ಶನಿವಾರ, ಮೇ 15, 2021
25 °C

ಜೈ ಜೈ ಕಂಪನಿಯಲ್ಲಿ (ಸ)ಕಾಲಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಧಾನಿಯ ಪ್ರತಿಷ್ಠಿತ ಮುಖ್ಯ ರಸ್ತೆಯಲ್ಲಿರುವ ಜೈ ಜೈ ಕಂಪನಿ ಮನೆ ಕೊಡಿಸುವ, ಮಾರುವ, ಮಾರಿಸುವ, ದಿಕ್ಕುದೆಸೆ ದೋಷವಿದ್ದರೆ ಮುರಿಸಿ ರಿಪೇರಿಸುವ ಹೆಸರುವಾಸಿ ಸಂಸ್ಥೆ. ನಾಣಿ ಅದರ ಒಡೆಯ. ದಶಕದ ಹಿಂದೆ ಹತ್ತು ಅಡಿ ಜಾಗದಲ್ಲಿ ಮನೆ, ನಿವೇಶನ ವಹಿವಾಟು ಕುದುರಿಸುತ್ತಿದ್ದ ಭೂಪ ಇಂದು ಭರ್ಜರಿ ಏಜೆನ್ಸಿ ನಡೆಸುತ್ತಿದ್ದಾನೆ.ಹದಿನೆಂಟಕ್ಕೂ ಹೆಚ್ಚು ಮಂದಿಗೆ ನೌಕರಿ ಕೊಟ್ಟ ಧಣಿ. ತನ್ನ ಕಂಪನಿಯಲ್ಲಿ ಎಲ್ಲಿಲ್ಲದ ಶಿಸ್ತು, ಅಚ್ಚುಕಟ್ಟುತನ ತಂದಿದ್ದಾನೆ. ಗ್ರಾಹಕರನ್ನು ಪದೇ ಪದೇ ಓಡಾಡಿಸದೆ ಕಾಲಕಾಲಕ್ಕೆ ದೂರು, ಅಹವಾಲುಗಳನ್ನು ಇತ್ಯರ್ಥಪಡಿಸಿಕೊಡುತ್ತಾನೆ, ಸಕಾಲಕ್ಕೆ ಸಾಲ ಕೊಡಿಸುವುದರಲ್ಲಿ ಅವನು ಎತ್ತಿದ ಕೈ ಮುಂತಾಗಿ ನನಗೆ ಸುದ್ದಿ ಮುಟ್ಟಿ ಮಾರಾಯನನ್ನು ಕಾಣಲು ತವಕವಾಯಿತು. ಮರುದಿನವೆ ಜೈ ಜೈ ಕಂಪನಿಯತ್ತ ದೌಡಾಯಿಸಿದೆ. ಮೂರನೆ ಮಹಡೀಲಿ ಅವನ ಆಫೀಸು. ಲಿಫ್ಟ್ ಇಲ್ಲ. ನೀವು ಮೆಟ್ಟಿಲು ಹತ್ತೀನೆ ಹೋಗ್ಬೇಕು ಎಂದ ಸೆಕ್ಯೂರಿಟಿಯವ, ಅಡ್ಡಿಯಿಲ್ಲ..... ನಂಗೂ ವ್ಯಾಯಾಮವಾಗುತ್ತೆ ಎಂದಿದ್ದೆ ಹುಸಿ ಖುಷಿಯಿಂದ ಮೆಲ್ಲಗೆ ಮೆಟ್ಟಿಲು ಏರ ತೊಡಗಿದೆ.ನೇರ ಸಂದರ್ಶನಕ್ಕಿಳಿದೆ.  `ಏನಯ್ಯ ಹೊಸ ಆಫೀಸಿನಲ್ಲಿ ಹೊಸ ನಾಜೂಕು, ರೂಲ್ಸು? ಭಲೇ, ಬಾಡಿಗೆ ಕಟ್ಟಡ ಅಂತ ಅನ್ನಿಸೋದೆ ಇಲ್ಲ. ಅಚ್ಚುಕಟ್ಟಾಗಿದೆ ಎಲ್ಲಾನೂ. ನೀನು ಈ ಪವಾಡದ ಲಗಾಮು ಹೇಗೆ ಹಿಡಿದೆ ಹೇಳು~ ಕೇಳಿದೆ.“ಪಂಕ್ಚುಯಾಲಿಟಿ ಎಂದರೆ ಎಷ್ಟು ಲೇಟಾಗಿ ಇನ್ನೊಬ್ಬರು ಆಫೀಸಿಗೆ ಬರ್ತಾರೆ ಅಂತ ಕಾಯ್ತ ಕೂತ್ಕೊಳ್ಳೋದು ಅಂತ ಆಗೋಗಿತ್ತು. ಈಗ ಅಂಥವಕ್ಕೆಲ್ಲ ಭರ್ಜರಿ ರಿಪೇರಿ ಮಾಡ್ತಿದೀನಿ. ಕೆಲಸಕ್ಕೆ ಜನಾನನ್ನು ತೆಗೆದುಕೊಳ್ಳೋ ಮೆಥಡ್ಡೇ ವಿಶೇಷ ಇಲ್ಲಿ ಗೊತ್ತ?”

ಓಹ್-ಸಂತೋಷ. ಏನು ಮಾನದಂಡ ಹೇಳ್ತೀಯ?“ಆಗಲಿ, ವಿವರವಾಗಿಯೇ ಹೇಳ್ತೀನಿ. ನೋಡು ಆ ಗಾಜಿನ ಚೇಂಬರ್ ಕಾಣಿಸುತ್ತಲ್ಲ. ಅದರೊಳಗೆ ಓರಣವಾಗಿ ಜೋಡಿಸಿರೊ ಇಟ್ಟಿಗೆಗಳು ಕಾಣಿಸ್ತಾಯಿವೆ ತಾನೆ. ಕೆಲಸ ಕೇಳಲು ಬರುವವರನ್ನ ನಾಲ್ಕು ಜನರ ತಂಡ ಮಾಡಿ ಆ ಚೇಂಬರಿನಲ್ಲಿ ಕೂರೋಕೆ ಹೇಳ್ತೀನಿ, ಮೂವತ್ತು ನಿಮಿಷದಲ್ಲಿ ಅವರು ಏನೇನು ಮಾಡ್ತಾರೆ ಗಮನಿಸ್ತೀನಿ, ಇಟ್ಟಿಗೆಗಳನ್ನು ಎಣಿಸಿ ಮತ್ತೆ ಮೊದಲಿನ ಹಾಗೆ ಜೋಡಿಸಿದ್ರೆ ಅಕೌಂಟ್ಸ್ ಸೆಕ್ಷನ್ನಿಗೆ ನೇಮಿಸ್ತೀನಿ. ಚೆಲ್ಲಾಪಿಲ್ಲಿ ಮಾಡಿದ್ರೆ ಇಂಜಿನಿಯರಿಂಗ್ ಸೆಕ್ಷನ್ನು. ಒಂದ್ವೇಳೆ ಇಟ್ಟಿಗೆಗಳನ್ನ ಇನ್ನೊಂದು ಬಗೆ ಜೋಡಿಸ್ತಾರೆ ಅನ್ನು, ಅವರು ಪ್ಲಾನಿಂಗ್‌ನಲ್ಲಿರ್ತಾರೆ. ಒಬ್ಬರಿಗೊಬ್ರು ಇಟ್ಟಿಗೆ ಎಸೆದಾಡಿದ್ರೆ ನೀನೇ ಯೋಚ್ನೆಮಾಡು ಅವ್ರ ಆಪರೇಷನ್ ಸೆಕ್ಷನ್ನಿಗೆ ಲಾಯಕ್ಕಲ್ವ?” ಒಂದ್ವೇಳೆ ಇಟ್ಟಿಗೆ ಮೇಲೆ ಹಾಯಾಗಿ ಮಲಗಿದ್ರೆ ಅವರ‌್ನ ಸೆಕ್ಯೂರಿಟಿಗೆ ನೇಮಕ ಮಾಡ್ಕೊತೀನಿ. ಸುಮ್ನೆ ಅವ್ರೆಲ್ಲ ಯಾವಾಗ ಹೆಸರು ಕೂಗ್ತಾರೆ ಅಂತ ತೆಪ್ಪಗಿದ್ದು ಕಾಲ ನೂಕ್ತಾರೆ ಅನ್ನು. ಮಾನವ ಸಂಪನ್ಮೂಲ ಸೆಕ್ಷನ್ನಿಗೆ ಹೇಳಿ ಮಾಡಿಸಿದ ಮಂದಿ ತಾನೆ ಅವರು! ನಮ್ಮಲ್ಲಿ ಸ್ಟೋರ್ಸ್‌ ಚೆನ್ನಾಗೇ ಮೈನ್‌ಟೈನ್ ಮಾಡಿದೀವಿ. ಇವ್ರ ಏನಾದ್ರು ಇಟ್ಟಿಗೆಗಳನ್ನ ಚೇಂಬರಿನಿಂದ ಎಸೀತಾರೆ ಅನ್ನು. ಅಲ್ಲಿಗೆ ನೇಮಿಸಿದ್ರೆ ಮುಗೀತಲ್ಲ.ಏನಂತಿ?.... ಹ್ಞಾಂ ಹ್ಞಾಂ ಕೊನೆಯ ಆದರೆ ಬಹಳ ಮುಖ್ಯವಾದ್ದು ಇದೆ. ಒಂದ್ವೇಳೆ ಚೇಂಬರಿನಲ್ಲಿ ಇಟ್ಟಿಗೆ ಓರಣವನ್ನೇ ಪಂಚಾಯ್ತಿ ಕಟ್ಟೆ ಮಾಡ್ಕೊಂಡು ಲೋಕಾಭಿರಾಮದಲ್ಲಿದ್ಬಿಡ್ತಾರೆ ಅಂತಿಟ್ಕೊ. ಅವರನ್ನ ಉನ್ನತ ಆಡಳಿತ ಮಂಡಳಿ ಸದಸ್ಯರನ್ನಾಗಿ ಮಾಡ್ಕೊತೀನಿ. ಒಂದು ಇಟ್ಟಿಗೆ ಕೂಡ ಆಗ ಕದಲಿರೋಲ್ಲ ಅಂತ ಅರ್ಥ”

 `ಐನಾತಿ ಕಣಯ್ಯ ನಿನ್ನ ಕಂಪೆನಿ ನೇಮಕಾತಿ ವಿಧಾನ. ಗೊಂದಲ ಬೂದುಗಾಜಿಗೂ ಸಿಗಲ್ಲ. ನಿನ್ನ ಸಿಬ್ಬಂದಿ ಅರ್ಜಿದಾರರನ್ನ ಸತಾಯಿಸಿದ್ರೆ ದಂಡ ಗಿಂಡ ಏನಾದ್ರು?~

“ಇದೆ ಇದೆ, ಪ್ರತಿದಿನ ನೀವು ಕೆಲಸದ ಎಂಟು ತಾಸುಗಳಲ್ಲಿ ಎರಡು ತಾಸು ದಂಡ ತೆರುವುದಕ್ಕೇನೆ ಕೆಲಸ ಮಾಡ್ತೀರಿ ಅಂತ ಅಡ್ವಾನ್ಸ್ ಆಗಿ ಹೇಳಿದೀನಿ. ಅಡ್ವಾನ್ಸ್ ಆಗಿ ಒಂದಷ್ಟು ಹಣ ಹಿಡಿದೇ ಇರ‌್ತೀನಿ. ನಿನ್ನೆ ಒಂದು ಪಟಿಂಗತನಾನೂ ನಡೀತು. ಒಬ್ಬ ಕೇಸ್‌ವರ್ಕರ್ ನಾಲ್ಕು ದಿನ ಅಹವಾಲುದಾರನನ್ನ ಓಡಾಡಿಸಿದ್ದ. ನ್ಯಾಯವಾಗಿ ಆತ ನಲವತ್ತು ರೂಪಾಯಿನ ಆ ಅಹವಾಲುದಾರನಿಗೆ ಕೊಡಬೇಕಿತ್ತು. ಇಪ್ಪತ್ತೇ ರೂಪಾಯಿ ನನ್ನ ಕಣ್ಮುಂದೆನೇ ಕೊಟ್ಟ. ಎರಡೇ ದಿನ ಆಫೀಸಿಗೆ ಓಡಾಡಿದೆ  ಅಂತ ಅವನ ಕೈಲಿ ಹೇಳಿಸಿದ್ದ! 

ಅದಕ್ಕೇನೆ ನಾನು ಮುಂಗಡ ದಂಡ ಮುರಿತ ಯೋಜನೆ ಜಾರಿಗೆ ತಂದಿದ್ದು”.

ಒಳ್ಳೇದು.... ಇಷ್ಟೆಲ್ಲ ಸುಧಾರಣೆ ಆಗಿಯೂ ಏನಾದ್ರು ಎಡವಟ್ಟುಗಳು ಆಗಿವೆಯಾ?

“ಇದಂತು ಪಸಂದಾದ ಪ್ರಶ್ನೆ, ಯಾಕಿಲ್ಲ, ಆಗ್ತಾನೆ ಇವೆ. ಗಡಿಯಾರನೇ ಯಾವಾಗ್ಲು ದಿಟ್ಟಿಸಿ ನೋಡ್ತಾ ತಮ್ಮನ್ನ ಬಿಟ್ರೆ ನಿಯತ್ತಿನವರು ಯಾರೂ ಇಲ್ಲ ಅನ್ನೊ ಹಾಗೆ ಪೋಸ್ ಕೊಡ್ತಾರೆ. ತಾಸಿನಲ್ಲಿ ಪೂರೈಸೊ ಕೆಲಸಾನ ದಿನವೆಲ್ಲ ಮಾಡಿ ಶ್ರಮಜೀವಿಗಳು ಅಂತ ತೋರಿಸ್ಕೊತಾರೆ. ಇನ್ನೂ ವಿಚಿತ್ರವೆಂದರೆ ಫೈಲ್ ವಿಲೇವಾರಿ ಮಾಡೋದ್ರಲ್ಲಿ ಏನೇನೊ ಆ್ಯಕ್ಟ್, ರೂಲ್ಸು ತೋರಿಸಿ ನನಗಿಂತ ಅವರೇ ಸಮರ್ಥರು ಅಂತ ಬೀಗ್ತಾರೆ”.`ಸರೀನಯ್ಯ....ನಾನು ಬಂದ ಉದ್ದೇಶ ಸಂದರ್ಶನ ಮಾತ್ರ ಅಲ್ಲ. ವಾರಕ್ಕೆ ಎರಡು ದಿನ ಇಲ್ಲಿ ಅರೆಕಾಲಿಕ ಹುದ್ದೆಗೆ ಏನಾದ್ರು ಅವಕಾಶವಿದೆಯಾ ನಂಗೆ ಬೇಗ ಹೇಳು. ನನ್ನ ಅನುಭವ ನಿಂಗೆ ಲಾಭವಾಗಲಿ ಅಂತ ನನ್ನ ಆಸೆ~ ಅಂದೆ.ನಾಣಿ ಅವಕಾಶ ಖಂಡಿತ ಇದೆ ಎಂದವನೆ ಬಾಗಿಲಿನತ್ತ ನೋಡಿದ. ನನ್ನ  ಆ ದಿನದ ಮುಂದಿನ ಕಾರ್ಯಕ್ರಮ ಅವನೇ ನಿಶ್ಚಯಿಸಿದ್ದ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.