ಜೋಳ ಅಕ್ರಮ ಮಾರಾಟ: ಗೋದಾಮು ಬಾಡಿಗೆದಾರ ಪರಾರಿ

7

ಜೋಳ ಅಕ್ರಮ ಮಾರಾಟ: ಗೋದಾಮು ಬಾಡಿಗೆದಾರ ಪರಾರಿ

Published:
Updated:

ಮಾನ್ವಿ: ಕಳಪೆ ಜೋಳಕ್ಕೆ ರಾಸಾಯನಿಕ ಮಿಶ್ರಣಮಾಡಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಭಾನುವಾರ ಅಧಿಕಾರಿಗಳಿಂದ ಜಪ್ತಿಯಾಗಿದ್ದ ಪಟ್ಟಣದ ಕರಡಿಗುಡ್ಡ ರಸ್ತೆಯ ಗೋದಾಮಿಗೆ ಮಂಗಳವಾರ ತಹಸೀಲ್ದಾರ್ ಗಂಗಪ್ಪ ಕಲ್ಲೂರು ಮತ್ತು ಅಧಿಕಾರಿಗಳು ಭೇಟಿ ನೀಡಿದ್ದರು.ಗೋದಾಮಿನ ಬಾಗಿಲು ತೆಗೆದು ಜೋಳದ ಪರಿಶೀಲನೆ ನಡೆಸುವ ಉದ್ದೇಶದಿಂದ ಅವರು ತೆರಳಿದ್ದರು. ಆದರೆ ಸದರಿ ಗೋದಾಮನ್ನು ಮೂಲ ಮಾಲೀಕರಿಂದ ಬಾಡಿಗೆ ಪಡೆದಿರುವ ಶಿವಯ್ಯ ಎಂಬುವರು ಸ್ಥಳಕ್ಕೆ ಆಗಮಿಸಿದ್ದರು. ಶಿವಯ್ಯ ತಾವು ನಾಗರಾಜ ಪುಲದಿನ್ನಿ ಎಂಬುವರಿಗೆ ಕರಾರಿನ ಮೂಲಕ ಬಾಡಿಗೆ ನೀಡಿದ್ದು ಗೋದಾಮಿನಲ್ಲಿರುವ ಜೋಳ ಅವರಿಗೇ ಸೇರಿದ್ದು ಎಂದು ತಿಳಿಸಿದರು.ನಾಗರಾಜ ಪುಲದಿನ್ನಿ  ಗೋದಾಮಿಗೆ ಬರುತ್ತಾನೆಂದು ಸುಮಾರು ಎರಡು ಗಂಟೆಗಳ ಕಾಲ  ಅಧಿಕಾರಿಗಳು ಗೋದಾಮಿನ ಹತ್ತಿರ ಕಾಯ್ದರು. ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವ ಭೀತಿಯಿಂದ ಗೋದಾಮು ಬಾಡಿಗೆ ಪಡೆದಿರುವ ನಾಗರಾಜ ಪರಾರಿಯಾಗಿರುವ ಶಂಕೆ ಸಾರ್ವಜನಿಕರಿಂದ ವ್ಯಕ್ತವಾಯಿತು.ಆದರೆ ಅಂತಿಮವಾಗಿ ನಾಗರಾಜ ಗೋದಾಮಿನ ಕಡೆಗೆ ಸುಳಿಯದ ಕಾರಣ ತಹಸೀಲ್ದಾರ್ ಗಂಗಪ್ಪ, ಶಿವಯ್ಯ ಅವರನ್ನು ವಶಕ್ಕೆ ತೆಗೆದುಕೊಂಡು ಗೋದಾಮನ್ನು ಬಾಡಿಗೆ ಪಡೆದಿರುವ ನಾಗರಾಜ ಅವರನ್ನು ಪತ್ತೆ ಹಚ್ಚಿ ಕರೆತರುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ ಹಿಂದಿರುಗಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ, ಪದಾಧಿಕಾರಿಗಳಾದ ಜಗದೀಶಯ್ಯ ಸ್ವಾಮಿ ಮಲ್ಲಿನ ಮಡುಗು, ಹಂಪಣ್ಣ ಜಾನೇಕಲ್ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry