ಜೈವಿಕ ಇಂಧನ ಭವಿಷ್ಯದ ಇಂಧನ

7

ಜೈವಿಕ ಇಂಧನ ಭವಿಷ್ಯದ ಇಂಧನ

Published:
Updated:

ಗುಲ್ಬರ್ಗ: ಪ್ರಾಣಿ ಹಾಗೂ ಸಸ್ಯಮೂಲಗಳಿಂದ ದೊರೆಯುವ ಜೈವಿಕ ಇಂಧನವೇ ಭವಿಷ್ಯದ ಇಂಧನ ಎಂದು ಕರ್ನಾಟಕ ರಾಜ್ಯ ಜೈವಿನಿಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಅಭಿಪ್ರಾಯಪಟ್ಟರು.ಗುಲ್ಬರ್ಗ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶನಿವಾರ ಗುಲ್ಬರ್ಗ ಕಂದಾಯ ವಿಭಾಗದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಜೈವಿಕ ಇಂಧನ ಮಾಹಿತಿ ಕುರಿತು ಒಂದು ದಿನದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಜೈವಿಕ ಇಂಧನ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರ ಹಸಿರು ಕ್ರಾಂತಿ, ಬರಡು ಬಂಗಾರ, ಸುವರ್ಣಭೂಮಿ ಯೋಜನೆಗಳನ್ನು ಜಾರಿಗೆ ತಂದಿದ್ದು, ನಿರಂತರ ಇಂಧನ ಸೌಲಭ್ಯಕ್ಕೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕ್ರಿಯಾ ಯೋಜನೆ ರಚಿಸುವ ಮೂಲಕ ಜೈವಿಕ ಇಂಧನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ನಾಶ ಹಾಗೂ ದುರ್ಬಳಕೆ ನಡೆಯುತ್ತಿದ್ದು, ವಾತಾವರಣದ ವೈಪರಿತ್ಯದಿಂದಾಗಿ ಮುಂದಿನ ದಿನಗಳಲ್ಲಿ ಏನು? ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಇದೆಲ್ಲದಕ್ಕೂ ಜೈವಿಕ ಇಂಧನ ಅಭಿವೃದ್ಧಿಯೇ ಪರಿಹಾರ ಎಂದು ಪ್ರತಿಪಾದಿಸಿದರು.ಹಸಿರು ಕ್ರಾಂತಿಯಿಂದಾಗಿ ದೇಶದ ಆರ್ಥಿಕ ಗುಣಮಟ್ಟವೇನೋ ಎತ್ತರಕ್ಕೆ ಬೆಳೆಯಿತು. ಆದರೆ ಇಂದಿಗೂ ರೈತರ ಆತ್ಮಹತ್ಯೆ ನಿಂತಿಲ್ಲ. ಇದಕ್ಕೆಲ್ಲ ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿ ಕೈಬಿಟ್ಟು ಆಧುನಿಕ, ವೈಜ್ಞಾನಿಕ ಕೃಷಿ ಪದ್ಧತಿ ಕೈ ಹಿಡಿದಿರುವುದೇ ಕಾರಣ ಎಂದು ವಿವರಿಸಿದರು.ಬರಡಾದ ಮತ್ತು ಪಾಳು ಬಿದ್ದ ಕೃಷಿ ಭೂಮಿ ಹೆಚ್ಚಾಗಿರುವ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಜೈವಿಕ ಇಂಧನ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಅಗತ್ಯವಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಕುಲಪತಿ ಪ್ರೊ. ಪುಟ್ಟಯ್ಯ ಮಾತನಾಡಿ, ಇಂಧನದ ಬೆಲೆ ಗಗನಕ್ಕೇರಿದ ಈ ದಿನಗಳಲ್ಲಿ ಬಳಕೆದಾರರ ಸಂಖ್ಯೆ ಹಾಗೂ ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ಕೊರತೆಯನ್ನು ಜೈವಿಕ ಇಂಧನ ಬಳಕೆ ಮೂಲಕ ನೀಗಿಸಿಕೊಳ್ಳಬೇಕು ಎಂದು ಹೇಳಿದರು.ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ, ಗುಲ್ಬರ್ಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್. ಕೆಂಪರಾಜು, ರಾಯಚೂರು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ, ಸಿಂಡಿಕೇಟ್ ಸದಸ್ಯರಾದ ಎಸ್.ಜಿ. ಭಾರತಿ, ಮಹಾರುದ್ರ ಹೂಗಾರ ವೇದಿಕೆಯಲ್ಲಿದ್ದರು. ಜಿಲ್ಲಾ ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಿ. ಕೆಂಚಣ್ಣನವರ್ ಅಧ್ಯಕ್ಷತೆ ವಹಿಸಿದ್ದರು.ರಮೇಶ ಲಂಡನಕರ್ ಕಾರ್ಯಕ್ರಮ ನಿರೂಪಿಸಿದರು. ರೇಣುಶರ್ಮಾ ಪ್ರಾರ್ಥನೆಗೀತೆ ಹಾಡಿದರು. ಜಿ.ಎನ್. ದಯಾನಂದ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry