ಜೋಳ ಬಿತ್ತನೆ ವ್ಯಾಪ್ತಿ ಅಧಿಕ?

ಬುಧವಾರ, ಜೂಲೈ 24, 2019
28 °C

ಜೋಳ ಬಿತ್ತನೆ ವ್ಯಾಪ್ತಿ ಅಧಿಕ?

Published:
Updated:

ಗುಲ್ಬರ್ಗ: ಕಳೆದ ವರ್ಷ ಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರು ಆಗ್ರಹಿಸಿದ್ದರು; ಆದರೆ ಈ ವರ್ಷ ಬಂಪರ್ ಬೆಲೆ ಸಿಕ್ಕಿದೆ. ಅದಕ್ಕೆಂದೇ ಜೋಳದ ಬಿತ್ತನೆ ಪ್ರದೇಶದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

ನಾಲೈದು ವರ್ಷಗಳ ಹಿಂದೆ ಜೋಳದ ಬೆಲೆ ಹೀಗೆ ಏರಿಕೆಯಾಗಿದ್ದು ಬಿಟ್ಟರೆ, ಈಗ ಮತ್ತೆ ಹೆಚ್ಚಳವಾಗಿದೆ.ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ `ಬಡವರ ಆಹಾರ~ ಬಂಪರ್ ಬೆಲೆ ಗಿಟ್ಟಿಸಿದ್ದು, ಕಿರಾಣಿ ಅಂಗಡಿಗಳಲ್ಲಿ ಕಿಲೋಕ್ಕೆ 40 ರೂಪಾಯಿವರೆಗೆ ಚಿಲ್ಲರೆ ದರಕ್ಕೆ ಮಾರಾಟವಾಗುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಕಂಡಿರುವುದರಿಂದ ಹೆಚ್ಚಿನ ರೈತರು ಈ ಸಲ ಜೋಳ ಬಿತ್ತನೆಗೆ ಮುಂದಾಗಿದ್ದಾರೆ.ಈ ಹಿಂದಿನ ವರ್ಷ (2010ರಲ್ಲಿ) ಬಿಳಿಜೋಳ ಮಾರುಕಟ್ಟೆಗೆ ಬಂದಾಗ ಬೆಲೆ ಕ್ವಿಂಟಲ್‌ಗೆ 800 ರೂಪಾಯಿಗಳಷ್ಟು ಇತ್ತು. ಇದರಿಂದ ಕಂಗಾಲಾಗಿದ್ದ ರೈತರು, ಬೆಲೆಯನ್ನು ಕ್ವಿಂಟಲ್‌ಗೆ 2,000 ರೂಪಾಯಿ ನಿಗದಿ ಮಾಡುವಂತೆ ಆಗ್ರಹಿಸಿದ್ದರು.ಇದಕ್ಕೂ ಹಿಂದಿನ ವರ್ಷದಲ್ಲಿ (2009ರಲ್ಲಿ) ಸರ್ಕಾರ ಕೆಂಪುಜೋಳಕ್ಕೆ 1,500 ರೂಪಾಯಿ ಹಾಗೂ ಬಿಳಿಜೋಳಕ್ಕೆ 1,600 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿತ್ತು.ಈ ಸಲ ಮಾರುಕಟ್ಟೆಗೆ ಬಿಳಿಜೋಳ ಬಂದಿರುವ ಪ್ರಮಾಣದಲ್ಲಿ ಕಡಿಮೆಯಾಗಿದೆ.ಕಳೆದ ವರ್ಷ ಈ ಅವಧಿಯಲ್ಲಿ 36,823 ಕ್ವಿಂಟಲ್ ಬಂದಿದ್ದರೆ, ಈ ಸಲ ಇದರ ಪ್ರಮಾಣ 22,570 ಕ್ವಿಂಟಲ್ ಮಾತ್ರ. ಬಹುತೇಕ ಸಣ್ಣ, ಮಧ್ಯಮ ವರ್ಗದ ರೈತರು ಜೋಳ ಬೆಳೆಯುತ್ತಿದ್ದು ಬೆಲೆಯೇರಿಕೆಯಿಂದ ತಮಗೆ ಖರೀದಿಸಲು ಸಾಧ್ಯವಾಗದು ಎಂಬ ನಿರೀಕ್ಷೆಯಿಂದ ಈ ಧಾನ್ಯವನ್ನು ಮಾರುಕಟ್ಟೆಗೆ ತಂದಿರಲಿಕ್ಕಿಲ್ಲ ಎಂಬ ಅಭಿಮತ ಕೃಷಿ ಇಲಾಖೆ ಅಧಿಕಾರಿಗಳದ್ದು.ದುಪ್ಪಟ್ಟು ಬೆಲೆ: ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ಬಿಳಿ ಜೋಳದ ಬೆಲೆ ದುಪ್ಪಟ್ಟಾಗಿದೆ. ಉತ್ತಮ ಗುಣಮಟ್ಟದ ಜೋಳ ಕ್ವಿಂಟಲ್‌ಗೆ 1,700 ರೂಪಾಯಿಗಳಂತೆ ಮಾರಾಟವಾಗಿದ್ದರೆ, ಈ ವರ್ಷ ಇದರ ಬೆಲೆ 3,600 ರೂಪಾಯಿವರೆಗೆ ತಲುಪಿದೆ. ಮಾರುಕಟ್ಟೆಯಲ್ಲಿ ಸಗಟು ಖರೀದಿಸುವ ವ್ಯಾಪಾರಿಗಳು, ಚಿಲ್ಲರೆ ಅಂಗಡಿಗಳಲ್ಲಿ ಮಾರುತ್ತಿರುವುದು ಪ್ರತಿ ಕಿಲೋಗೆ 38ರಿಂದ 40 ರೂಪಾಯಿವರೆಗೆ!“ಕಳೆದ ವರ್ಷ ಇಪ್ಪತ್ತು ರೂಪಾಯಿಗೆ ಜೋಳ ಮಾರಿದ್ದೇನೆ. ಈ ಸಲ ಇದು ನಲ್ವತ್ತು ರೂಪಾಯಿಗೆ ಏರಿದೆ. ಎಷ್ಟೋ ಜನರು ಬೆಲೆ ಕೇಳಿ, ಗಾಬರಿಯಿಂದ ಖರೀದಿಸದೇ ಹಾಗೇ ಹೋಗಿ ಬಿಡುತ್ತಾರೆ” ಎಂದು ವೆಂಕಟೇಶನಗರದ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.ಕುತೂಹಲದ ವಿಷಯವೆಂದರೆ ಜೋಳದ ಬೆಲೆ ಏರುತ್ತಿದ್ದರೂ ಗೋಧಿ ಬೆಲೆ ಮಾತ್ರ ಕೈಗೆ ಸಿಗುವಂತಿದೆ. ಉತ್ತಮ ಗುಣಮಟ್ಟದ ಗೋಧಿ ಕಿರಾಣಿ ಅಂಗಡಿಗಳಲ್ಲಿ ಪ್ರತಿ ಕಿಲೋಗೆ 22 ರೂಪಾಯಿಗೆ ಸಿಗುತ್ತಿದ್ದು, ಮಧ್ಯಮ ವರ್ಗದವರು ಜೋಳಕ್ಕಿಂತ ಗೋಧಿಯನ್ನೇ ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ!ಗುಲ್ಬರ್ಗ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೊಗರಿ ಧಾನ್ಯಕ್ಕೆ ಹೋಲಿಸಿದರೆ, ಜೋಳದ ಪ್ರಮಾಣ ಲೆಕ್ಕಕ್ಕೇ ಇಲ್ಲ. ಗುಲ್ಬರ್ಗ ಎಪಿಎಂಸಿಗೆ ಇಲ್ಲಿಯವರೆಗೆ ತೊಗರಿ 10,28,012 ಕ್ವಿಂಟಲ್ ಆವಕವಾಗಿದ್ದರೆ, ಜೋಳದ ಪ್ರಮಾಣ ಅದರ ಶೇ 3ಕ್ಕಿಂತಲೂ ಕಡಿಮೆ! ಆದರೆ ಬೆಲೆ ಮಾತ್ರ ತೊಗರಿಯ ಮಟ್ಟವನ್ನೇ ತಲುಪಿದೆ.ಅಧಿಕ ವ್ಯಾಪ್ತಿ: ಅಧಿಕ ದರ ಸಿಗುವ ಧಾನ್ಯದ ಬಿತ್ತನೆಗೆ ಮುಂದಾಗುವುದು ರೈತರ ಪ್ರವೃತ್ತಿ. ಈ ಬಾರಿಯೂ ಹಾಗೇ ಆಗಲಿದೆ. ತೊಗರಿಯ ಬೆಲೆಯಲ್ಲಿ ಉಂಟಾದ ಅಸ್ಥಿರತೆ ಹಾಗೂ ಬಿಳಿಜೋಳಕ್ಕೆ ಸಿಕ್ಕ ಒಳ್ಳೆಯ ದರ, ಈ ಬೆಳೆಯತ್ತ ಮುಂದಾಗಲು ರೈತರನ್ನು ಪ್ರೇರೇಪಿಸಿದೆ.ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಕೇವಲ ಐದು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜೋಳದ ವಿಸ್ತೀರ್ಣ, ಈ ಸಲ ಏಳೂವರೆ ಸಾವಿರ ಎಕರೆಗೆ ವಿಸ್ತರಿಸಲಿದೆ. “ಈ ಪ್ರಮಾಣ ಕೇವಲ ನಮ್ಮ ನಿರೀಕ್ಷೆ. ವಾಸ್ತವವಾಗಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಎಳ್ಳು, ಹೆಸರು, ತೊಗರಿ ಹೊರತುಪಡಿಸಿದರೆ ಬಿಳಿಜೋಳದ ದರ ಗಮನಾರ್ಹ ಎಂಬಷ್ಟು ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಇತರ ಬೆಳೆಗಳನ್ನು ಕೈಬಿಟ್ಟು ಜೋಳದ ಬಿತ್ತನೆಗೆ ಮುಂದಾದರೆ ಅಚ್ಚರಿಯಿಲ್ಲ” ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.ಜೋಳದ ಬೆಲೆ ಹಾಗೂ ದರ ಹೋಲಿಕೆ

ವರ್ಷ
 2010  2011

ಬಿತ್ತನೆ (ಎಕರೆಗಳಲ್ಲಿ) 5,200 7,500

ಸರಾಸರಿ ದರ (ರೂ.) 1,000 3,600

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry