ಮಂಗಳವಾರ, ಜನವರಿ 28, 2020
19 °C

ಜೈ ಭೀಮ್ ಕಾಮ್ರೇಡ್ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈಯ ಬೈಕುಲ್ಲಾದ ಬಿಐಟಿ ಚಾಳ್‌ನಲ್ಲಿ `ಜೈ ಭೀಮ್ ಕಾಮ್ರೇಡ್~ ಪ್ರದರ್ಶನಗೊಂಡಾಗ ಅದನ್ನು ನೋಡಲು ಅಲ್ಲಿದ್ದದ್ದು 800 ಮಂದಿ. ಮೂರು ಗಂಟೆ ಇಪ್ಪತ್ತು ನಿಮಿಷಗಳಷ್ಟು ದೀರ್ಘವಾಗಿರುವ ಈ ಸಾಕ್ಷ್ಯ ಚಿತ್ರದ ಪ್ರದರ್ಶನ ಮುಗಿಯುವ ತನಕವೂ ಅಲ್ಲಿ ಒಂದು ಸಣ್ಣ ಸದ್ದೂ ಇರಲಿಲ್ಲ ಎಂದು ಐಎಎನ್‌ಎಸ್ ವರದಿ ಮಾಡಿತ್ತು.

 

ಈ ಸಾಕ್ಷ್ಯಚಿತ್ರದ ಪ್ರಮುಖ ಭಾಗವೊಂದು ಬೈಕುಲ್ಲಾದಲ್ಲಿಯೇ ಚಿತ್ರೀಕರಣಗೊಂಡಿತ್ತು. ಚಿತ್ರದ `ಪಾತ್ರಧಾರಿ~ಗಳೂ ಆ ಪ್ರದರ್ಶನದ ವೇಳೆ ಅಲ್ಲಿಯೇ ಇದ್ದರು. ತಮ್ಮ ನೇರ ನಿರೂಪಣೆಗಳ ಮೂಲಕ ಸೆನ್ಸಾರ್ ಮಂಡಳಿಯಿಂದ ಆರಂಭಿಸಿ ಸರ್ಕಾರಗಳು, ರಾಜಕೀಯ ಪಕ್ಷಗಳು ಮತ್ತು ವಿವಿಧ ಬಗೆಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವ ಆನಂದ್ ಪಟವರ್ಧನ್ ಕಳೆದ ಹದಿನಾಲ್ಕು ವರ್ಷಗಳ ಶ್ರಮ 200 ನಿಮಿಷಗಳ `ಜೈ ಭೀಮ್ ಕಾಮ್ರೇಡ್~.

 

ಭಾರತದಲ್ಲಿ ದಲಿತರು ಎದುರಿಸುತ್ತಿರುವ ಸಮಸ್ಯೆಗಳು, ದಲಿತ ಚಳವಳಿಯ ಸ್ವರೂಪ ಮತ್ತು ಗೊಂದಲಗಳೆಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುವ ಈ ಸಾಕ್ಷ್ಯ ಚಿತ್ರ ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಕಠ್ಮಂಡುವಿನಲ್ಲಿ ನಡೆಯುವ ದಕ್ಷಿಣ ಏಷ್ಯಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.ಅಂಬೇಡ್ಕರ್ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದನ್ನು ಪ್ರತಿಭಟಿಸುತ್ತಿದ್ದ ದಲಿತರ ಮೇಲೆ ಮುಂಬೈ ಪೊಲೀಸರು ಗುಂಡು ಹಾರಿಸಿದರು. ಇದರ ಪರಿಣಾಮವಾಗಿ 10 ಮಂದಿ ಪ್ರತಿಭಟನೆಕಾರರು ಸಾವಿಗೀಡಾದರು. 1997ರ ಜುಲೈ 11ರಂದು ನಡೆದ ಈ ಘಟನೆಯಿಂದ ತೀವ್ರ ದುಃಖ ಅನುಭವಿಸಿದ ವಿಲಾಸ್ ಘೋಗ್ರೆ ಘಟನೆ ನಡೆದ ಆರನೇ ದಿನದಂದು ಆತ್ಮಹತ್ಯೆ ಮಾಡಿಕೊಂಡು ಪ್ರತಿಭಟಿಸಿದರು.ಈ ಘಟನೆಯೊಂದಿಗೆ ಆರಂಭವಾಗುವ ಸಾಕ್ಷ್ಯ ಚಿತ್ರ ಭಾರತದ ದಲಿತರು ತಮ್ಮ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಲು ಅನುಸರಿಸಿದ ಪ್ರಜಾಸತ್ತಾತ್ಮಕ ಮಾರ್ಗಗಳನ್ನು ದಾಖಲಿಸುತ್ತಾ ಸಾಗುತ್ತದೆ.ಈ ಚಿತ್ರ ದಾಖಲೀಕರಿಸಿರುವ ದಲಿತ ನಾಯಕರೊಬ್ಬರು ಹೇಳುವ `ಪ್ರತೀ ಮನೆಯಲ್ಲೂ ಒಬ್ಬ ಕವಿ ಹಾಗೂ ಹಾಡುಗಾರನಿದ್ದಾನೆ~ ಮಾತು ಪ್ರತಿಭಟನೆಯ ಮಾರ್ಗವೂ ಆಗುವ ದಲಿತರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅರ್ಥಪೂರ್ಣ ರೂಪಕವಾಗಿಬಿಡುತ್ತದೆ.

 

ದಲಿತರ ಮಟ್ಟಿಗೆ ಸಂಗೀತ ಮತ್ತು ಕಾವ್ಯಗಳು ಇಲ್ಲಿ ನೋವಿಗೆ ಸಾಂತ್ವನ ನೀಡುವ ಅಂಶಗಳಷ್ಟೇ ಅಲ್ಲ ಅವು ಪ್ರತಿಭಟನೆಯನ್ನು ಪ್ರೇರೇಪಿಸುವ ಹೋರಾಟವನ್ನು ಮುಂದುವರಿಸಲು ಸ್ಫೂರ್ತಿದಾಯಕವೂ ಹೌದು.`ಜೈ ಭೀಮ್...~ ಹೀಗೆ ಕೇವಲ ಕಾವ್ಯದಲ್ಲಿ ಮುಳುಗಿ ಹೋಗಿಬಿಡುವುದಿಲ್ಲ. ದಲಿತ ಸಮುದಾಯಗಳ ಒಳಗಿನ ದ್ವಂದ್ವವನ್ನೂ ಅಲ್ಲಿರುವ ಅಸಮಾನತೆಯನ್ನೂ ತೆರೆದಿಡುತ್ತದೆ. ಯಾವ ಸುರಕ್ಷಾ ಸಾಧನಗಳೂ ಇಲ್ಲದೆ ಪೌರ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ದಲಿತನ ಕಥೆಯನ್ನು ಹೇಳುವಾಗಲೇ ಆತನನ್ನು ನೋಡುವ ಅದೇ ಸಮುದಾಯದ ಮಧ್ಯಮ ವರ್ಗದ ವ್ಯಕ್ತಿ ` ಈ ಜನಗಳೆಷ್ಟು ಗಲೀಜು~ ಎಂದು ಉದ್ಗರಿಸುವ ವ್ಯಂಗ್ಯವನ್ನೂ ಸಾಕ್ಷ್ಯ ಚಿತ್ರ ದಾಖಲಿಸಿದೆ.ಈ ಸಾಕ್ಷ್ಯ ಚಿತ್ರದ ಪ್ರದರ್ಶನವೊಂದನ್ನು ಪೆಡಸ್ಟ್ರಿಯನ್ ಪಿಕ್ಚರ್ಸ್ ಬೆಂಗಳೂರಿನಲ್ಲಿ ಜನವರಿ 17ರ ಮಂಗಳವಾರ ಏರ್ಪಡಿಸಿದೆ. ಮೌಂಟ್ ಕಾರ್ಮೆಲ್ ಕಾಲೇಜು ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಸರಿಯಾಗಿ ಪ್ರದರ್ಶನ ಆರಂಭವಾಗಲಿದೆ. ಪ್ರದರ್ಶನದ ನಂತರದ ಚರ್ಚೆಯಲ್ಲಿ ನಿರ್ದೇಶಕ ಆನಂದ್ ಪಟವರ್ಧನ್ ಕೂಡಾ ಭಾಗವಹಿಸುತ್ತಿದ್ದಾರೆ ಎಂದು ಪೆಡಸ್ಟ್ರಿಯನ್ ಪಿಕ್ಚರ್ಸ್ ಹೇಳಿದೆ. ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದೆ.ಹೆಚ್ಚಿನ ಮಾಹಿತಿಗೆ: 94483 67627, 73537 70203, 94483 71389 ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)