ಗುರುವಾರ , ಮೇ 19, 2022
23 °C

ಜೋಡಿ ಎತ್ತಿನ ರಾಜಕೀಯ ಸಮ್ಮೇಳನ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ:  ಕನ್ನಡ ಸಾಹಿತ್ಯ ಸಮ್ಮೇಳನ, ವಿದ್ಯಾರ್ಥಿ ಸಮ್ಮೇಳನ...ಹೀಗೆ ಹಲವು ಸಮ್ಮೇಳನದ ಬಗ್ಗೆ ಕೇಳಿದ್ದೇವೆ. ಇದಾವುದು, ‘ಜೋಡೆತ್ತಿನ ರಾಜಕೀಯ ಸಮ್ಮೇಳನ..’ ಎಂದು ಹಲವರು ಉಬ್ಬೇರಿಸಬಹುದು.ಇದು, ರಾಜಕೀಯ ಪಕ್ಷವೊಂದರ ಸಮ್ಮೇಳನ. ಆ ಪಕ್ಷದ ಚಿನ್ಹೆ ‘ಜೋಡಿ ಎತ್ತು’. ಹೀಗಾಗಿ, ಇದನ್ನು ‘ಜೋಡೆತ್ತಿನ ರಾಜಕೀಯ ಸಮ್ಮೇಳನ’ ಎಂದು ಕರೆದಿದ್ದು. ಇಂತಹ ದೊಂದು ಸಮ್ಮೇಳನ ನಾಲ್ಕು ದಶಕಗಳ ಹಿಂದೆಯೇ ಮಂಡ್ಯದಲ್ಲಿ ನಡೆದಿದ್ದು, ಇತಿಹಾಸ ಪುಟದಲ್ಲಿದೆ.1970ರ ಏಪ್ರಿಲ್ 30ರಲ್ಲಿ ಜರುಗಿದ ‘ಮಂಡ್ಯ ಜಿಲ್ಲಾ ರಾಜಕೀಯ’ ಸಮ್ಮೇಳನಕ್ಕೆ ‘ಸಕ್ಕರೆ ನಗರ’ ವೇದಿಕೆ ಕಲ್ಪಿಸಿತ್ತು. ಆಗ, ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪ, ಮುಖ್ಯಮಂತ್ರಿ ವೀರೇಂದ್ರ ಪಾಟೀಲ್, ಎಂಪಿಸಿಸಿ ಅಧ್ಯಕ್ಷ ನಾಗಪ್ಪ ಆಳ್ವ, ಶಿಕ್ಷಣ ಸಚಿವರಾಗಿದ್ದ ಕೆ.ವಿ.ಶಂಕರಗೌಡ, ಮಂಡ್ಯದ ಶಾಸಕ ಜಿ. ನಾಗಪ್ಪ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದ ಸಮ್ಮೇಳನವದು. ಕಾರಣವೇನು?: ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಅಖೈರುಗೊಳಿಸುವ ಸಂಬಂಧ 1969ರಲ್ಲಿ ಎಐಸಿಸಿ ಸಭೆ ನಡೆದಿರುತ್ತದೆ. ಆಗ, ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿ. ಎಸ್. ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರು.‘ವಿ.ವಿ.ಗಿರಿ’ ಅವರ ಪರ ಇಂದಿರಾ ಗಾಂಧಿ ಅವರು ಪಟ್ಟು ಹಿಡಿದರೆ, ‘ನೀಲಂ ಸಂಜೀವರೆಡ್ಡಿ’ ಪರ ಎಸ್. ನಿಜಲಿಂಗಪ್ಪ, ಕಾಮರಾಜ್ ಅವರು ಸೇರಿದಂತೆ ಹಲವರು ಲಾಭಿ ನಡೆಸುತ್ತಾರೆ. ಬಿಸಿಬಿಸಿ ಚರ್ಚೆಯಾದರೂ, ಅಭ್ಯರ್ಥಿ ಹೆಸರು ಅಂತಿಮವಾಗುವುದಿಲ್ಲ. ಕಡೆಗೆ, ಇಂದಿರಾ ಸಭೆಯಿಂದ ಹೊರಬರುತ್ತಾರೆ.ಎರಡೂ ಬಣಗಳು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತವೆ. ‘ಆತ್ಮಸಾಕ್ಷಿ’ಗೆ ಅನುಗುಣವಾಗಿ ವೋಟ್ ಮಾಡಲು ಇಂದಿರಾ ಅವರು, ಮನವಿ ಮಾಡುತ್ತಾರೆ. ಅಂತಿಮವಾಗಿ, ವಿ.ವಿ.ಗಿರಿ ಅವರು ಚುನಾಯಿತರಾಗುತ್ತಾರೆ. ಕಾಂಗ್ರೆಸ್ ಇಬ್ಭಾಗವಾಗುತ್ತದೆ. ಆಗ, ಕಾಂಗ್ರೆಸ್ ಗುರುತು ‘ಜೋಡಿ ಎತ್ತು’.ಇಂದಿರಾ ಬಣ ಕಾಂಗ್ರೆಸ್(ಆರ್) ಆಗಿಯೂ, ನಿಜಲಿಂಗಪ್ಪ ಬಣ ಕಾಂಗ್ರೆಸ್(ಒ) ಆಗಿಯೂ ಇಬ್ಭಾಗವಾಗಲಿದೆ. 1971ರಲ್ಲಿ ಲೋಕಸಭಾ ಚುನಾವಣೆ ಬರುವ ಹಿನ್ನೆಲೆಯಲ್ಲಿ, ಪಕ್ಷ ಸಂಘಟನೆ, ಬಲವರ್ಧನೆಗಾಗಿ ನಿಜಲಿಂಗಪ್ಪ ಅವರು ಪ್ರವಾಸ ಮಾಡುತ್ತಾರೆ. ಆಗಲೇ ಮಂಡ್ಯದಲ್ಲಿ ಈ ‘ರಾಜಕೀಯ ಸಮ್ಮೇಳನ’ ನಡೆದುದು.‘ನೂರಾರು ರೈತರು ‘ಜೋಡಿ ಎತ್ತು’ಗಳೊಂದಿಗೆ ನಗರಕ್ಕೆ ಬಂದಿದ್ದರು. ಕಾಳಿಕಾಂಬಾ ದೇಗುಲ-ಸಂಗಪ್ಪನ ಛತ್ರದ ರಸ್ತೆ ಮೂಲಕ ಈ ಮೆರವಣಿಗೆ ನಿಗದಿತ ಸ್ಥಳ ತಲುಪಿತು. ರಾಷ್ಟ್ರ, ರಾಜ್ಯ ಮಟ್ಟದ ಮುಖಂಡರು ಬಂದಿದ್ದರು. ಸಮ್ಮೇಳನ ಯಶಸ್ವಿಯಾಯಿತು’ ಎನ್ನುತ್ತಾರೆ ಮಾಜಿ ಶಾಸಕ ಜಿ. ನಾಗಪ್ಪ.ಆ ನಂತರ, ‘ಜೋಡೆತ್ತಿನ’ ಗುರುತಿಗಾಗಿ ಎರಡೂ ಬಣಗಳು ಲಾಭಿ ನಡೆಸಿದವಾದರೂ, ಚುನಾವಣಾ ಆಯೋಗ ಇಬ್ಬರ ಮನವಿ ಯನ್ನೂ ಪುರಸ್ಕರಿಸಲಿಲ್ಲ. ಅದೇ ಕಡೆ, ಕಾಂಗ್ರೆಸ್ ‘ಜೋಡೆತ್ತಿನ’ ಚಿನ್ಹೆ ಕಳೆದುಕೊಳ್ಳಬೇಕಾಯಿತು’ ಎಂದೂ ನೆನಪಿಸಿಕೊಳ್ಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.