ಬುಧವಾರ, ನವೆಂಬರ್ 20, 2019
21 °C

ಜೋಶಿ ದಾಖಲಿಸಿದ್ದ ಪ್ರಕರಣ ವಜಾ

Published:
Updated:

ಬೆಂಗಳೂರು: ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ. ಮಹೇಶ್ ಜೋಶಿ ಅವರು ತಮ್ಮ ಕೇಂದ್ರದ ಕಾರ್ಯಕ್ರಮ ಸಿಬ್ಬಂದಿ ಸಂಘದ ಒಂಬತ್ತು ಸದಸ್ಯರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.ನಕಲಿ ದಾಖಲೆಗಳನ್ನು ಬಳಸಿ 1998-99ರಲ್ಲಿ ತಮ್ಮ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿದ್ದಾರೆ ಎಂದು ಜೋಶಿ 2004ರಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದಲ್ಲಿ ಕೆ.ಆರ್. ಶ್ರೀನಿವಾಸ್, ಎನ್.ಕೆ. ಮೋಹನರಾಮ, ಎನ್. ರಾಘವನ್, ಎನ್.ವಿ. ವಿಜಯಲಕ್ಷ್ಮಿ, ಸುಧಾ ರಾವ್, ಎಚ್. ಸುಲೋಚನಾ, ಜಯಶ್ರೀ ನಾರಾಯಣ್, ಎ. ದಾಸ ಮತ್ತು ಸಿ.ಎನ್. ಕೃಷ್ಣಕುಮಾರ್ ಅವರನ್ನು ಆರೋಪಿಗಳಾಗಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ, ಸಂಘದ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ, `ದೂರುದಾರ ಜೋಶಿ ಈ ಕ್ರಿಮಿನಲ್ ಪ್ರಕರಣವನ್ನು ಸಂಘದ ಸದಸ್ಯರ ವಿರುದ್ಧ ದ್ವೇಷಪೂರಿತವಾಗಿ ದಾಖಲು ಮಾಡಿದ್ದಾರೆ' ಎಂದು ಗುರುವಾರ ನೀಡಿರುವ ಆದೇಶದಲ್ಲಿ  ಹೇಳಿದ್ದಾರೆ.ತಮ್ಮ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿ, ಅದನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಿದ ಸಂಘದ 25 ಸದಸ್ಯರ ವಿರುದ್ಧ ಜೋಶಿ, 1999ರಲ್ಲಿ ಮಾನಹಾನಿ ಪ್ರಕರಣ ದಾಖಲು ಮಾಡಿದ್ದರು. ಅವರಲ್ಲಿ ಒಂಬತ್ತು ಸದಸ್ಯರನ್ನು ಹೊರತುಪಡಿಸಿ ಉಳಿದವರು ಕ್ಷಮಾಪಣೆ ಕೋರಿದ ಕಾರಣ, ಅವರ ವಿರುದ್ಧದ ಪ್ರಕರಣವನ್ನು ಹಿಂಪಡೆದಿದ್ದರು. ಮಾನಹಾನಿ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೋಷಿಗಳು ಎಂದು ಹೇಳಿತ್ತು.ನಂತರ ಜೋಶಿ ಅವರು ಇವರ ವಿರುದ್ಧ ದಾಖಲೆಗಳನ್ನು ತಿರುಚಿದ ಆರೋಪ ಹೊರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಪ್ರತಿಕ್ರಿಯಿಸಿ (+)