ಭಾನುವಾರ, ಆಗಸ್ಟ್ 25, 2019
21 °C
ಯರ್ತಿಗಾನ ಹಳ್ಳಿ-ಅಕ್ಲೆಮಲ್ಲೇನ ಹಳ್ಳಿಯಲ್ಲಿ ಆತಂಕ ್ಞ ಅಂಟುಜಾಡ್ಯದ ಶಂಕೆ

ಜೋಡಿ ಗ್ರಾಮಗಳಲ್ಲಿ ಕಾಡುತ್ತಿರುವ ಅನೂಹ್ಯ ಜ್ವರ

Published:
Updated:
ಜೋಡಿ ಗ್ರಾಮಗಳಲ್ಲಿ ಕಾಡುತ್ತಿರುವ ಅನೂಹ್ಯ ಜ್ವರ

ದೇವನಹಳ್ಳಿ: `ಸ್ವಾಮಿ ತಲೆಭಾರ, ಮೈ ಕೈಯನ್ನೆಲ್ಲಾ ಯಾರೋ ಹಗ್ಗದಲ್ಲಿ ಬಿಗಿದಂತೆ ಆಗುತ್ತಿದೆ. ಆಸ್ಪತ್ರೆಗೆ ತೋರಿಸಿ ಸಾಕಾಗಿದೆ. ಆದರೂ ಜ್ವರ ಬಿಟ್ಟಿಲ್ಲ. ಮನೆಯಿಂದ ಆಚೆ ಬರಂಗಿಲ್ಲ. ಮನೆಯಲ್ಲಿರುವ ಆರು ಮಂದಿಗೂ ಇದೇ ಸ್ಥಿತಿ. ಕೂರಲಿಕ್ಕೂ ಆಗುವುದಿಲ್ಲ. ಯಮಯಾತನೆಯಲ್ಲಿ ಹಾಸಿಗೆಯಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಹೊರಳುತ್ತಾ ಬಾಧೆ ಅನುಭವಿಸುತ್ತಿದ್ದೇನೆ'...ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ತಡೆಗೋಡೆಗೆ ಅಂಟಿಕೊಂಡಿರುವ ಯರ್ತಿಗಾನಹಳ್ಳಿಯ ಎಂ.ಮುನಯ್ಯ ತನ್ನ ಜ್ವರದ ಬಾಧೆಯನ್ನು ಈ ರೀತಿ ವಿವರಿಸುತ್ತಿದ್ದರೆ ಆ ಪರಿಸರದಲ್ಲೇ ನಿಲ್ಲಲು ಭಯವಾಗುವಂತಹ ಪರಿಸ್ಥಿತಿ. ವಿಮಾನ ನಿಲ್ದಾಣದ ಪಶ್ಚಿಮಕ್ಕಿರುವ ಕನ್ನಮಂಗಲ ಗೇಟ್‌ನಿಂದ ಪೂರ್ವಕ್ಕೆ ಕೇವಲ ಒಂದೂವರೆ ಕಿ.ಮೀ.ದೂರದಲ್ಲಿರುವ ಈ ಹಳ್ಳಿಗೆ ಬುಧವಾರ ಬೆಳಿಗ್ಗೆ `ಪ್ರಜಾವಾಣಿ' ಪ್ರತಿನಿಧಿ ಭೇಟಿ ನೀಡಿದಾಗ ಗ್ರಾಮಸ್ಥರು ಅಕ್ಷರಶಃ ಕಣ್ಣೀರಿಟ್ಟು ತಮ್ಮ ಸಂಕಟ ತೋಡಿಕೊಂಡರು.`ಇದು ಚಿಕೂನ್ ಗುನ್ಯಾವೋ, ಟೈಫಾಯಿಡೋ ಅಥವಾ ಡೆಂಗೆ ಜ್ವರವೇ.... ಏನು ಎಂಬುದೇ ಗೊತ್ತಾಗುತ್ತಿಲ್ಲ. ಆದರೆ ನಾವೆಲ್ಲಾ ಕ್ಷಣಕ್ಷಣವೂ ನರಳುತ್ತಿದ್ದೇವೆ. ಹತ್ತಿರದಲ್ಲಿ ಯಾವುದೇ ಸಾರ್ವಜನಿಕ ಆಸ್ಪತ್ರೆ ಇಲ್ಲ. ಯಲಹಂಕದಲ್ಲಿರು ಖಾಸಗಿ ಆಸ್ಪತ್ರೆಗೇ ಹೋಗಬೇಕು. ಈಗಾಗಲೇ ನಾನು ಸುಮಾರು 60 ಸಾವಿರ ರೂಪಾಯಿ ಖರ್ಚು ಮಾಡಿದ್ದೇನೆ. ಔಷಧಿ, ಚುಚ್ಚುಮದ್ದು, ಗ್ಲೂಕೊಸ್ ಬಾಟಲಿಗಳನ್ನು ನೋಡಿ ನೋಡಿ ಸಾಕಾಗಿದೆ. ನಾನು ಹುಟ್ಟಿದಾಗಿನಿಂದಲೂ ಇಂತಹ ಕಾಯಿಲೆ ಕಂಡಿರಲಿಲ್ಲ' ಎಂದು ಮುನಯ್ಯ ಸಾವರಿಸಿಕೊಂಡು ಹೇಳುತ್ತಿದ್ದರೆ ಪರಿಸ್ಥಿತಿಯ ಭೀಕರತೆ ಮತ್ತು ಗ್ರಾಮಸ್ಥರು ಎಷ್ಟು ಹೈರಾಣಾಗಿದ್ದಾರೆ ಎಂಬುದು ಎದ್ದು ಕಾಣುತ್ತಿತ್ತು.ಸಾಂಕ್ರಾಮಿಕದಂತೆ ಹಬ್ಬುತ್ತಿದೆ:

ಯರ್ತಿಗಾನ ಹಳ್ಳಿಯು ದೇವನಹಳ್ಳಿ ತಾಲ್ಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರದೇಶ. ಯರ್ತಿಗಾನಹಳ್ಳಿಯ ದಕ್ಷಿಣಕ್ಕೆ ಅಕ್ಲೆಮಲ್ಲೇನಹಳ್ಳಿ ಅಂಟಿಕೊಂಡಿದೆ. ಇಲ್ಲಿ ಈ ವರ್ಷದ ಜೂನ್ ತಿಂಗಳ ಮೊದಲ ವಾರದಿಂದಲೂ ಜನರು ವಿಚಿತ್ರ ರೀತಿಯ ಜ್ವರದ ಬಾಧೆಯಿಂದ ನರಳುತ್ತಿದ್ದಾರೆ. ಒಬ್ಬರಿಂದ ಒಬ್ಬರಿಗೆ ಜ್ವರ ಸಾಂಕ್ರಾಮಿಕದಂತೆ ಹಬ್ಬುತ್ತಿದೆ. ಸದ್ಯ ಎರಡೂ ಗ್ರಾಮಗಳಲ್ಲಿ 70ರಿಂದ 80 ಮಂದಿ ಜ್ವರದಿಂದ ನರಳುತ್ತಿದ್ದಾರೆ.`ಜ್ವರ ಮತ್ತು ರೋಗದ ಮುಖ್ಯ ಲಕ್ಷಣಗಳು ಎಂದರೆ ಮೈ ಕೈ ನೋವು, ಸುಸ್ತು ಹಾಗೂ ಮನೆಯಲ್ಲಿ ಒಬ್ಬರಿಗೆ ಜ್ವರಬಂದರೆ ಸಾಕು ಇತರರಿಗೂ ಇದು ಅಂಟಿಕೊಳ್ಳುತ್ತಿರುವುದು ನಮ್ಮನ್ನು ಕಂಗೆಡಿಸಿದೆ' ಎಂದು ಗ್ರಾಮಸ್ಥರು ವಿವರಿಸಿದರು.`ಯರ್ತಿಗಾನ ಹಳ್ಳಿಯ ಸಾವಿತ್ರಮ್ಮ, ರಾಮಮೂರ್ತಿ, ಹರೀಶ್, ಮದನ ನಾಯಕ, ಮುನಿಯಪ್ಪ ಸೇರಿದಂತೆ ಎಂಟಕ್ಕೂ ಹೆಚ್ಚು ಮಂದಿ ಯಲಹಂಕದ ವಿವಿಧೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಚಂದ್ರಶೇಖರ್ (16), ರಾಮಾಂಜನಯ್ಯ (48), ಚಂದೂ ನಾಯಕ, ಸಂಜೀವಮ್ಮ ಎಂಬುವರಿಗೆ ಶಂಕಿತ ಡೆಂಗೆ ಜ್ವರ ಇದೆ ಎಂದು ಹೇಳಲಾಗಿದ್ದು ಇವರೆಲ್ಲಾ ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡವರು ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಭಯದಲ್ಲಿದ್ದಾರೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.ಬಸ್ ಸಂಚಾರವೇ ಇಲ್ಲ:`ಯರ್ತಿಗಾನಹಳ್ಳಿ ಮತ್ತು ಅಕ್ಲೇಮಲ್ಲೆನಹಳ್ಳಿಗಳು ದೇವನಹಳ್ಳಿ ಕಸಬಾ ವ್ಯಾಪ್ತಿಗೆ ಸೇರಿವೆ. ಇಲ್ಲಿಗೆ ಸರಿಯಾದ ಬಸ್ ಸಂಚಾರವೇ ಇಲ್ಲ. ಗ್ರಾಮಸ್ಥರು ತಂತಮ್ಮ ಗ್ರಾಮಗಳಿಂದ ಎರಡು ಕಿಲೋ ಮೀಟರ್ ದೂರ ನಡೆದು ರಾಷ್ಟ್ರೀಯ ಹೆದ್ದಾರಿ 7ರ ಕನ್ನಮಂಗಲ ಗೇಟ್‌ಗೆ ಬರಬೇಕು. ಈ ಗ್ರಾಮಗಳಿಂದ 6 ಕಿ.ಮೀ ದೂರದಲ್ಲಿ ಉತ್ತರಕ್ಕೆ ತಾಲ್ಲೂಕು ಕೇಂದ್ರ ದೇವನಹಳ್ಳಿ ಇದೆ. ಆದರೆ ಇವುಗಳನ್ನು 15 ಕಿ.ಮೀ ದೂರ ಇರುವ ಕುಂದಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡಿಸಲಾಗಿದೆ. ವಿಪರ್ಯಾಸ ಎಂದರೆ ಪಶ್ಚಿಮಕ್ಕೆ ಮೂರು ಕಿ.ಮೀ ದೂರದಲ್ಲಿಯೇ ಸಾದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇಲ್ಲಿನ ಆರೋಗ್ಯ ಕೇಂದ್ರದವರು ರೋಗಿಗಳನ್ನು ಕುಂದಾಣಕ್ಕೆ ಹೋಗಿ ಎಂದು ಕಳುಹಿಸಿ ತಮ್ಮ ಕೈತೊಳೆದುಕೊಳ್ಳುತ್ತಾರೆ' ಎಂಬುದು ಗ್ರಾಮಸ್ಥರ ಆರೋಪ.`ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿರುವ ಈ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಇವರಲ್ಲಿನ ಕೆಲ ಸಿರಿವಂತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತ್ದ್ದಿದರೆ ಕಡುಬಡವರು, ಕೂಲಿಕಾರರು ಅತ್ತ ದುಡಿಯಲಾಗದೆ ಇತ್ತ ಗುಣಮುಖರಾಗದೆ ಯಂತ್ರ, ಮಂತ್ರ, ತಂತ್ರಗಳಂತಹ ಮೂಢನಂಬಿಕೆಗಳ ಮೊರೆ ಹೋಗುತ್ತಿದ್ದಾರೆ' ಎಂದು ಗ್ರಾಮದ ಯುವಕ ಆನಂದ ಕುಮಾರ್ ಆತಂಕ ವ್ಯಕ್ತಪಡಿಸುತ್ತಾರೆ.ಯಾರೂ ಬಂದಿಲ್ಲ: `ಇಷ್ಟೆಲ್ಲಾ ಜನರು ನರಳುತ್ತಿದ್ದರೂ ಈತನಕ ಗ್ರಾಮಕ್ಕೆ ಸರ್ಕಾರಿ ವೈದ್ಯರಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ. ಬಾಲಕರು ಹಾಗೂ ವಯಸ್ಕರನ್ನು ಹೇಗೋ ಆಟೊ ರಿಕ್ಷಾ ಅಥವಾ ಬೈಕ್‌ಗಳ ಮೂಲಕ ಆಸ್ಪತ್ರೆಗೆ ಕರೆದೊಯ್ಯಬಹುದು. ಆದರೆ ವೃದ್ಧರು, ತೀರಾ ನಿಶ್ಯಕ್ತಿ ಇರುವವರು, ಓಡಾಡಲು ಆಗದಂತಹ ಜನರನ್ನು ಹೇಗೆ ಕರೆದುಕೊಂಡು ಹೋಗಬೇಕು. ಅವರಿಗೆ ಹೇಗೆ ಚಿಕಿತ್ಸೆ ಕೊಡಿಸಬೇಕು ಎಂಬುದೇ ದೊಡ್ಡ ತಲೆನೋವಾಗಿದೆ' ಎನ್ನುತ್ತಾರೆ ಗ್ರಾಮದ ಹಿರಿಜೀವ ಪಿಳ್ಳೇಗೌಡ.ಹೊರಗಿನವರ ಅಶುಚಿತ್ವ: `ವಿಮಾನ ನಿಲ್ದಾಣದ ತಡೆಗೋಡೆಯ ಆಚೆಗಿನ ಒಳಭಾಗದಲ್ಲಿ ಚಿಕ್ಕ ಕೆರೆ ಇದೆ. ಬೇಸಿಗೆ ಇರಲಿ, ಮಳೆಗಾಲವಿರಲಿ ಅಲ್ಲಿ ಸದಾಕಾಲ ನೀರಿರುತ್ತದೆ. ವಿಮಾನ ನಿಲ್ದಾಣ ವ್ಯಾಪ್ತಿಯ ತ್ಯಾಜ್ಯಗಳನ್ನು ಈ ಕೆರೆಯ ಬದಿಯಲ್ಲೇ ಹಾಕಲಾಗುತ್ತದೆ. ಅಕ್ಲೇಮಲ್ಲೇನ ಹಳ್ಳಿಯಲ್ಲಿ 150 ಜನರು ವಾಸವಾಗಿದ್ದರೆ, ಯರ್ತಿಗಾನ ಹಳ್ಳಿಯಲ್ಲಿ 650ರಷ್ಟು ಜನಸಂಖ್ಯೆ ಇದೆ. ಬಹಳಷ್ಟು ಜನರು ಅಂದಿನ ಕೂಲಿಯನ್ನೇ ನಂಬಿ ಬದುಕುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಜಮೀನು ನೀಡಿರುವ ಇಲ್ಲಿನ ಜನರಿಗೆ ಈಗ ಸೂಕ್ತ ಉದ್ಯೋಗವಿಲ್ಲ.ದಿನಗೂಲಿಯನ್ನು ಹೊರತುಪಡಿಸಿದರೆ ಉಳಿದವರು ಅಲ್ಲಿ ಇಲ್ಲಿ ಕಾಡಿ ಬೇಡಿ ಖಾಸಗಿ ಕಂಪೆನಿಗಳಲ್ಲಿ ಕೆಲಸ ಹುಡುಕಿಕೊಂಡಿದ್ದಾರೆ. ಈ ಗ್ರಾಮಗಳಲ್ಲಿ ಬಿಹಾರ್, ಅಸ್ಸಾಂ, ಜಾರ್ಖಂಡ್ ರಾಜ್ಯದವರೇ ಹೆಚ್ಚಾಗಿ ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ಇವರಲ್ಲಿ ಬಹುತೇಕರು ಅವಿವಾಹಿತರು. ಎಲ್ಲರೂ ವಿಮಾನ ನಿಲ್ದಾಣದಲ್ಲಿ ನೌಕರಿ ಮಾಡುತ್ತಾರೆ. ಇವರು ತಂತಮ್ಮ ಮನೆಗಳ ಸುತ್ತಮುತ್ತ ಶುಚಿತ್ವ ಕಾಪಾಡುತ್ತಿಲ್ಲ' ಎಂಬುದು ಗ್ರಾಮಸ್ಥರ ಸಾಮೂಹಿಕ ಅಭಿಪ್ರಾಯ.`ಪಂಚಾಯಿತಿಗೆ ಪ್ರಶಸ್ತಿ ಬೇರೆ ಕೇಡು'

`ಸಂಪೂರ್ಣ ನೈರ್ಮಲ್ಯ ಹೊಂದಿರುವ ಅಗ್ಗಳಿಕೆಯ ಗ್ರಾಮ ಎಂಬುದಾಗಿ ಅಣ್ಣೇಶ್ವರಕ್ಕೆ ಗ್ರಾಮ ಪಂಚಾಯಿತಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಲಾಗಿದೆ. ಹಲವಾರು ವಿದೇಶಿಯರು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಅನೇಕ ರಾಜ್ಯಗಳ ಪಂಚಾಯತ್ ರಾಜ್ ಇಲಾಖೆಯ ಮಂತ್ರಿಗಳು ಇಲ್ಲಿಗೆ ಭೇಟಿ ನೀಡಿ ಗ್ರಾಮವನ್ನು ಹೊಗಳಿ ಅಟ್ಟಕ್ಕೇರಿಸ್ದ್ದಿದಾರೆ.ನೈರ್ಮಲ್ಯದ ಬಗ್ಗೆ ತರಬೇತಿ ಕಾರ್ಯಗಾರಗಳೂ ಇಲ್ಲಿ  ನಡೆಯುತ್ತವೆ. ಆದರೆ ಕಳೆದ ಮೂರು ತಿಂಗಳಿಂದ ಯರ್ತಿಗಾನಹಳ್ಳಿ ಹಾಗೂ ಅಕ್ಲೆಮಲ್ಲೇನಹಳ್ಳಿಗಳ ಬೀದಿಗಳಲ್ಲಿ, ತೊಟ್ಟಿಗಳಲ್ಲಿ ಬಿದ್ದಿರುವ ಕಸ ವಿಲೇವಾರಿಯಾಗಿಲ್ಲ. ಅವೈಜ್ಞಾನಿಕ ಚರಂಡಿಗಳಿಂದಾಗಿ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಲ್ಲೆ ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರಗಳಾಗಿವೆ'     

   -ಮುನಯ್ಯ,ರೋಗಪೀಡಿತ`ನರಕ ಯಾತನೆ'


`ಜುಲೈ 18ರಿಂದ ಜ್ವರ ಆರಂಭವಾಯಿತು. ಮೂರೇ ದಿನಕ್ಕೆ ಉಲ್ಬಣಗೊಂಡಿತು. ಮೊದಲಿಗೆ ಚಿಕಿತ್ಸೆಗಾಗಿ ದೇವನಹಳ್ಳಿಯ ಖಾಸಗಿ ಕ್ಲಿನಿಕ್‌ಗೆ ದಾಖಲಾದೆ. ಜ್ವರ ಕಡಿಮೆಯಾಗದ ಕಾರಣ ಮತ್ತೊಂದು ಆಸ್ಪತ್ರೆ ಸೇರಿದೆ. ಆರು ದಿನದ ಆಸ್ಪತ್ರೆ ವೆಚ್ಚ ರೂ.7,500 ಆಯಿತು. ಈಗ ಶೇ.25ರಷ್ಟು ಚೇತರಿಕೆಯಾಗಿದೆ. ತಲೆ ಮೇಲೆ ಬಂಡೆ ಹೊತ್ತಿರುವಂತೆ ಭಾಸವಾಗುತ್ತದೆ. ನೋವು, ಕೈಕಾಲು ಸೆಳೆತ, ಸುಸ್ತಿನಿಂದ ನರಕಯಾತನೆ ಅನುಭವಿಸುತ್ತಿದ್ದೇನೆ'

                                        -ರಾಮಾಂಜಿನಪ್ಪ,ರೋಗಪೀಡಿತ`ಬಡವರನ್ನು ನೋಡುವವರೇ ಇಲ್ಲ'


`ಜುಲೈ 18 ರಿಂದ ಜ್ವರ ಆರಂಭವಾಯಿತು. ಮನೆಯವರು ಮಧ್ಯಾಹ್ನ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ರಕ್ತ ಪರೀಕ್ಷೆ ಮಾಡಿದ ವೈದ್ಯರು ಶಂಕಿತ ಡೆಂಗೆ ಜ್ವರ ಎಂದು ತಿಳಿಸಿದರು. ತಕ್ಷಣ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿ ಒಂದು ವಾರ ಚಿಕಿತ್ಸೆ ಪಡೆದೆ. ಒಟ್ಟು ರೂ 30 ಸಾವಿರ ಖರ್ಚಾಗಿದೆ. ನಿನ್ನೆಯಷ್ಟೇ ಮನೆಗೆ ಮರಳಿ ಬಂದಿದ್ದೇನೆ. ಜೀವನ ನಿರ್ವಹಣೆಗೆ ಗಾರೆ ಕೆಲಸ ಮಾಡುತ್ತೇನೆ. ನಮ್ಮಂತಹ ಬಡವರನ್ನು ಯಾರೂ ತಿರುಗಿ ನೋಡಿಲ್ಲ ಸಾರ್'

-ರಾಮಾಂಜಿನಯ್ಯ,`ಜ್ವರ ಬಿಡುತ್ತಲೇ ಇಲ್ಲ'


`ಜುಲೈ ಎರಡನೇ ವಾರದಿಂದ ಜ್ವರ ಕಾಣಿಸಿಕೊಂಡಿದೆ. ಜತೆಗೆ ವಿಪರೀತ ಚಳಿ. ಬೆಳಿಗ್ಗೆ ಚುಚ್ಚುಮದ್ದು ನೀಡಿದ ತಕ್ಷಣ ಜ್ವರದ ಪ್ರಮಾಣ ಕಡಿಮೆ ಆಗುತ್ತಿದೆ ಎನ್ನಿಸುತ್ತಿತ್ತು. ಸಂಜೆಗೇ ಜ್ವರ ಇನ್ನಷ್ಟು ಏರಿತು. ಮೈಲನಹಳ್ಳಿ ಮತ್ತು ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿಲ್ಲ. ರಕ್ತಪರೀಕ್ಷೆ ನಡೆಸಿದಾಗ ಟೈಫಾಯಿಡ್ ಆಗಿದೆ ಎಂದು ಹೇಳಿದರು. ನಂತರ ಹೆಚ್ಚಿನ ಚಿಕಿತ್ಸೆ ಪಡೆದೆ. ಒಟ್ಟು ರೂ. 20 ಸಾವಿರ ಖರ್ಚಾಗಿದೆ. ಇನ್ನೂ  ಜ್ವರ ಸಂಪೂರ್ಣವಾಗಿ ಹೋಗಿಲ್ಲ'

-ಸಿ.ಶ್ಯಾಮಣ್ಣ ,ಯರ್ತಿಗಾನಹಳ್ಳಿ

Post Comments (+)