ಜೋಡಿ ಹದ್ದಿನ ಹೃದಯ ವೇದನೆ!

7

ಜೋಡಿ ಹದ್ದಿನ ಹೃದಯ ವೇದನೆ!

Published:
Updated:
ಜೋಡಿ ಹದ್ದಿನ ಹೃದಯ ವೇದನೆ!

ಮೈಸೂರು:  “ನಿಮ್ಮ ಹಾಗೆ ನಮಗೆ ದಿಢೀರ್ ಪ್ರತಿಭಟಿಸಿ ರಸ್ತೆ ಸಂಚಾರ ನಿಲ್ಲಿಸೋ ಶಕ್ತಿಯಿಲ್ಲ. ಕೋರ್ಟು, ಕಚೇರಿ, ನೋಟಿಸ್ ಕೊಡೋದೂ ನಮಗೊತ್ತಿಲ್ಲ. ಆದರೆ ನಮ್ಮ ಬಗ್ಗೆ ಕ್ಷಣವಾದರೂ ಯೋಚಿಸುವ ಶಕ್ತಿ ನಿಮ್ಮಂತಹ ಬುದ್ಧಿವಂತರಿಗೆ ಇಲ್ಲವಲ್ಲ!ನೂರು ವರ್ಷಗಳಿಂದ ನಿಮ್ಮ ಮೈಮನಕ್ಕೆ ನೆರಳಿನ ತಂಪೆರೆಯುತ್ತಿದ್ದ, ನಮಗೆ ವಾಸ ಮಾಡಲು ಜಾಗ ಕೊಟ್ಟಿದ್ದ ಈ ಆಲದ ಮರದ ಜೊತೆಗೆ ನಮ್ಮ ಕನಸುಗಳನ್ನೂ ಮಣ್ಣುಪಾಲು ಮಾಡಿದ್ದೀರಿ.ನಮ್ಮ ವಾಸಸ್ಥಾನವನ್ನು ಇವತ್ತು ಒಂಚೂರು ಕರುಣೆಯಿಲ್ಲದೇ ಬೀಳಿಸಿಬಿಟ್ಟಿರಿ. ಅರಣ್ಯ ಇಲಾಖೆಯ ಅನುಮತಿ ಪಡೆದ ಗುತ್ತಿಗೆದಾರರು ನಮ್ಮ ಗೂಡಿನಲ್ಲಿದ್ದ ಮೊಟ್ಟೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಶ್ರೀರಾಮ ಮಂದಿರಕ್ಕೆ ನೂರು ವರ್ಷಗಳಿಂದ ನೆರಳು ನೀಡಿದ್ದ ಆಲದ ಮರಕ್ಕೆ ಹುಳು ಹಿಡಿದು ಬೀಳುವಂತಾಗಿತ್ತು ಎಂದು ಕೆಲವರು ನೀಡಿದ ದೂರಿಗೆ ನೀವು ಸ್ಪಂದಿಸಿರುವುದು ಸೂಕ್ತವಾಗಿಯೇ ಇದೆ. ಆದರೆ ನಮ್ಮ  ಭವಿಷ್ಯದ ಕನಸು ನುಚ್ಚುನೂರಾಯಿತು.ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರ, ಅನ್ಯಾಯ, ಅಕ್ರಮ ಮಾಡಿದಾಗ ಅವರನ್ನು `ರಣಹದ್ದು~ ಎಂದು ಹೀಯಾಳಿಸುತ್ತೀರಿ. ನಾವೇನೂ ಅಂತಹ ಕೆಟ್ಟ ಪಕ್ಷಿಗಳಲ್ಲ. ನಿಮ್ಮ ಪರಿಸರ ಚೆನ್ನಾಗಿರಲೆಂದೇ ನಾವು ಇಲಿ. ಹಲ್ಲಿ, ಹಾವು, ಸತ್ತ ಪ್ರಾಣಿಗಳ ಕೊಳೆತು ನಾರುವ ದೇಹವನ್ನು ಕುಕ್ಕಿ ಕುಕ್ಕಿ ತಿನ್ನುತ್ತೇವೆ. ಅವುಗಳ ಉಪಟಳದಿಂದ ನಿಮ್ಮನ್ನು ರಕ್ಷಿಸುತ್ತೇವೆ. ಆದರೆ ನೀವು ನಮಗೇನು ಕೊಡುತ್ತೀರಿ.ಯಂತ್ರಚಾಲಿತ ಗರಗಸದ ಹರಿತಕ್ಕೆ ಬುಡ ಕಡಿದು ಬಿದ್ದ ಮರದ ಜೊತೆಗೇ ಕೆಳಗೆ ಬಿದ್ದ ನಮ್ಮ ಗೂಡು ನುಚ್ಚು ನೂರಾಯಿತು. ಗೂಡು ಬೆಚ್ಚಗಿರಲು, ಮೊಟ್ಟೆಗೆ ಕಾವು ನೀಡಲು ದೂರದಿಂದ ತಂದು ಹಾಕಿದ ಬೂದಿ, ಹುಲ್ಲಿನ ಚೂರುಗಳ ಜೊತೆಗೆ ಒಡೆದ ಮೊಟ್ಟೆಗಳೂ ನಾಮಾವಶೇಷವಾದವು.ನಮ್ಮ ಕಣ್ಣೀರು, ಮೂಕವೇದನೆ ನಿಮಗೆ ಕೇಳಿಸಲೇ ಇಲ್ಲವೇ? ಇನ್ನು ಕೆಲವೇ ದಿನಗಳಲ್ಲಿ ಮೊಟ್ಟೆಯೊಡೆದು, ಪುಕ್ಕ ಬಲಿತ ನಮ್ಮ ಮಕ್ಕಳು ಆಕಾಶದತ್ತ ಹಾರುವವರೆಗೆ ತಡೆಯುವ ವ್ಯವಧಾನ ನಿಮಗಿರಲಿಲ್ಲವೇ? ಸಕಲ ಜೀವಿಗಳನ್ನು ಸಾಕಲು ವಿಶ್ವವಿಖ್ಯಾತ ಮೃಗಾಲಯ ಕಟ್ಟಿಸಿದ ಮಹಾರಾಜರ ಊರಿನಲ್ಲಿಯೇ ಇಂತಹ ಕಟುಕತನ ಏಕೆ? ಮನುಷ್ಯರ ಅಕ್ರಮ ಮನೆಗಳ ತೆರವಿಗೆ ಪರಿಹಾರ, ಸ್ಥಳಾಂತರ ಎಲ್ಲವನ್ನೂ ಕೊಡುತ್ತೀರಿ. ನಮಗೇಕೆ ಒಂದು ಅವಕಾಶ ಕೊಡಲಿಲ್ಲ?ನಿಮಗೆ ಬೇಡವಾದದನ್ನು ನಾವು ತಿಂದು ಜಗದ ನೈರ್ಮಲ್ಯ ಕಾಪಾಡುತ್ತೇವೆ. ನಾವು ಯಾರಿಗಾದರೂ ಘಾಸಿಗೊಳಿಸಿದ ಉದಾಹರಣೆ ಒಂದಾದರೂ ಇದ್ದರೆ ಕೊಡಿ. ಅದೆಲ್ಲ ಬಿಡಿ ಈಗ ನಾವಿಬ್ಬರೂ ಮತ್ತೊಂದು ಗೂಡು ಕಟ್ಟಿ, ವಂಶ ವೃದ್ಧಿ ಮಾಡಲು ಮೈಸೂರಿನಲ್ಲಿ ಎತ್ತರ ಬೆಳೆದ ಮರಗಳು ಎಷ್ಟಿವೆ. ಎಲ್ಲ ಕಡೆಯೂ ಕಾಂಕ್ರಿಟ್ ಕಾಡು.ಹಸಿರು ವನ ಕಡಿದು ಕಟ್ಟಿಕೊಳ್ಳುವ ಶಕ್ತಿ ನಿಮಗಿದೆ. ಆದರೆ ಎತ್ತರದ ಮರಗಳ ಕೊಂಬೆಯಲ್ಲಿ ಮಾತ್ರ ವಾಸಿಸುವ ಶಕ್ತಿಯನ್ನು ದೇವರು ನಮಗೆ ಕೊಟ್ಟಿದ್ದಾನೆ. ಆದರೆ ಇದೀಗ ಆ ಸ್ಥಳಗಳೂ ನಮ್ಮ ಕೈಬಿಟ್ಟು ಹೋಗುತ್ತಿವೆ. ಈ ಎಲ್ಲ ಚಟುವಟಿಕೆಗಳಿಂದ ನಾವಂತೂ ನಾಶವಾಗುತ್ತ ಹೋಗುತ್ತಿದ್ದೇವೆ. ಎಲ್ಲ ಮುಗಿದ ಮೇಲೆ ನಿಮ್ಮ ಸರದಿಯೂ ಬರುತ್ತದೆ. ಏಕೆಂದರೆ ನಿಸರ್ಗದಲ್ಲಿ ಎಲ್ಲ ಜೀವಿಗಳೂ ಮುಖ್ಯ. ಅದೊಂದು ಸರಪಳಿಯಿದ್ದಂತೆ. ಕೊಂಡಿಗಳು ತುಂಡಾಗುತ್ತ ಹೋದಂತೆ ಸರಪಳಿಯೇ ಇರುವುದಿಲ್ಲ. ಆ ಕಾಲ ಬರದಂತೆ ನೋಡಿಕೊಳ್ಳಿ.

ಇಂತಿ ತೀವ್ರ ನೊಂದಿರುವ ಹದ್ದು ದಂಪತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry