಾಗಿದ್ದರು. ಖಾಸಗಿ ಕಂಪೆನಿಗಳಿಗೆ ಭೂಮಿ ಮಂಜೂರಾತಿ, ಗಣಿಗಾರಿಕೆಗೆ ಪರವಾನಗಿ ಮತ್ತು ಜಗನ್‌ಗೆ ಲಾಭವಾಗುವಂತೆ ವಿವಾದಾಸ್ಪದ ಆದೇಶಗಳನ್ನು ಹೊರಡಿಸಿದ್ದರು. ಇವರಲ್ಲಿ ಬಂದರು ಅಭಿವೃದ್ಧಿ ಯೋಜನೆಗೆ ಭೂಮಿ ಹಂಚಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ. ವೆಂಕಟರಮಣ ರೆಡ್ಡಿ ಈಗಾಗಲೇ ಜೈಲಿನಲ್ಲಿದ್ದಾರೆ. ಇನ್ನುಳಿದಂತೆ ಮೂವರು ಸಚಿವರಾದ ಪಿ. ಸಬಿತಾ ಇಂದ್ರಾ ರೆಡ್ಡಿ, ಡಾ. ಜೆ. ಗೀತಾ ರೆಡ್ಡಿ ಮತ್ತು ಡಿ. ಪ್ರಸಾದ ರಾವ್‌ ಅವರ ಹೆಸರು ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಇತ್ತು. ಇದರಿಂದ ಅವರು ಸಚಿವ ಸ್ಥಾನ ತೊರೆದಿದ್ದರು. ಈ ಮೂವರು ಸಚಿವರು ವೈಎಸ್‌. ರಾಜಶೇಖರ್‌ ರೆಡ್ಡಿ ಅವರ ಸಂಪುಟದಲ್ಲೂ ಸಚಿವರಾಗಿದ್ದರು.ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಾಚರಣೆ: ಜಗನ್‌ಮೋಹನ್‌ ರೆಡ್ಡಿ ಅವರಿಗೆ ಜಾಮೀನು ಮಂಜೂರಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಸೀಮಾಂಧ್ರದ 13 ಜಿಲ್ಲೆಗಳು, ಹೈದರಾಬಾದ್‌ನಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌  ಪಕ್ಷದ ಮುಖ್ಯ ಕಚೇರಿ  ಮತ್ತು ಜಗನ್‌ ಅವರ ಮನೆಯ ಮುಂದೆ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು. ಸಾಮಾಜಿಕ ಜಾಲತಾಣದಲ್ಲೂ ಈ ಕುರಿತು ದಿನವಿಡೀ ಸಂದೇಶಗಳು ಹರಿದಾಡಿದವು. ಜಗನ್‌ ಅವರು ಪ್ರತಿನಿಧಿಸುವ ಕಡಪ ಮತ್ತು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಜಾಮೀನಿಗೆ ಸಂಬಂಧಿಸಿದಂತೆ ಬೆಟ್ಟಿಂಗ್‌ ದಂಧೆ ಜೋರಾಗಿ ನಡೆಯಿತು.ಹರಿಹಾಯ್ದ ಚಂದ್ರಬಾಬು ನಾಯ್ಡು

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಬಂಧನ ಕ್ಕೊಳ­ಗಾಗಿರುವ ಜಗನ್‌ ಮೋಹನ್‌ ರೆಡ್ಡಿ ಅವರಿಗೆ  ಕ್ಲೀನ್‌ ಚಿಟ್‌ ನೀಡಿರುವ ಸಿಬಿಐ ಕ್ರಮಕ್ಕೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎಂ. ಚಂದ್ರಬಾಬು ನಾಯ್ಡು ಅವರು ತನಿಖಾ ಸಂಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ.‘ಆರೋಪಿ ವಿರುದ್ಧ ಸಾಕ್ಷ್ಯಧಾರ ಇದೆಯೊ ಅಥವಾ ಇಲ್ಲವೊ ಎನ್ನುವುದನ್ನು ಹೇಳುವ ಕೆಲಸ ನ್ಯಾಯಾಲಯಕ್ಕೆ ಸೇರಿದೆ. ಆದರೆ, ಸಿಬಿಐ ಜಗನ್‌ ಅವರಿಗೆ ಕ್ಲೀನ್‌ಚಿಟ್‌ ಹೇಗೆ ನೀಡಿತು ಎನ್ನುವುದು ತಿಳಿಯುತ್ತಿಲ್ಲ. ಜಗನ್‌ಗೆ ಜಾಮೀನು ದೊರೆಯುವ ಉದ್ದೇಶದಿಂದಲೇ ಸಿಬಿಐ ಹೀಗೆ ಮಾಡಿದೆ. ಕಾಂಗ್ರೆಸ್‌ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಮಧ್ಯೆ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ’ ಎಂದರು.

ಪ್ರತಿಕ್ರಿಯಿಸಿ (+)