ಬುಧವಾರ, ನವೆಂಬರ್ 20, 2019
20 °C

ಜೋಗ ಪ್ರಪಾತ ಏರಿದ `ಕೋತಿ ರಾಮ'

Published:
Updated:

ಕಾರ್ಗಲ್: ಚಿತ್ರದುರ್ಗದ `ಕೋತಿರಾಮ' ಖ್ಯಾತಿಯ ಜ್ಯೋತಿ ಪ್ರಕಾಶ್ ಶನಿವಾರ ವಿಶ್ವವಿಖ್ಯಾತ ಜೋಗದ ರಾಣಿ ಜಲಪಾತದ ತಳದಿಂದ ಯಾವುದೇ  ಹಗ್ಗ, ಇನ್ನಿತರ ಸಾಮಗ್ರಿಗಳ ಸಹಾಯವಿಲ್ಲದೆ ಬರಿಗೈಲಿ ತುದಿಯವರೆಗೆ ಏರಿ ಸಾಹಸ ಮೆರೆದರು.960 ಅಡಿ ಎತ್ತರದ ಜಲಪಾತದ ಉರುಳು ಬಂಡೆಗಳನ್ನು ಕೇವಲ 23 ನಿಮಿಷಗಳಲ್ಲಿ ಹತ್ತಿ ಗುರಿಮುಟ್ಟುವ ವಿಶ್ವಾಸದೊಂದಿಗೆ ಸಾಹಸ ಆರಂಭಿಸಿದ್ದರು. ಆದರೆ, ಪ್ರತಿಕೂಲ ಸನ್ನಿವೇಶದಿಂದಾಗಿ ನಿಗದಿತ ಗುರಿಮುಟ್ಟಲು ಅವರು, ಸುಮಾರು 3 ಗಂಟೆ ಸಮಯ ತೆಗೆದುಕೊಂಡರು.ದಟ್ಟವಾಗಿ ಪಾಚಿಕಟ್ಟಿದ ಬಂಡೆಗಳನ್ನು ಏರುವುದು ಅತ್ಯಂತ ಕಷ್ಟಕರವಾದ ಸವಾಲಾಗಿದ್ದರೂ, ನಿರ್ಭಯವಾಗಿ ಮತ್ತು ಏಕಾಂಗಿಯಾಗಿ ಮಾಡಿದ ಈ ಸಾಹಸ ಸಾವಿನ ಜತೆ ಸರಸವಾಡಿದಂತೆ ಇತ್ತು. ಜಲಪಾತದ ಮಧ್ಯ ಭಾಗದಲ್ಲಿ ಏರುತ್ತಿದ್ದ ಹಂತದಲ್ಲಿ ಬಂಡೆಕಲ್ಲೊಂದು ಕಳಚಿಬಿದ್ದ ಪರಿಣಾಮ `ಕೋತಿರಾಮ' ಸುಮಾರು 20 ಅಡಿಗಳಷ್ಟು ಆಳಕ್ಕೆ ಒಮ್ಮೆಲೆ ಜಾರಿ ಬಿದ್ದರು. ಆದರೂ, ಧೈರ್ಯಗುಂದದೇ ಮತ್ತೆ ಸಾಹಸ ಮುಂದುವರಿಸಿದರು. ಗುರಿ ಮುಟ್ಟಿದ ನಂತರ ಕಾರ್ಗಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.ಸಾವಿನ ಅಪಾಯ ಮೆಟ್ಟಿನಿಂತು ಮುಂದುವರಿದ ಸಾಹಸಿಯ ಧೈರ್ಯವನ್ನು ಪ್ರವಾಸಿಗರು ಮತ್ತು ಸ್ಥಳೀಯರು ಶ್ಲಾಘಿಸಿದರು. `ಜೋಗದ ನೆಲದಲ್ಲಿ ಕೋತಿರಾಮ ಇತಿಹಾಸ ಸೃಷ್ಟಿಸಿದರು' ಎಂದು ಸ್ಥಳೀಯ ಚಾಲಕರ ಸಂಘದ ಅಧ್ಯಕ್ಷ ಟಿ. ಸುರೇಶ್ ಅಭಿನಂದಿಸಿದರು.ಚೇತರಿಕೆ: ಜೋಗ ಜಲಪಾತವನ್ನು ಏರುತ್ತಿದ್ದಾಗ ಬಂಡೆ ಕಳಚಿ 20 ಅಡಿ ಆಳಕ್ಕೆ ಬಿದ್ದು ಗಾಯಗೊಂಡಿದ್ದ `ಕೋತಿ ರಾಜ' ಗುಣಮುಖರಾಗಿದ್ದಾರೆ.ಕೋತಿರಾಜ ಅವರನ್ನು ಅಲ್ಲಿದ್ದ ಜನರು ಒತ್ತಾಯ ಪೂರ್ವಕವಾಗಿ ಕಾರ್ಗಲ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಗಿತ್ತು. `ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೋತಿರಾಜ ಯಾವುದೇ ಆತಂಕವಿಲ್ಲದೆ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದರು' ಎಂದು ಅವರ ಆಪ್ತರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)