ಜೋಡಿ ನವತಾರೆ

7

ಜೋಡಿ ನವತಾರೆ

Published:
Updated:

ತಣ್ಣನೆಯ ಬೆಣ್ಣೆಯಂಥ ಮುಖ ಒಂದೆಡೆ; ಕೆಂಡದಂಥ ಪ್ರಖರ ಕಂಗಳು ಇನ್ನೊಂದೆಡೆ. ಒಬ್ಬಾಕೆ ದಿವ್ಯಾ, ಮತ್ತೊಬ್ಬಾಕೆ ಗೌತಮಿ. ತೀರಾ ಇತ್ತೀಚೆಗೆ ಕಿರುತೆರೆಗೆ ಪರಿಚಯಗೊಂಡ ಈ ಇಬ್ಬರು ಪರಸ್ಪರ ಪೈಪೋಟಿಯೊಂದಿಗೆ ಪಕ್ವವಾಗುವ ಪ್ರಯತ್ನ ನಡೆಸಿದ್ದಾರೆ.

ಮುಖದಲ್ಲಿ ಸಣ್ಣ ಗೆರೆಯೂ ಮೂಡುವುದಿಲ್ಲ. ಆದರೂ ಭಾವಗಳ ಪ್ರವಾಹ ಕಂಗಳಲ್ಲಿ. ಅದೇ ನೈಜ ಅಭಿನಯ ಶಕ್ತಿ. ಅದು ಹೇಳಿಸಿಕೊಂಡು ಕಲಿಯುವ ಕಲೆಯಂತೂ ಅಲ್ಲ. ಸಹಜವಾಗಿ ಬರುವಂಥದ್ದು. ಅಂಥದೊಂದು ಶಕ್ತಿಯನ್ನು ಕಿರಿಯ ವಯಸ್ಸಿನಲ್ಲಿಯೇ ಸಿದ್ಧಿಸಿಕೊಂಡವಳು ದಿವ್ಯಾ.ಕಂಗಳ ಚೆಲುವು ಎದ್ದುಕಾಣಲೆಂದು ಹೊಳೆವ ಬಣ್ಣಗಳಿಂದ ತಿದ್ದಿಕೊಂಡು, ಕಣ್ಣೊಳಗೆ ಲೆನ್ಸ್ ಅದ್ದಿಟ್ಟುಕೊಂಡು ಮಿಂಚುವ ಉತ್ಸಾಹ. ಅದು ಗ್ಲಾಮರ್ ಲೋಕದ ಬೆಡಗು. ಅಭಿನಯ ಎಂದರೆ ಮುಖ ಗಂಟಿಕ್ಕುವುದಲ್ಲ ನಾಜೂಕಿನಿಂದ ಭಾವಗಳ ಎಳೆಯನ್ನು ಹಿಡಿದು ತೆಗೆಯುವುದೆಂದು ಅರ್ಥ ಮಾಡಿಕೊಂಡಿರುವ ಮುಗ್ಧ ಹುಡುಗಿ ಗೌತಮಿ.ಇವೆರಡೂ ಸಮಭಾವಗಳು ಸುವರ್ಣ ವಾಹಿನಿಯ `ನಾಗಪಂಚಮಿ~ ಧಾರಾವಾಹಿಯಲ್ಲಿ ಎದ್ದು ಕಾಣಿಸುತ್ತಿವೆ. `ಪಂಚಮಿ~ಯಾಗಿ ಪ್ರೇಕ್ಷಕರಿಗೆ ತಣ್ಣನೆಯ ಭಾವಗಳ ಸ್ಪರ್ಶ ನೀಡುತ್ತಿರುವ ದಿವ್ಯಾ ಒಂದೆಡೆ. ಶಿಸ್ತಿನಿಂದ ಡೈಲಾಗ್ ಒಪ್ಪಿಸಿ ಕಣ್ಣರಳಿಸಿ ನೋಡಿ ಮನಗೆಲ್ಲುವ `ನಾಗರತ್ನ~ ಪಾತ್ರಧಾರಿ ಗೌತಮಿ ಇನ್ನೊಂದೆಡೆ. ಇವರಿಬ್ಬರೂ ಒಟ್ಟಿಗೆ ಕಿರುತೆರೆಗೆ ಕಾಲಿಟ್ಟವರು.ಹಿಂದಿನ ಜನ್ಮದ ಅಕ್ಕ-ತಂಗಿಯರು ಮರುಜನ್ಮದಲ್ಲಿ ಬೇರೆಯಾಗಿ ಹುಟ್ಟಿದರೂ ಬಂಧನದ ಸೆಳೆತವು ಬಲವಾಗಿ ಒಂದಾಗಿ ನಿಲ್ಲುವಂಥ ಕಥೆಯೇ ದಿವ್ಯಾ ಹಾಗೂ ಗೌತಮಿ ನಿಭಾಯಿಸುತ್ತಿರುವ ಪಾತ್ರಗಳ ಪ್ರಭಾವಳಿ. ಧಾರಾವಾಹಿಯ ಪ್ರಮುಖ ಭೂಮಿಕೆಯಲ್ಲಿರುವ ಕಾರಣ ಯಾರ ಮುಖಕ್ಕೆ ಎಷ್ಟು `ಟಿಆರ್‌ಪಿ~ ಎನ್ನುವ ಲೆಕ್ಕಾಚಾರವೂ ಇರುತ್ತದೆ. ಜೊತೆಗೆ ಚಾನೆಲ್ ಕಚೇರಿಯಲ್ಲಿ ಕುಳಿತವರು ಹೇಳಿದಂತೆ ಕಥೆ ಸಾಗುವಾಗ ಸಿಗುವ ಅವಕಾಶವೂ ಮಹತ್ವದ್ದಾಗುತ್ತದೆ.ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ತಮಗೆ ತೆರೆಯ ಮೇಲೆ ಕಾಣಿಸಲು ಸಿಗುವ ಅವಕಾಶವನ್ನು ಸಾರ್ಥಕ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗೌತಮಿ ಹಾಗೂ ದಿವ್ಯಾ ಇಬ್ಬರ ಸಾಹಸ ಹಾಗೂ ಶಕ್ತಿವಿನಿಯೋಗ ಸಮ ಸಮ.ದಿವ್ಯಾಳ `ಪಂಚಮಿ~ ಪಾತ್ರದ ಮಿಂಚು ಪ್ರಖರವಾಗಿದೆ. ಅದಕ್ಕೆ ಕಾರಣ ಭಾವಗಳನ್ನು ಕಟ್ಟಿಕೊಡುವ ಸಾಮರ್ಥ್ಯ ಹಾಗೂ ಜನರು ಸುಲಭವಾಗಿ ಅಪ್ಪಿಕೊಳ್ಳುವಂಥ ಸೌಮ್ಯವಾದ ಪಾತ್ರ. ಆಡಂಬರದ ಅಲಂಕಾರ ಇಲ್ಲದಿದ್ದರೂ ತೆರೆಯ ಮೇಲೆ ಮೂಡಿದ ತಕ್ಷಣ ನೋಡುಗರನ್ನು ಸೆಳೆದಿಡುವ ಶಕ್ತಿ ಇವಳಿಗಿದೆ.ತನ್ನ ಪಾತ್ರದ ಸೂಕ್ಷ್ಮವನ್ನು ಸ್ಪಷ್ಟವಾಗಿ ಅರಿತುಕೊಂಡು ಅಭಿನಯಿಸುವಷ್ಟು ವಿವೇಚನೆಯೂ ಇದೆ. ಅದೇ ಕಾರಣಕ್ಕಾಗಿ ಪ್ರತಿಯೊಂದು ದೃಶ್ಯಕ್ಕೆ ಒಪ್ಪುವ ರಸಾಭಿವ್ಯಕ್ತಿ ಕಷ್ಟವೆನಿಸುವುದೇ ಇಲ್ಲ. ಹುಬ್ಬು ಗಂಟಿಕ್ಕಿ ಎಲ್ಲ ಭಾವಕ್ಕೂ ಏಕಪ್ರಕಾರದ ಪ್ರತಿಕ್ರಿಯೆ ನೀಡುವ ನಟಿಯರ ಸಾಲಿನಿಂದ ಹೊರತಾಗಿ ನಿಲ್ಲುವ ಪ್ರಯತ್ನದಲ್ಲಿ ಈ ಯುವನಟಿಗೆ ಯಶಸ್ಸೂ ಸಿಕ್ಕಿದೆ.ಬಾಲ್ಯದಿಂದಲೇ ಕಲಿತ ನೃತ್ಯ ಕಲೆಯೂ ದಿವ್ಯಾ ನೆರವಿಗೆ ಬಂದಿದೆ. ಗುರು ನಾಟ್ಯಶ್ರೀ ಕೆ.ಎಂ. ರಾಮನ್ ಅವರಿಂದ ಭಾವಗಳ ಶುದ್ಧತೆ ಏನೆಂದು ಅರಿತಿದ್ದು ಕೂಡ ಸಹಕಾರಿ. ಆದರೂ ನೃತ್ಯ ಹಾಗೂ ಕಿರುತೆರೆಯಲ್ಲಿನ ಅಭಿನಯ ಎರಡೂ ವಿಭಿನ್ನ.ಕ್ಲೋಸ್‌ಅಪ್‌ನಲ್ಲಿ ಅತಿ ನಾಟಕೀಯ ಎನಿಸುವ ಅಂಶಗಳು ಇದ್ದರೆ ಅತಿರೇಕ ಎನಿಸಿಬಿಡುತ್ತದೆ. ಆದರೆ ದಿವ್ಯಾ ಯಾವೊಂದು ಫ್ರೇಮ್‌ನಲ್ಲಿಯೂ ಮಿತಿ ಮೀರಿ ಧ್ವನಿ ಏರಿಸಿ ಮಾತನಾಡಿಲ್ಲ ಹಾಗೂ ನೋಡುಗರಿಗೆ ಕಸಿವಿಸಿ ಆಗುವಂತೆ ನಟಿಸಿಲ್ಲ. ಇದೇ ಕಾರಣಕ್ಕೆ ಇವಳ `ಪಂಚಮಿ~ ಪಾತ್ರವು ಎಲ್ಲರಿಗೂ ಆಪ್ತವೆನಿಸುತ್ತಿದೆ.ದಿವ್ಯಾ ಜೊತೆಗೇ ಕಿರುತೆರೆಯಲ್ಲಿ ತಾರೆಯಾಗಿ ಮೂಡಿರುವ ಗೌತಮಿ ಕೂಡ ಇಂಥದೇ ಸತ್ವದಿಂದ ನೆನಪಿನಲ್ಲಿ ಉಳಿಯುತ್ತಾಳೆ. ಜೊತೆಗೆ ರೂಪದರ್ಶಿಯಂಥ ಮೈಮಾಟವೂ ಇವಳಿಗೆ ಪ್ಲಸ್ ಪಾಯಿಂಟ್ ಆಗಿದೆ.ಪಾತ್ರ ನಿರ್ವಹಣೆಯಲ್ಲಿನ ಕೊರತೆಗಳನ್ನು ನಿವಾರಿಸಿಕೊಳ್ಳಲು ಕೂಡ ಸತತ ಪ್ರಯತ್ನ ಮಾಡುವ ಹಾಗೂ ಕಲಿಯಬೇಕು ಎನ್ನುವ ಶ್ರದ್ಧೆಯೂ ಉಂಟು.`ನಾಗರತ್ನ~ ಕ್ಯಾರೆಕ್ಟರ್ ಕಷ್ಟಪಡಲು ಅವಕಾಶ ನೀಡುತ್ತಿಲ್ಲ. ತನ್ನೊಳಗೂ ಅಭಿನಯ ಚೈತನ್ಯ ಅಡಗಿದೆ ಎಂದು ಸಾಬೀತುಪಡಿಸುವಲ್ಲಿಯೂ ಈ ಯುವ ನಟಿ ಯಶಸ್ವಿಯಾಗಿದ್ದಾರೆ.ದಿವ್ಯಾಗಿಂತ ಎತ್ತರವಾಗಿರುವ ಗೌತಮಿ ತನ್ನ ಪಾತ್ರವನ್ನು ಕೂಡ ಎತ್ತರಕ್ಕೆ ಏರಿಸುವಲ್ಲಿ ಯಶಸ್ವಿ. ಆದರೂ ಇವರಿಬ್ಬರ ಪಾತ್ರಗಳು ಪೈಪೋಟಿಯನ್ನು ಎದುರಿಸುವ ಸಂದರ್ಭದಲ್ಲಿ ಮಾತ್ರ ಸವಾಲುಗಳು ಅನೇಕ. ಅವುಗಳನ್ನು ಮೀರಿ ಕಥೆಯ ಚೌಕಟ್ಟಿನಲ್ಲಿ ತಮ್ಮ ಪಾತ್ರಗಳನ್ನು ಗಟ್ಟಿಯಾಗಿ ಹಿಡಿದಿಡಲು ದಿವ್ಯಾ ಹಾಗೂ ಗೌತಮಿ ಸ್ಪರ್ಧೆಗೆ ಇಳಿದಂತೆ ಅಭಿನಯಿಸುತ್ತಿದ್ದಾರೆ. ಆದ್ದರಿಂದ ಈ ಧಾರಾವಾಹಿ ಲಯ ತಪ್ಪದೇ ಸಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry