ಜೈಲಿನ ಆಸ್ಪತ್ರೆಗಳು ಮೇಲ್ದರ್ಜೆಗೇರಲಿ

6

ಜೈಲಿನ ಆಸ್ಪತ್ರೆಗಳು ಮೇಲ್ದರ್ಜೆಗೇರಲಿ

Published:
Updated:

ಪ್ರತಿಷ್ಠಿತ ರಾಜಕಾರಣಿಗಳು ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರದ ಫಲವಾಗಿ ನಿತ್ಯವೂ ಸರದಿಯ ಮೇಲೆ ಜೈಲು ಸೇರುತ್ತಿರುವುದನ್ನು ನೋಡುತ್ತಿದ್ದರೆ ಶ್ರೀಸಾಮಾನ್ಯನಿಗೆ ಕಿಂಚಿತ್ತಾದರೂ ಸಮಾಧಾನವಾಗುತ್ತಿದೆ. ದುರದೃಷ್ಟಕರ ಎಂದರೆ, ಇವರೆಲ್ಲಾ ಕಾನೂನಿನ ಕಣ್ಣಿಗೆ ಮಣ್ಣೆರಚಿ ಚಾಪೆ ಕೆಳಗೆ, ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.ಪ್ರಕರಣ ವಿಚಾರಣೆಗೆ ಬರುತ್ತಿದೆ ಎಂದು ಮುದ್ದತ್ ನೀಡುವ ಮೊದಲೇ ಆಸ್ಪತ್ರೆಗೆ ಓಡಿ ಹೋಗಿ ಕಾಯಿಲೆಗಳನ್ನು ಬರಮಾಡಿಕೊಳ್ಳುವುದು, ನ್ಯಾಯಾಂಗ ಬಂಧನ ಪ್ರಕಟಿಸುತ್ತಿದ್ದಂತೆಯೇ ಕೋರ್ಟಿನಲ್ಲೇ ಕುಸಿದು ಬೀಳುವ ನಾಟಕ  ಆಡುವುದನ್ನು ನೋಡಿದರೆ (ಇಂಥದ್ದನ್ನೆಲ್ಲಾ ವಕೀಲರೇ ಹೇಳಿ ಕೊಡುತ್ತಾರೆ ಎಂಬ ಆಪಾದನೆಗಳೂ ಇವೆ) ಇವರಿಗೆಲ್ಲಾ `ಪೇಡೆ~ ತಿನ್ನುವಾಗ ದಕ್ಕುವ ಸಿಹಿ ಅರಗಿಸಿಕೊಳ್ಳುವಾಗ ಯಾಕಿರುವುದಿಲ್ಲ ಎಂಬುದು ಮಾತ್ರ ವಿವರಣೆಗೆ ನಿಲುಕದ ಸಂಗತಿ!ವಾಸ್ತವವಾಗಿ ಪ್ರತಿಷ್ಠಿತ ಆರೋಪಿಗಳು ಕೋರ್ಟಿನ ದಾಖಲೆಗಳಲ್ಲಿ ನಮೂದಿಸುವ ರೋಗಗಳೆಲ್ಲಾ ಅತ್ಯಂತ ಸಾಮಾನ್ಯ ರೋಗಗಳು. ಯಾವುದೇ ವ್ಯಕ್ತಿಗೆ `ನೀನಿವತ್ತು ಜೈಲಿಗೆ ಹೋಗಬೇಕು~ ಎಂದಾಕ್ಷಣ ಸಹಜವಾಗಿಯೇ ರಕ್ತದೊತ್ತಡ ಜಾಸ್ತಿಯಾಗುತ್ತದೆ ಇಲ್ಲವೇ ಕಡಿಮೆಯಾಗುತ್ತದೆ. ಹೃದಯದ ಬಡಿತವೂ ಏರುಪೇರಾಗುತ್ತದೆ. ಆ ವರೆಗೂ ಮೈಯಲ್ಲಿ ಮರೆಯಾಗಿದ್ದ ಹಳೆಯ ನೋವುಗಳೆಲ್ಲಾ ಒಮ್ಮೆಲೇ ಒತ್ತರಿಸಿಕೊಂಡು ಹೊರಬರುತ್ತವೆ. ಬರಲೇ ಬೇಕು. ಇಲ್ಲದಿದ್ದರೆ ಅದನ್ನು `ಜೈಲು ಯಾತ್ರೆ~ ಎಂದು ಹೇಳಲಾಗದು.ಜೈಲಿಗೆ ಹೋಗಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡರೆ ಎರಡು ದಿನದಲ್ಲಿ ಇವೆಲ್ಲಾ ಸರಿ ಹೋಗುತ್ತವೆ. ಆದರೆ ಇವನ್ನೇ ನಮ್ಮ ನಾಯಕರು ಭಾರಿ ಪ್ರಾಣ ಹೋಗುವ ಕಾಯಿಲೆಗಳು ಎಂಬಂತೆ ಬಿಂಬಿಸಿ ಜೈಲಿನ ವಾಸ ತಪ್ಪಿಸಿಕೊಳ್ಳಲಿಕ್ಕಾಗಿಯೇ ಆಸ್ಪತ್ರೆ ಸೇರುವ ಕಳ್ಳಾಟ ನೋಡಿದರೆ ಇವರೆಲ್ಲಾ ಹಾಡ ಹಗಲೇ ಕಾನೂನಿನ ಗೌರವಕ್ಕೆ ಮಸಿ ಬಳಿಯುತ್ತಿದ್ದಾರೆ ಎನ್ನದೆ ವಿಧಿಯಿಲ್ಲ. ವೈದ್ಯರೂ ಕೂಡಾ ಈ ವಿಷಯಗಳಲ್ಲಿ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಇಂತಹ ಆರೋಪಿಗಳು ಜೈಲು ಸೇರಿದಾಗ ಇವರ ಆರೋಗ್ಯದ ಬಗ್ಗೆ ದೃಢೀಕರಣ ಮಾಡುತ್ತಿದ್ದಾರೆಂಬುದೂ ಈಗ ಪ್ರಶ್ನಾರ್ಹವಾಗಿದೆ.ನಿಜ ಅರ್ಥದಲ್ಲಿ ಇಂದು ನಮ್ಮ ಕಾರಾಗೃಹಗಳು (ಕತ್ತಲ ಕೋಣೆ) ಕಾರಾಗೃಹಗಳಾಗಿ ಉಳಿದಿಲ್ಲ. `ಅಂಡಾಸೆಲ್~ `ಸುಣ್ಣದ ಸೆಲ್~ `ಒಂಟಿ ಕಾಲಾ ಸೆಲ್~ಗಳು ಬಳಕೆಯಾಗುತ್ತಿಲ್ಲ. ಈ ಬಂದೀಖಾನೆಗಳು ಇಂದು ಅತ್ಯಂತ ನೆಮ್ಮದಿಯ ಕೇಂದ್ರಗಳಾಗಿವೆ. ಸುಧಾರಣೆಯ ತಾಣಗಳಾಗಿರಬೇಕೆಂಬ ಅರ್ಥಕ್ಕೆ ಅನ್ವಯವಾಗಿಯೇ ರೂಪುಗೊಳ್ಳುತ್ತಿವೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹವಾಗಲೀ, ದೆಹಲಿಯ ತಿಹಾರ್ ಜೈಲಾಗಲೀ, ಹೈದರಾಬಾದಿನ ಚಂಚಲಗುಡಾ ಅಥವಾ ದೇಶದ ಯಾವುದೇ ಭಾಗದ ಮತ್ಯಾವುದೇ ಕೇಂದ್ರ ಕಾರಾಗೃಹಗಳಾಗಲೀ ಇವತ್ತು ಬ್ರಿಟಿಷರ ಕಾಲದ ಜೈಲುಗಳಂತೆ ಇಲ್ಲ ಎನ್ನುವುದು ನಿರ್ವಿವಾದ. ಇವುಗಳನ್ನೆಲ್ಲಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿಯಮಾನುಸಾರವೇ ಈಗ ಅತ್ಯಂತ ಸುವ್ಯವಸ್ಥಿತವಾಗಿ ರೂಪಿಸಲಾಗಿದೆ. ಅಕ್ಷರಶಃ ಇವುಗಳನ್ನು ಸುಧಾರಣೆಯ ಕೇಂದ್ರಗಳನ್ನಾಗಿಸಲಾಗಿದೆ. ಜೈಲಿನೊಳಗೆ ಆಸ್ಪತ್ರೆ, ಕ್ಯಾಂಟೀನ್, ಲೈಬ್ರರಿ, ಟಿ.ವಿ. ಹೊತ್ತು ಹೊತ್ತಿಗೆ ತಿಂಡಿ, ಊಟ, ಚಹಾ.. ವಾರಕ್ಕೊಮ್ಮೆ ಸಿಹಿ- ಮಾಂಸ, (ಎಣ್ಣೆ ಮಜ್ಜನ ಅಂಗಮರ್ದನಗಳೂ ಉಂಟು!!) ಹೀಗೆಯೇ ನಿತ್ಯದ ದಿನಚರಿಯು ಬೆಳಿಗ್ಗೆ ಎದ್ದಾಕ್ಷಣ ರಾಷ್ಟ್ರಗೀತೆ ಹಾಡುವುದರಿಂದ ಹಿಡಿದು ಸಂಜೆ ಸೆಲ್‌ಗಳ ಬಾಗಿಲು ಮುಚ್ಚುವ ತನಕ ಎಲ್ಲವೂ ಅಚ್ಚುಕಟ್ಟಾಗಿಯೇ ಸಾಗುತ್ತದೆ. ಇಂತಹ ವಾತಾವರಣದಲ್ಲಿ ಬದುಕುವುದು ಪ್ರತಿಷ್ಠಿತ ಆರೋಪಿಗಳಿಗೆ ಅಪಮಾನ ಎನಿಸಲೇಬಾರದು. ಉಣ್ಣುವಾಗ ಜಾಸ್ತಿ ಉಪ್ಪು ಸೇವಿಸಬಾರದೆಂಬ ವಿವೇಕ ಇರಬೇಕು. ಉಪ್ಪು  ತಿಂದರೆ ನೀರು ಕುಡಿಯಲೇಬೇಕು. ಅದು ಪ್ರಕೃತಿ ನಿಯಮ.ಪ್ರತಿಷ್ಠಿತರು ಜೈಲು ವಾಸ ತಪ್ಪಿಸಿಕೊಳ್ಳಲು ಕಳ್ಳಾಟ ಆಡುವುದನ್ನು ರಾಜ್ಯ ಮಾನವ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರವು ಕೂಡಲೇ ಜೈಲಿನೊಳಗಿನ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಕ್ರಮ ಕೈಗೊಳ್ಳಬೇಕು. ಇದರಿಂದ ಬಡ ಕೈದಿಗಳಿಗೂ ಉಪಯೋಗವಾಗುತ್ತದೆ.

 -ಎಲ್.ಎಚ್.ಅರುಣಕುಮಾರ್, ದಾವಣಗೆರೆಪ್ರಾಯಶ್ಚಿತ್ತವಾಗಬಾರದೇ?


ಭೂ ಹಗರಣದಿಂದಾಗಿ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಅಸ್ವಸ್ಥಗೊಂಡರೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಜೈಲುವಾಸದಿಂದ ತಪ್ಪಿಸಿಕೊಳ್ಳಲು ನಡೆಸುತ್ತಿರುವ ಹುನ್ನಾರ ಎನ್ನುವುದು ಅನುಮಾನಕ್ಕೆ ಎಡೆ ಕೊಟ್ಟಿದೆ.ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಭಾವಿಸಿಕೊಂಡಂತಿರುವ ಇಂಥ ಪ್ರತಿಷ್ಠಿತ ಆರೋಪಿಗಳು, ಜೈಲಿನಲ್ಲಿ ಇದ್ದರೆ ಮಾನ ಹರಾಜು ಆಗುತ್ತದೆ, ಅಸಹ್ಯಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ತಿಳಿದು ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ಸೇರಿ ಅಲ್ಲಿ ಐಷಾರಾಮಿಯಾಗಿ ಕಾಲ ಕಳೆಯುತ್ತ, ಆಸ್ಪತ್ರೆಯಲ್ಲಿ ಬೇಕಾದವರನ್ನು ಭೇಟಿಯಾಗಿ ಅಲ್ಲಿಂದಲೇ ರಾಜಕೀಯ ಚಟುವಟಿಕೆ ನಿಯಂತ್ರಿಸಲು ಮಾಡಿದ ನಾಟಕವಿದು.ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ ಆರೋಪಿಗಳಿಗೆ ಜೈಲಿನಲ್ಲಿಯೇ ಇರುವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಬೇಕು. ತಪ್ಪು ಮಾಡಿದವರು ಜೈಲಿನ ಅನುಭವಗಳನ್ನು ಪಡೆಯಬೇಕಲ್ಲವೇ? ಆಸ್ಪತ್ರೆಯಲ್ಲಿದ್ದರೆ ತಾನು ಮಾಡಿದ ತಪ್ಪಿನ ಅರಿವೇ ಬಾರದು. ಜೈಲು ಶಿಕ್ಷೆ ತಪ್ಪಿತಸ್ಥರಿಗೆ ಪ್ರಾಯಶ್ಚಿತವಾಗಬೇಕು. ಸಾಮಾನ್ಯ ಕಾಯಿಲೆಗಳನ್ನು ಅಸಾಮಾನ್ಯವಾಗಿ ಬಿಂಬಿಸಿ ಜೈಲುವಾಸದಿಂದ ಹೊರಗಡೆ ಉಳಿದುಕೊಳ್ಳುವ ರಾಜಕಾರಣಿಗಳ ತಂತ್ರವನ್ನು ನ್ಯಾಯಾಲಯಗಳು ಸರಿಯಾಗಿಯೇ ಗ್ರಹಿಸುತ್ತಿರುವುದು ಈಗಾಗಲೇ ಜೈಲಿನಲ್ಲಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರಕರಣದಲ್ಲಿ ಸ್ಪಷ್ಟವಾಗುತ್ತಿದೆ. ಭ್ರಷ್ಟ ರಾಜಕಾರಣಿಗಳ ಕುತಂತ್ರ ಇನ್ನಾದರೂ ಕೊನೆಗೊಳ್ಳಲಿ.

 -ಶಿಲ್ಪಾ ಪಾಟೀಲ, ಗುಲ್ಬರ್ಗ

ಅನುಮಾನಾಸ್ಪದ ಅಸ್ವಸ್ಥತೆ

ನ್ಯಾಯಾಂಗ ಬಂಧನದ ಆದೇಶ ಹೊರಬೀಳುತ್ತಿದ್ದಂತೆ ರಾಜಕಾರಣಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುವುದೊಂದು ವಾಡಿಕೆಯಾಗಿ ಬಿಟ್ಟಿದೆ. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಯವರಂತೂ ನ್ಯಾಯಾಲಯದಲ್ಲಿಯೇ ಕುಸಿದುಬಿದ್ದರು. ಪೊಲೀಸರೊಂದಿಗೆ ಪರಪ್ಪನ ಅಗ್ರಹಾರಕ್ಕೆ  ತೆರಳುತ್ತಿರುವಾಗ ಆರೋಗ್ಯದಿಂದಿದ್ದ ಮಾಜಿ ಮುಖ್ಯಮಂತ್ರಿಗಳು ಬಳಿಕ ಸೆರೆಮನೆಯಲ್ಲಿ ಹಲವು ಬಾರಿ ವಾಂತಿ ಮಾಡಿ ಆಸ್ಪತ್ರೆ ಸೇರಿದರು.  ಇಲ್ಲಿ ಜನಾರ್ದನ ಪೂಜಾರಿಯವರು ಹೇಳುವಂತೆ ಇಂತಹ ಪ್ರಸಂಗವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವುದು ಅನಿವಾರ್ಯ.ಭ್ರಷ್ಟತೆಯಿಂದ ಕಬಳಿಸಿದ ಹಣವನ್ನು ತಿಂದುಂಡು ಕೊಬ್ಬಿದ ಬಳಿಕ ಜೈಲು ಸೇರಿಸಬೇಕೆನ್ನುವಷ್ಟರಲ್ಲಿ ಅಸ್ವಸ್ಥರಾಗುವುದು ಅನುಮಾನಾಸ್ಪದವಲ್ಲವೇ? ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಲೋಕಾಯುಕ್ತರು, ವಕೀಲರಾದ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ ಅಭಿನಂದನಾರ್ಹರು. ನ್ಯಾಯದ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಕಳ್ಳರನ್ನು, ಗಂಧಚೋರರನ್ನು ಹಿಡಿದರೆ ಬಹುಮಾನ ಘೋಷಿಸಿ ಪುರಸ್ಕರಿಸುವಂತೆ, ತಾನೇ ನೇಮಿಸಿದ ಲೋಕಾಯುಕ್ತರನ್ನು ಸನ್ಮಾನಿಸಿ ಅಭಿನಂದಿಸಬೇಕಾಗಿದೆ.

- ಸಲೀಮ್ ಬೋಳಂಗಡಿ, ಮಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry