ಜೈವಿಕ ತಂತ್ರಜ್ಞಾನದಲ್ಲಿ ಸಂಶೋಧನೆ

7

ಜೈವಿಕ ತಂತ್ರಜ್ಞಾನದಲ್ಲಿ ಸಂಶೋಧನೆ

Published:
Updated:
ಜೈವಿಕ ತಂತ್ರಜ್ಞಾನದಲ್ಲಿ ಸಂಶೋಧನೆ

ಬೆಂಗಳೂರು: `ಖಾಸಗಿ ಸಂಸ್ಥೆಗಳು ಜೈವಿಕ ತಂತ್ರಜ್ಞಾನ ಸಂಶೋಧನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು~ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಕರೆ ನೀಡಿದರು.ವಿಷನ್ ಗ್ರೂಪ್ ಆಫ್ ಬಯೊ ಟೆಕ್ನಾಲಜಿ ಬೆಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ `ಬೆಂಗಳೂರು ಇಂಡಿಯಾ ಬಯೊ 2012~ ಜೈವಿಕ ತಂತ್ರಜ್ಞಾನ ಸಮ್ಮೇಳನ ಮತ್ತು ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಜೈವಿಕ ತಂತ್ರಜ್ಞಾನದಲ್ಲಿ ಹೆಚ್ಚು ಸಂಶೋಧನೆಗಳಾಗುವ ಅಗತ್ಯವಿದೆ. ಸರ್ಕಾರಿ ಸಂಸ್ಥೆಗಳು ಮೂಲ ಕೆಲಸಗಳಲ್ಲೇ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಸಂಶೋಧನೆಗೆ ಆದ್ಯತೆ ನೀಡುತ್ತಿಲ್ಲ. ಆದ್ದರಿಂದ ಖಾಸಗಿ ಸಂಸ್ಥೆಗಳು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಈ ಕ್ಷೇತ್ರದ ಬೆಳವಣಿಗೆಯಲ್ಲಿ ಭಾಗಿಯಾಗಬೇಕು.

 

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರಿಗೆ ಬಡ್ತಿ ನೀಡುವ ಸಂಬಂಧ ಸಂದರ್ಶನ ಮಾಡಲಾಯಿತು, ಸಂಶೋಧನೆ ಮಾಡಿದ ಬಗ್ಗೆ ಅಥವಾ ಪ್ರಬಂಧ- ವಿಷಯ ಮಂಡಿಸಿದ ಬಗ್ಗೆ ಅವರು ಮಾಹಿತಿಯನ್ನೇ ನೀಡಲಿಲ್ಲ. ಮೂಲ ಕೆಲಸದಲ್ಲೇ ನಿರತರಾಗುವ ಅವರು ಸಂಶೋಧನೆಗಳಲ್ಲಿ ತೊಡುಗುವುದಿಲ್ಲ ಎಂದರು.ಜೈವಿಕ ತಂತ್ರಜ್ಞಾನ ನಿಯಂತ್ರಣ ಮಂಡಳಿ ಕ್ಷಮತೆಯಿಂದ ಕೂಡಿಲ್ಲ.  ಸಿಬ್ಬಂದಿ ಮತ್ತು ಕೌಶಲ ಹೊಂದಿದ ಸಿಬ್ಬಂದಿಯ ಕೊರತೆ ಇದೆ. ನಿಯಂತ್ರಣ ಮಂಡಳಿಯಲ್ಲೇ ದೋಷ ಇರುವುದರಿಂದ ಜೈವಿಕ ಔಷಧ, ಹೊಸ ಯತ್ನಗಳಿಗೆ ಒಪ್ಪಿಗೆ ಸಿಗುವುದು ತಡವಾಗುತ್ತಿದೆ. ಇದರಿಂದಾಗಿ ತಂತ್ರಜ್ಞಾನ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಆದ್ದರಿಂದ ಮಂಡಳಿಯನ್ನು ಬಲಪಡಿಸುವ ಅಗತ್ಯವೂ ಇದೆ. ಜೈವಿಕ ವಸ್ತುಗಳ ಸಾಧಕ- ಬಾಧಕಗಳನ್ನು ವಿಶ್ಲೇಷಿಸುವ ಕಾರ್ಯಪಡೆಯನ್ನು ಈಗಾಗಲೇ ರಚಿಸಲಾಗಿದೆ ಎಂದು ಅವರು ಹೇಳಿದರು.ಹತ್ತು ಹದಿನೈದು ವರ್ಷಗಳಲ್ಲಿ ಭಾರತ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ವಿಶ್ವದಲ್ಲೇ ಭಾರತ ಜೈವಿಕ ತಂತ್ರಜ್ಞಾನ ಕೇಂದ್ರವಾಗುವತ್ತ ಹೆಜ್ಜೆ ಇಟ್ಟಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.`ಹಾರ್ವಡ್ ವಿಶ್ವವಿದ್ಯಾಲಯ ಸೇರಿದಂತೆ ಹೊರ ರಾಷ್ಟ್ರದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಪಠ್ಯ ಮಾತ್ರವಲ್ಲದೆ ಸಂಶೋಧನೆ ಮತ್ತು ಪ್ರಾಯೋಗಿಕ ಜ್ಞಾನ ಸಂಪಾದನೆಗೆ ಮಹತ್ವ ನೀಡುತ್ತಾರೆ. ಹಾರ್ವರ್ಡ್ ವಿ.ವಿಯ ವಿದ್ಯಾರ್ಥಿಯೊಬ್ಬ ಐದು ವರ್ಷದ ವೈದ್ಯಕೀಯ ಕೋರ್ಸ್‌ಗೆ ಸೇರಿದರೆ ಆತ ಸಂಶೋಧನೆ ಮತ್ತಿತರರ ಪೂರಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಜ್ಞಾನ ಸಂಪಾದನೆ ಮಾಡುತ್ತಾನೆ. ಕೋರ್ಸ್ ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳುತ್ತಾನೆ. ಆದರೆ ನಮ್ಮಲ್ಲಿ ಅಂತಹ ವಾತಾವರಣ ಇಲ್ಲ~ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ. ಎಂ.ಕೆ.ಭಾನ್ ಹೇಳಿದರು.`ಮಾನವ, ಪರಿಸರ, ಔಷಧ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಜೈವಿಕ ತಂತ್ರಜ್ಞಾನದ ಅಗತ್ಯ ಇದೆ. ಆದ್ದರಿಂದ ಬಯೊ ಕನೆಕ್ಟ್ ಎಂಬ ಅಕಾಡೆಮಿಯನ್ನು ಆರಂಭಿಸಲಾಗುತ್ತದೆ~ ಎಂದು ಅವರು ಹೇಳಿದರು.

`ಬೆಂಗಳೂರಿನಲ್ಲಿರುವ `ಇನ್‌ಸ್ಟಿಟ್ಯೂಟ್ ಆಫ್ ಬಯೊಫಾರ್ಮಾಸ್ಟಿಕ್ಸ್ ಅಂಡ್ ಬಯೊಟೆಕ್ನಾಲಜಿ~ ಸಂಸ್ಥೆಯಲ್ಲಿ ಕೇಂದ್ರದ ನೆರವಿನೊಂದಿಗೆ ಇನ್ನೊಂದು `ಸೆಂಟರ್ ಆಫ್ ಎಕ್ಸಲೆನ್ಸ್~ ಆರಂಭಿಸಲು ನಿರ್ಧರಿಸಲಾಗಿದೆ.ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ ಮತ್ತು ಸ್ಟ್ರಾಂಡ್ ಜೀವ ವಿಜ್ಞಾನ ಮತ್ತು ಮಾನವ ಅನುವಂಶೀಯ ಕೇಂದ್ರ ಜಂಟಿಯಾಗಿ `ಇನ್‌ಸ್ಟಿಟ್ಯೂಟ್ ಆಫ್ ಬಯೊಫಾರ್ಮಾಸ್ಟಿಕ್ಸ್ ಅಂಡ್ ಬಯೊಟೆಕ್ನಾಲಜಿ~ ಕೇಂದ್ರದಲ್ಲಿ ಜೈವಿಕ ಮಾಹಿತಿ ತಂತ್ರಜ್ಞಾನ ಕೇಂದ್ರ ತೆರೆಯಲು ಮುಂದೆ ಬಂದಿವೆ. ಮೈಸೂರಿನಲ್ಲಿ ಸಹ 108 ಕೋಟಿ ರೂಪಾಯಿ ವೆಚ್ಚದಲ್ಲಿ ಜೈವಿಕ ಔಷಧ ಪಾರ್ಕ್ ಆರಂಭಿಸಲು ಒಪ್ಪಿಗೆ ನೀಡಲಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.ಜೈವಿಕ ತಂತ್ರಜ್ಞಾನಕ್ಕೆ ರಾಜ್ಯ ಮಹತ್ವ ಮತ್ತು ಪ್ರೋತ್ಸಾಹ ನೀಡುತ್ತಿದೆ. ಇದಕ್ಕಾಗಿ ಮಿಲೇನಿಯಂ ಬಯೊಟೆಕ್ ಪಾಲಿಸಿಯನ್ನು ಜಾರಿಗೆ ತರಲಾಯಿತು. ತಜ್ಞರ ಅಭಿಪ್ರಾಯದ ನಂತರ ಇದನ್ನು ಪರಿಷ್ಕರಿಸಿ `ಮಿಲೇನಿಯಂ ಬಯೊಟೆಕ್ ಪಾಲಿಸಿ~ಯ ಎರಡನೇ ಆವೃತ್ತಿಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ ಎಂದರು. ಸಮ್ಮೇಳನ ಬುಧವಾರದ ವರೆಗೂ ನಡೆಯಲಿದೆ.ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ, ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್‌ನ ಅಧ್ಯಕ್ಷ ರೋನ್ ಸೋಮರ್ಸ್‌, ಬಯೊಕಾನ್ ಲಿಮಿಟೆಡ್‌ನ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry