ಜೋಕುಮಾರನ ಆಗಮನ

7

ಜೋಕುಮಾರನ ಆಗಮನ

Published:
Updated:

ಸಿಂದಗಿ: ಗಣೇಶನ ನಿರ್ಗಮನ ಆಗುತ್ತಿದ್ದಂತೆ ಜೋಕುಮಾರನ ಆಗಮನ ಶುಕ್ರವಾರ ನಗರದಲ್ಲಿ ಕಂಡು ಬಂದಿತು.ಕುಂಬಾರ ಚೌಡಪ್ಪ ಮಣ್ಣಿನಿಂದ ಸಿದ್ಧಪಡಿಸಿದ ಜೋಕುಮಾರನ ಮೂರ್ತಿ­ಯನ್ನು ಕಬ್ಬಲಗೇರ ಸಮುದಾಯದ ನಾಲ್ಕು ಜನ ಮಹಿಳೆಯರು ಹೆಂಡೆಡಗಿ ಬುಟ್ಟಿಯಲ್ಲಿ ಇಟ್ಟುಕೊಂಡು ಸುತ್ತಲೂ ಬೇವಿನ ತೊಪ್ಪಲು ಅದರಲ್ಲಿ ಜೋಳದಂಥ ದವಸ ಧಾನ್ಯ ಇರಿಸಿಕೊಂಡು ತಲೆಯ ಮೇಲೆ ಹೊತ್ತು ಮನೆ, ಮನೆಗೆ ತೆರಳಿ ‘ಅಡ್ಡಡ್ಡ ಮಳಿ ಬಂದು ದೊಡ್ಡ, ದೊಡ್ಡ ತೆನೆಯಾಗಿ, ಗೊಡ್ಡುಗಳೆಲ್ಲ ಹಯನಾಗಿ ಜೋಕುಮಾರ’ ಎಂಬ ಜೋಕುಮಾರನ ಗುಣಗಾನ ಮಾಡುವ ಹಾಡು ಹೇಳುತ್ತಿದ್ದರು.ನಂತರ ಆಯಾ ಮನೆಯವರು ಜೋಳದಂಥ ದವಸ ಧಾನ್ಯ ನೀಡಿ ಜೋಕುಮಾರನಿಗೆ ಹಚ್ಚಿದ ಬೆಣ್ಣೆಯನ್ನು ಪಡೆದುಕೊಳ್ಳುತ್ತಿದ್ದರು.

ಇಂದು ಕುಂಬಾರ ಮನೆಯಿಂದ ಆರಂಭಗೊಂಡು ಅಗಸರ ಮನೆ, ನೀಲಗಂಗಮ್ಮ ಗುಡಿ, ಸಾರಂಗಮಠ, ಗೌಡರ ಮನೆಗಳು, ಶಾಂತೇಶ್ವರಮಠ ಹೀಗೆ ಸಂಚಾರ ನಡೆದಿದೆ.ಶುಕ್ರವಾರದಿಂದ ಗುರುವಾರದ­ವರೆಗೆ ನಗರದಲ್ಲೆಲ್ಲ ಜೋಕುಮಾರನ ಸಂಚಾರ ನಡೆಯುತ್ತದೆ. ಜೋಕುಮಾರ ರಸ್ತೆಯಲ್ಲಿ ಬರುವ ಸಮಯ ಗಣೇಶನನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ಇವರಿಬ್ಬರೂ ಒಬ್ಬರೊಬ್ಬರನ್ನು ನೋಡುವುದಿಲ್ಲ ಎಂದು ಆತನನ್ನು ಹೊತ್ತುಕೊಂಡ ಶರಣಮ್ಮ ಮಲ್ಲಪ್ಪ ವಾಲಿಕಾರ, ಲಕ್ಕವ್ವ ಬಸೂ ಕಡಕೋಳ, ಸವಿತಾ ಮಲ್ಲಿಕಾರ್ಜುನ ಹೊನಗುಡಿ, ಗಂಗಮ್ಮ ವಿಠ್ಠಲ ಜವಳಗಿ ‘ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry