ಜೈಲು ಸುಧಾರಣೆಗೆ ಸಕಾಲ

7

ಜೈಲು ಸುಧಾರಣೆಗೆ ಸಕಾಲ

Published:
Updated:

ಸೈಕೊ ಕಿಲ್ಲರ್ ಜೈಶಂಕರ್ ಪರಾರಿ ಪ್ರಕರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಈ ಜೈಲಿನ ಹದಿನಾರು ವರ್ಷಗಳ ಇತಿಹಾಸದಲ್ಲಿ ಕೈದಿಯೊಬ್ಬ ಕಾವಲು ವ್ಯವಸ್ಥೆಯಲ್ಲಿನ ಲೋಪಗಳನ್ನೇ ಏಣಿಯಾಗಿಸಿಕೊಂಡು ಈ ರೀತಿ ಸಲೀಸಾಗಿ ಪರಾರಿಯಾದ ಮೊದಲ ಪ್ರಕರಣವಿದು.ಕಾವಲು ಸಿಬ್ಬಂದಿಯ ಕಣ್ಣು ತಪ್ಪಿಸಿ, ನಕಲಿ ಕೀಲಿ ಕೈ ಬಳಸಿ ಜೈಲು ಕೊಠಡಿಯಿಂದ ಹೊರಬಂದು, ಪೊಲೀಸ್ ಸಮವಸ್ತ್ರ ಧರಿಸಿ ಮೂವತ್ತು ಅಡಿಗಳ ಎತ್ತರದ ಗೋಡೆ ಏರಿ ಅಲ್ಲಿಂದ ಜಿಗಿದು ಪರಾರಿಯಾಗುವಂತಹ ದೃಶ್ಯಪ್ರಸಂಗವನ್ನು ಸಿನಿಮಾಗಳಲ್ಲಿ ಮಾತ್ರ ನೋಡಲು ಸಾಧ್ಯ. ಜೈಶಂಕರ್ ಈಗ ಅಂಥದ್ದೇ ಸಾಹಸ ಮಾಡಿದ್ದಾನೆ! ಅಷ್ಟೇ ಅಲ್ಲ, ಜೈಲಿನ ಸಿಬ್ಬಂದಿ, ಕಾರಾಗೃಹ ಇಲಾಖೆಯ ಹೊಣೆಗೇಡಿತನವನ್ನು ಬೆತ್ತಲೆ ಮಾಡಿ ತೋರಿಸಿದ್ದಾನೆ; ಸರ್ಕಾರಕ್ಕೆ ತಲೆ ತಗ್ಗಿಸುವಂತಹ ಮುಜುಗರ ಉಂಟು ಮಾಡಿದ್ದಾನೆ.ಈ ಪ್ರಕರಣ ಕಾವಲು ವ್ಯವಸ್ಥೆಯ ಲೋಪಗಳನ್ನಷ್ಟೇ ಹೇಳದೆ, ಸಿಬ್ಬಂದಿಯ ನಡವಳಿಕೆಯನ್ನೇ ಸಂಶಯದಿಂದ ನೋಡುವಂತೆ ಮಾಡಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೊಲೆ, ಅತ್ಯಾಚಾರದಂತಹ ಮೂವತ್ತಕ್ಕೂ ಹೆಚ್ಚು ಘನಘೋರ ದುಷ್ಕೃತ್ಯಗಳಲ್ಲಿ ಭಾಗಿಯಾದ ಪಾತಕಿ ಜೈಲಿನಿಂದ ತಪ್ಪಿಸಿಕೊಂಡು ಹೋದಾನೆಂದು ಊಹಿಸಿಯಾದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಜೈಲಿನ ಆಡಳಿತದ ವರ್ತನೆ ಖಂಡನೀಯ. ಜೈಶಂಕರ್‌ಗೆ ನಕಲಿ ಕೀಲಿ ಕೈ ಮಾಡಿಸಿಕೊಡುವಲ್ಲಿ ತಮಿಳುನಾಡು ಪೊಲೀಸರ ಪಾತ್ರವಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಜೈಲಿನಲ್ಲಿದ್ದ ಬಹುತೇಕ ಸಿ.ಸಿ ಟಿ.ವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹೊರ ಆವರಣದ ಎತ್ತರದ ಗೋಡೆ ಮೇಲಿನ ವಿದ್ಯುತ್ ತಂತಿಗಳೂ ನಿಷ್ಕ್ರಿಯವಾಗಿದ್ದವು ಎಂಬ ಸಂಗತಿಗಳು ಕಾರಾಗೃಹ ಇಲಾಖೆಯ ನಿರ್ಲಕ್ಷ್ಯಕ್ಕೆ ನಿದರ್ಶನ ಒದಗಿಸುತ್ತವೆ.ಕೊಲೆ, ಅತ್ಯಾಚಾರಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜೈಶಂಕರ್ ಜೈಲಿನಿಂದ ಹೊರಹೋಗಿದ್ದಾನೆ. ಅವನು ಇನ್ನಷ್ಟು ದುಷ್ಕೃತ್ಯಕ್ಕೆ ಕೈಹಾಕುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಅದಕ್ಕೆ ಅವಕಾಶ ಕೊಡದೆ ಅವನನ್ನು ಪತ್ತೆಹಚ್ಚಿ ಬಂಧಿಸಬೇಕು. ಅವನ ಪರಾರಿಗೆ ಕಾವಲು ಸಿಬ್ಬಂದಿಯನ್ನು ಹೊಣೆಯಾಗಿಸಿ ಅವರನ್ನು ಅಮಾನತಿನಲ್ಲಿಟ್ಟಿರುವ ಕ್ರಮ ಸರಿ. ಆದರೆ ಕಾವಲು ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳಿಗೆ ಕೆಳಹಂತದ ಸಿಬ್ಬಂದಿ ಮಾತ್ರ ಹೊಣೆಗಾರರಲ್ಲ.ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಸಂಬಂಧಿಸಿದವರು ಅದಕ್ಕೆ ಪ್ರತಿಕ್ರಿಯಿಸದೇ ಹೋದದ್ದೂ ಲೋಪವೇ. ಪಾತಕಿಯೊಬ್ಬ ಪರಾರಿಯಾದ ಮೇಲೆ ಅವ್ಯವಸ್ಥೆ ಸರಿಪಡಿಸಲು ಮುಂದಾಗುವಂತಹ ಪರಿಸ್ಥಿತಿ ಸರ್ಕಾರಕ್ಕೆ ಗೌರವ ತರುವುದಿಲ್ಲ. ಅದೇನೇ ಇರಲಿ, ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಕೆಲವು ಜೈಲುಗಳಲ್ಲಿ ಅಪರಾಧಿಗಳು ಮೊಬೈಲ್ ಬಳಸುತ್ತಾರೆಂಬುದು ಸರ್ಕಾರಕ್ಕೆ ಗೊತ್ತಿದೆ. ಜೈಲಿನಲ್ಲಿ ಕುಳಿತೇ ಅನೇಕ ಅವ್ಯವಹಾರಗಳನ್ನು ನಡೆಸುವ ಪಾತಕಿಗಳೂ ಇದ್ದಾರೆ. ಅದಕ್ಕೆ ಜೈಲು ಸಿಬ್ಬಂದಿಯ ಕುಮ್ಮಕ್ಕಿದೆ ಎಂಬುದು ಗುಟ್ಟೇನಲ್ಲ.ಸರ್ಕಾರ ಜೈಲುಗಳಿಗೆ ಭದ್ರತೆ ಒದಗಿಸಿ, ಕಾವಲು ವ್ಯವಸ್ಥೆಯನ್ನು ಬಿಗಿಗೊಳಿಸಿದರೆ ಸಾಲದು. ಜೈಲುಗಳು ಅವ್ಯವಹಾರಗಳ ಅಡ್ಡೆಯಾಗಲು ಅವಕಾಶ ಕೊಡಬಾರದು. ರಾಜ್ಯದ ಜೈಲುಗಳ ಸಮಗ್ರ ಸುಧಾರಣೆಗೆ ಇದು ಸಕಾಲ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry