ಜೋಕುಮಾರ ಬಂದವ್ನೆ, ದವ್ಸ ನೀಡ್ರವ್ವ..

7

ಜೋಕುಮಾರ ಬಂದವ್ನೆ, ದವ್ಸ ನೀಡ್ರವ್ವ..

Published:
Updated:

ನಾಯಕನಹಟ್ಟಿ:  ವಾರದ ದೇವರೆಂದೇ ಕರೆಯಲ್ಪಡುವ ಜೋಕುಮಾರ ಸ್ವಾಮಿಯನ್ನು ಹೊತ್ತು  ದವಸ ಧಾನ್ಯಗಳನ್ನು ಬೇಡುತ್ತಾ ಮನೆ ಮನೆಗಳಿಗೆ ತೆರಳಿ ಜೋಕುಮಾರ ಸ್ವಾಮಿಯ ಆಚರಣೆ ಮಾಡುವ ದೃಶ್ಯ ಸಮೀಪದ ಅಬ್ಬೇನಹಳ್ಳಿಯಲ್ಲಿ ಸೋಮವಾರ ಕಂಡು ಬಂದಿತು.–ಜೋಕುಮಾರ ಬಂದವ್ನೆ ಬಾಗಿಲಾಗೆ...ಬೆಣ್ಣೆ, ದವ್ಸ ನೀಡಿರವ್ವ ಜೋಳಿಗೆಗೆ...ಎನ್ನುವ ಹಾಡನ್ನು ಹಾಡುತ್ತಾ ಮಹಿಳೆಯರು ಮನೆಗಳಿಗೆ ತೆರಳಿ ಜೋಕುಮಾರ ಸ್ವಾಮಿಯ ಹುಟ್ಟು, ಏಳು ದಿನಗಳ ನಂತರ ಕೈಲಾಸಕ್ಕೆ ಹಿಂತಿರುಗುವ ಕಥೆಯನ್ನು ಹೇಳಿ ದವಸಗಳನ್ನು ಸಂಗ್ರಹಿಸಿದರು.ಹಬ್ಬದ ಹಿನ್ನೆಲೆ: ಗಣೇಶನು ಭೂಮಿಗೆ ಬಂದು  ಭಕ್ಷ್ಯ ಭೋಜನಗಳನ್ನು ಸವಿದು ಸಂತುಷ್ಟನಾಗಿ ಕೈಲಾಸಕ್ಕೆ ಹಿಂತಿರುಗಿ ಭೂಲೋಕದಲ್ಲಿ ಎಲ್ಲರೂ ಸೌಖ್ಯದಿಂದ ಇದ್ದಾರೆ ಎಂದು ಶಿವನಿಗೆ ತಿಳಿಸಿದ ನಂತರ ಭೂಲೋಕಕ್ಕೆ ಜೋಕುಮಾರ ಸ್ವಾಮಿ ಆಗಮಿಸುತ್ತಾನೆ. 

ಏಳುದಿನಗಳ ಕಾಲ ತಿರುಗಿದರೂ ದವಸ ದೊರೆಯದಿದ್ದರಿಂದ ಹುಣ್ಣಿಮೆಯ ದಿನ ಕೈಲಾಸಕ್ಕೆ ಹಿಂತಿರುಗಿ ಇಲ್ಲಿನ ಸ್ಥಿತಿಯನ್ನು ಶಿವನಿಗೆ ವಿವರಿಸಿ ಮಳೆ ಬರುವಂತೆ ಮಾಡುತ್ತಾನೆ. ಆದ್ದರಿಂದ, ಜೋಕುಮಾರ ಸ್ವಾಮಿಯ ಆಚರಣೆಯ ನಂತರ ಮಳೆ ಬಂದೇ ಬರುತ್ತದೆ ಎನ್ನುವ ನಂಬಿಕೆ ಇಂದಿಗೂ ಗ್ರಾಮೀಣರಲ್ಲಿದೆ ಎಂದು ಸಂಪ್ರದಾಯದ ಬಗ್ಗೆ ಹೇಳುತ್ತಾರೆ ಅಬ್ಬೇನಹಳ್ಳಿಯ ಹಾಲಪ್ಪ ಜೋಕುಮಾರ ಸ್ವಾಮಿಗೆ ಭೂಮಿಯಲ್ಲಿ ಏಳು ದಿನಗಳು ಮಾತ್ರ ಆಯುಷ್ಯ ವಿರುವುದರಿಂದ ವಾರದ ಜೋಕುಮಾರ ಸ್ವಾಮಿಯೆಂದು ಕರೆಯುವುದು ವಾಡಿಕೆ.ಬಾರಕ ಜನಾಂಗ ಬಿದಿರಿನ ಪುಟ್ಟಿಯಲ್ಲಿ ಬೆಣ್ಣೆ, ಹಾಗೂ ಬೇವಿನ ಸೊಪ್ಪಿನಿಂದ ಅಲಂಕರಿಸಿದ ಸ್ವಾಮಿಯನ್ನು ಹೊತ್ತು ಹಳ್ಳಿಗಳಲ್ಲಿ ಮನೆಗಳಿಗೆ ತೆರಳಿ ಬೆಣ್ಣೆ, ಧಾನ್ಯಗಳನ್ನು ಸಂಗ್ರಹಿಸಿ ಬಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಯ ದಿನ ಜೋಕುಮಾರ ಸ್ವಾಮಿಯನ್ನು ಕೆರೆಯಲ್ಲಿ ವಿಸರ್ಜಿಸುತ್ತಾರೆ ಎಂದು ಗ್ರಾಮದ ಸುಮಂಗಳಮ್ಮ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry