ಗುರುವಾರ , ಮೇ 13, 2021
39 °C
ಜಿಲ್ಲೆಯಾದ್ಯಂತ ಸಂಭ್ರಮದ ಕಾರಹುಣ್ಣಿಮೆ

ಜೋಡೆತ್ತಿನ ಬಂಡಿ: ಕೆಂದೆತ್ತು ಮುಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕು ಕೇಂದ್ರದಲ್ಲಿ ಭಾನುವಾರ ಕಾರಹುಣ್ಣಿಮೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಹಳೆಯ ಊರಾದ ಕಿಲ್ಲಾದ ಅಗಸಿಯ ಮುಂದೆ ಸೇರಿದ್ದ ಸಾವಿರಾರು ಜನರು ಕಾರಹುಣ್ಣಿಮೆ ಸಂಭ್ರಮವನ್ನು ನೋಡಿ ಸಂಭ್ರಮಿಸಿದರು. ಪಟ್ಟಣದ ಯಮನೂರಪ್ಪನ ಕಟ್ಟೆಯ ಹತ್ತಿರ ಎತ್ತುಗಳನ್ನು ಶೃಂಗರಿಸಿ, ಓಡಿಸಲಾಯಿತು.ಊರ ಗೌಡರಾದ ಬಸನಗೌಡ ರಾಯನಗೌಡ ಪಾಟೀಲರ, ಬಸರಕೋಡದ ಧಣೇರ, ಕುಲಕರ್ಣಿಯವರ, ಸರ್ಕಾರದ ಪರವಾಗಿ ತಹಶೀಲ್ದಾರರ, ವಾಲಿಕಾರರ, ನಾಯ್ಕೋಡಿ ಅವರ ಎತ್ತು ಹೀಗೆ ಸಂಪ್ರದಾಯದಂತೆ ಬಣ್ಣ ಬಣ್ಣದ ಎತ್ತುಗಳನ್ನು ಸಾಲಾಗಿ ನಿಲ್ಲಿಸಿ, ಒಮ್ಮೆಲೇ ಊರ ಅಗಸಿಯ ಒಳಗೆ ಓಡಿಸಲಾಯಿತು. ಪ್ರತೀ ಸಲ ಯಾವ ಬಣ್ಣದ ಎತ್ತು ಮೊದಲು ಬಂತು ಎಂಬ ಲೆಕ್ಕ ಹಾಕಲಾಗುತ್ತದೆ. ಹೀಗೆ ಒಟ್ಟು ಐದು ಸುತ್ತಿನ ಓಟದ ನಂತರ ಸರಾಸರಿ ತೆಗೆದು ಯಾವ ಬಣ್ಣದ ಎತ್ತು ಮೊದಲು ಬಂತು ಎಂಬುದರ ಮೇಲೆ ಈ ಸಲ ಫಸಲು ಯಾವುದು ಹೆಚ್ಚು ಬೆಳೆಯುತ್ತದೆ ಎಂದು ಲೆಕ್ಕಾಚಾರ ಹಾಕುವುದು ಹಬ್ಬದ ಪ್ರತೀತಿ.ಅಂತಿಮವಾಗಿ ಕೆಂದೆತ್ತು (ಕೆಂಪು) ಎತ್ತು ಮುಂದೆ ಬಂದಿದ್ದರಿಂದ ಗೋದಿ, ತೊಗರಿ ಫಸಲು ಹೆಚ್ಚಾಗಿ ಬೆಳೆಯುತ್ತದೆ ಎಂದು ರೈತರ ಊಹೆ. ಎತ್ತುಗಳ ಓಡಾಟದ ನಂತರ ಅಗಸಿಯ ಬಾಗಿಲಿಗೆ ಕಟ್ಟಿದ ಬೇವಿನ ಸರ ಹಾಗೂ ಕೊಬ್ಬರಿಯನ್ನು ಬಸನಗೌಡ ರಾಯನಗೌಡ ಪಾಟೀಲರು ಹರಿದು ರೈತರಿಗೆಲ್ಲ ಬೇವಿನ ತಪ್ಪಲನ್ನು ಹಂಚಿದರು. ರೈತರು ಅದನ್ನು ನಾಳೆ ಬಿತ್ತನೆಯಾಗುವ ಬಿತ್ತನೆ ಬೀಜದಲ್ಲಿ ಇಟ್ಟು (ಕೀಟ ತಗುಲದಂತೆ ) ಅದನ್ನು ಸಂರಕ್ಷಿಸುವ ಕೆಲಸ ಮಾಡುತ್ತಾರೆ. ಕರಿ ಹರಿಯುವ ಕಾರ್ಯದ ನಂತರ ಗ್ರಾಮದ ಪ್ರಮುಖರೆಲ್ಲ ಸೇರಿ ಹಳೆಯ ಹನುಮಂತ ದೇವರ ದೇವಸ್ಥಾನದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿದರು. ಉತ್ಸವದಲ್ಲಿ ಚನ್ನಪ್ಪ ಕಂಠಿ, ನಬಿಸಾಬ್ ನಾಯ್ಕೋಡಿ, ಶಂಕರ ಕಡಿ, ಸಾಹೇಬಲಾಲ್ ಬಾವೂರ, ಅಲ್ಲಾಭಕ್ಷ ದೇಸಾಯಿ, ಹಫೀಜ್ ಪಡೇಕನೂರ, ವಿರೂಪಾಕ್ಷಿ ಅಮರಣ್ಣವರ, ಹನುಮಂತ ಮೇಲಿನಮನಿ, ಕೆ.ಎಂ.ರಿಸಾಲ್ದಾರ್, ನಬಿಲಾಲ್ ದೇಸಾಯಿ, ಸಂತೋಷ ನಾಯ್ಕೋಡಿ, ಬುಡ್ಡಾ ನಾಯ್ಕೋಡಿ ಮೊದಲಾದವರು ಪಾಲ್ಗೊಂಡಿದ್ದರು. ಅಹಿತಕರ ಘಟನೆ ನಡೆಯದಂತೆ ಅಪರಾಧ ವಿಭಾಗದ ಪಿಎಸ್‌ಐ ಬಿ.ವಿ. ನ್ಯಾಮಗೌಡ್ರ , ಎಎಸ್‌ಐ ಕಬಾಡೆ ಮತ್ತು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿತ್ತು.ಆಲಮೇಲ ವರದಿ

ಪಟ್ಟಣದಲ್ಲಿ  ಕಾರಹುಣ್ಣಿಮೆ ನಿಮಿತ್ತ ನಡೆಯುವ ಕರಿಹರಿಯುವ ಸಂಪ್ರದಾಯವನ್ನು ಇಲ್ಲಿನ ದೇಶಮುಖ ಮತ್ತು ದೇಶಪಾಂಡೆ ಮನೆತನದವರು ಮನೆಯಿಂದ ಜೋಡೆತ್ತಿನ ಬಂಡಿ ಓಡಿಸುವುದರ ಮೂಲಕ ಚಾಲನೆ ನೀಡಿದರು.ಈ ವರ್ಷ ದೇಶಮುಖರ ಕುಟುಂಬದ ಲಕ್ಷ್ಮಿ ಬಂಡಿಗೆ ಗ್ರಾಮದ ಅಶೋಕ ಪ್ಯಾಟಿ ಅವರ ಎತ್ತುಗಳನ್ನು, ದೇಶಪಾಂಡೆಯವರ ಬಂಡಿಗೆ ಇಮಾಮ್ ಮೇಲಿಮನಿ ಅವರ ಎತ್ತುಗಳನ್ನು ಕಟ್ಟಿ ಕರಿ ಹರಿಯಲಾಯಿತು.ಅಶೋಕ ಪ್ಯಾಟಿ ಅವರ ಮನೆಯಿಂದ ಮೆರವಣಿಗೆ ಮುಖಾಂತರ ದೇಶಮುಖರ ಮನೆಗೆ ಎತ್ತುಗಳನ್ನು ಕರೆ ತಂದು ನಂತರ ಬಾಬತ್ತುದಾರರಾದ ವಾಲೀಕಾರರು ತಳವಾರರು ಮುಂತಾದವರು ಬಂಡಿ ಕಟ್ಟಿ ದುರಸ್ತಿಗೊಳಿಸಿದ ನಂತರ ದೇಶಮುಖ ಮನೆತನದ ಒಡೆಯರಾದ ಅಣ್ಣಾಸಾಹೇಬ ದೇಶಮುಖ ಅವರ ಅಪ್ಪಣೆ ಮೇರೆಗೆ ಅಗಸಿಯಿಂದ ಮೀಸಲು ಕರಿ ಹರಿಯುವ ಮುಖಾಂತರ ಪ್ರಾರಂಭಿಸಲಾಯಿತು.ಕರಿ ಹರಿದು ಬರುವಾಗ ಗ್ರಾಮದ ಪ್ರತಿ ಮನೆಯಿಂದಲು ಬಂಡಿಗೆ ಪೂಜೆ ಮಾಡಿ ತೆಂಗಿನ ಸಿಡಿಗಾಯಿ ಒಡೆಯುವ ಕಾರ್ಯ ಸಾಯಂಕಾಲದವರೆಗೂ ನಡೆಯಿತು.ದೇಶಮುಖ ಮತ್ತು ದೇಶಪಾಂಡೆಯವರ ಎರಡು ಬಂಡಿಗಳಿಗೆ ಮತ್ತು ಎತ್ತುಗಳಿಗೆ ಬಣ್ಣ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಸಂಜೆ ಎರಡು ಬಂಡೆಗಳು ಸಕಲ ವಾದ್ಯ ವೈಭವಗಳ ಸಮೇತ ಗ್ರಾಮ ದೇವರಾದ ಪೀರ್‌ಗಾಲಿಬ ಸಾಬ್ ದರ್ಗಾದ ಎದರು ರಸ್ತೆಯ ಮೇಲೆ ಒಂದರ ನಂತರ ಒಂದು ಬಂಡಿಗಳನ್ನು ಐದು ಸುತ್ತುಗಳನ್ನು ಒಡಿಸಲಾಯಿತು.ದೇಶಮುಖರ ಬಂಡಿಯನ್ನು ಬಸವರಾಜ ಹೊಸಮನಿ ಓಡಿಸಿದರೆ ದೇಶಪಾಂಡೆ ಅವರ ಬಂಡಿಯನ್ನು ಸಿದ್ದಪ್ಪ ಗುರಿಕಾರ ಓಡಿಸಿದರು. ಜಿಪಂ ಸದಸ್ಯ ಮಲ್ಲಪ್ಪ ತೋಡಕರ ಚಿಟ್ಟಬಂಡಿ ಓಡಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಎಸ್‌ಐ ಗೋಪಾಲ ಹಳ್ಳೂರ ಬಿಗಿ ಬಂದೋ ಬಸ್ತ್ ಒದಗಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.ತಾಳಿಕೋಟೆ ವರದಿ

ಪಟ್ಟಣದಲ್ಲಿ ಕಾರಹುಣ್ಣಿಮೆ ಸಂಭ್ರಮ ಮುಗಿಲು ಮುಟ್ಟಿತ್ತು. ಕರಿ ಹರಿಯುವ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ರಾಜವಾಡೆಯ ಬಾಪುಗೌಡ ಸಂಗನಗೌಡ ಪಾಟೀಲ, ಭೀಮನಗೌಡ ಕಾಂತಪ್ಪಗೌಡ ಪಾಟೀಲ, ಮಲ್ಲನಗೌಡ ಬಸನಗೌಡ ಕೋರಿ, ಮಲಕನಗೌಡ ಮುದಿಗೌಡ ಪಾಟೀಲ ಹಾಗೂ ಗುರಸಂಗಪ್ಪ ತಮ್ಮಣ್ಣಪ್ಪ ಕಶೆಟ್ಟಿಯವರ ಮನೆತನದ ಎತ್ತುಗಳು  ಪಾಲ್ಗೊಳ್ಳುತ್ತವೆ. ವಾಡಿಕೆಯಂತೆ ಗುರಸಂಗಪ್ಪ ತಮ್ಮಣ್ಣಪ್ಪ ಕಶೆಟ್ಟಿಯವರ ಮನೆತನದ ಎತ್ತುಗಳನ್ನು ಶನಿವಾರ  ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಡೋಣಿ ನದಿಗೆ ಹೋಗಿ ಕೆಂದು  ಹಾಗೂ ಬಿಳಿ ಎತ್ತುಗಳನ್ನು ಶುಚಿರ್ಭೂತಗೊಳಿಸಿ ಪೂಜಿಸಿ ಅಲ್ಲಿಂದ ಕೈ ಬಿಡಲಾಗುತ್ತದೆ ಅವುಗಳ ಹಿಂದೆ ನಿಧಾನವಾಗಿ ಹಿಂಬಾಲಿಸಿಕೊಂಡು ಬರಲಾಗುತ್ತದೆ. ಅವುಗಳ ತಮಗೆ ತಿಳಿದಂತೆ ಮನೆ ಕಡೆ ಧಾವಿಸುವಾಗ ಯಾವುದು ಮೊದಲು ಅಗಸಿಯೊಳಗೆ ಕಾಲಿಡುತ್ತದೆಯೋ ಅದರ ಆಧಾರದಲ್ಲಿ ರೈತರು ತಮಗೆ ಯಾವ ಬೆಳೆ ಹೆಚ್ಚಾಗುತ್ತದೆ ಎಂದು ಅರ್ಥೈಯಿಸಿಕೊಳ್ಳುವ ಪ್ರತೀತಿ ಇದೆ. ಈ ಬಾರಿ ಕೆಂದು ಎತ್ತು ಮೊದಲು ಅಗಸಿ ದಾಟಿದ್ದು, ಮುಂಗಾರು ಹಂಗಾಮು ಉತ್ತಮವಾಗಿರುತ್ತದೆ ಎಂದು ರೈತರು ತಮ್ಮ ನಂಬಿಕೆ ತಿಳಿಸಿದರು.ಇದಾದ ನಂತರ ಸಂಜೆ ಎಲ್ಲ ಐದು ಮನೆತನದ ಎತ್ತುಗಳನ್ನು ಸಿಂಗರಿಸಿ, ರಾಜವಾಡೆಯಿಂದ ಹೊರಟು ಶ್ರಿಬಜಾರ ಬಸವೇಶ್ವರ ದೇವಸ್ಥಾನದ ಬಳಿ ಅಗ್ರ ಪೂಜೆ ಸಲ್ಲಿಸಿ ಎತ್ತುಗಳನ್ನು ಸ್ವತಂತ್ರವಾಗಿ ಓಡಲು ಬಿಟ್ಟರು. ಕುಂಬಾರ ಮನೆಯ ಬಳಿ ಕಟ್ಟಿದ ಕರಿ ಹರಿದು ಸಂಭ್ರಮಿಸಿದರು. ಇದಾದ ನಂತರ ಪಟ್ಟಣದ ಎಲ್ಲ ರೈತರು ತಮ್ಮ ಎತ್ತುಗಳನ್ನು  ಜೋರಾಗಿ ಓಡಿಸಿಕೊಂಡು ಹೋಗುತ್ತಿದ್ದರೆ ಹಿಂದೆ ಯುವಕರು, ಮಕ್ಕಳು ಖುಷಿಯಿಂದ ಕೇಕೆ ಹಾಕುತ್ತ ಸಂಭ್ರಮಿಸಿದರು.ತಾಳಿಕೋಟೆ: ಸಮೀಪದ ಬಿಳೇಭಾವಿಯಲ್ಲಿ ಭಾನುವಾರ ಕಾರಹುಣ್ಣಿಮೆಯನ್ನು ಸಂಪ್ರದಾಯ ಬದ್ಧವಾಗಿ ಸಂಭ್ರಮದಿಂದ ಆಚರಿಸಲಾಯಿತು. ಕಾರಹುಣ್ಣಿಮೆಯಂದು ಬೆಳಿಗ್ಗೆ ತಮ್ಮ ಎತ್ತುಗಳ ಮೈ ತೊಳೆದು ಕೊಂಬುಗಳಿಗೆ ಹಾಗೂ ದೇಹಕ್ಕೆ ಬಣ್ಣ ಹಚ್ಚಿದ್ದರು. ಚೆಂದದ ಚಿತ್ತಾರ ಹಾಕಿದ ಜೂಲು, ಕೊರಳಲ್ಲಿ ಗಂಟೆಯ ಸರ, ಕೊಂಬಿಗೆ ಕೊಮ್ಮಣಸುಗಳಿಂದ ಗ್ವಾಂಡೆಗಳಿಂದ ಅಲಂಕರಿಸಿದ್ದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅವುಗಳನ್ನು ಓಡಿಸಿ ಮನೆಗೆ ಹೋಗುತ್ತಾರೆ ಅಲ್ಲಿ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ.ಚಡಚಣ ವರದಿ

ಪಟ್ಟಣವೂ ಸೇರಿದಂತೆ ಸುತ್ತಲಿನ ನೂರಾರು ಗ್ರಾಮಗಳಲ್ಲಿ ಬರದ ಛಾಯೆಯಲ್ಲೂ ರೈತರು ಕಾರುಹಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು,

ತಮ್ಮ ಎತ್ತು ಹೋರಿಗಳನ್ನು ಚೆನ್ನಾಗಿ ತೋಳೆದು,ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ,ಮೈತುಂಬೆಲ್ಲ ಹಲವು ಚಿತ್ತಾರಗಳಲ್ಲಿ ಬಣ್ಣ ಬಳೆದು ಸಂಭ್ರಮಿಸಿದರು.ಸಂಜೆ ನಾಲ್ಕು ಗಂಟೆಗೆ ನಡೆದ ಎತ್ತುಗಳ ಓಟ ವಿಶಿಷ್ಟವಾಗಿತ್ತು. ಮುಂಗಾರು ಹಾಗೂ ಹಿಂಗಾರು ಮಳೆ ಗೆ ಹೋಲಿಕೆ ಮಾಡುವ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಗಮನ ಸೆಳೆದವು.ಈ ಸಂದರ್ಭಲ್ಲಿ ಮುಖಂಡರಾದ ರಾಜೂ ಕೋಳಿ, ಚಂದ್ರಕಾಂತ ಶಿಂಧೆ, ಪ್ರಭು ಕೋಳಿ, ಮುದಕಪ್ಪ ಕೋಳಿ, ಸದಾಶಿವ ಶಿಂಧೆ, ವಿಠ್ಠಲ ಶಿಂಧೆ,ಲಕ್ಷ್ಮಣ ಶಿಂಧೆ, ಶೇಟ್ಟೆಪ್ಪ ಕೊಳಿ, ಪದ್ಮಾವತಿ ಕೋಳಿ, ರಾಜಶೇಖರ ಕೋಳಿ, ತುಕಾರಾಮ ಆಲಕುಂಟೆ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.