ಮಂಗಳವಾರ, ಮೇ 17, 2022
25 °C

ಜ್ಞಾನಗಂಗೆ: ಮೇಳೈಸಿದ ಯುವಪ್ರತಿಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಲ್ಲಿ ಎಲ್ಲಿ ನೋಡಿದರೂ ತುಂಬಿ ತುಳುಕಾಡುವ ಹಸಿರು. ಮಧ್ಯದಲ್ಲಿ ಅಲ್ಲಲ್ಲಿ ಹಸಿರು ಹೊದಿಸಿದಂತೆ ಕಂಡು ಬರುವ ಬೃಹತ್ ಕಟ್ಟಡಗಳು. ಅಲ್ಲಿ ನೂರಾರು ಸಂಖ್ಯೆಯ ಯುವಕರು ಒಂದೇ ಕಡೆ ಒಂದೇ ವೇಳೆಗೆ ಬಂದು ಜಮಾಯಿಸಿದ್ದರು. ಕೈಯಲ್ಲಿ ಡೋಲು, ಹಲಗೆ ಮುಂತಾದ ವಾದ್ಯ, ಬಣ್ಣ, ಬಣ್ಣದ ಛತ್ರಿ-ಚಾಮರ ಹಿಡಿದವರು ಕೆಲವರಾದರೆ ಮುಖಕ್ಕೆ ಮುಖವಾಡ ಹಾಕಿಕೊಂಡು ತಲೆದೂಗುವ, ಥೇಟ್ ಬುಡಕಟ್ಟು ಜನಾಂಗದಂತೆ ಕಂಗೊಳಿಸುವ ಇನ್ನೂ ಕೆಲವರಿದ್ದರು. ವಿವಿಧ ಬಗೆಯ ವೇಷ ಭೂಷಣ ತೊಟ್ಟು ನಿಂತಲ್ಲಿ ನಿಲ್ಲದೆ ಅತ್ತಿಂದಿತ್ತ ಅತ್ಯಂತ ವೈನಾಗಿ ಕುಣಿದು ಕುಪ್ಪಳಿಸುವ ಯುವಕರ ದಂಡು ಅಲ್ಲಿತ್ತು.ಎಲ್ಲರ ಮುಖದಲ್ಲೂ ಉತ್ಸಾಹದ ಕಳೆ ತುಂಬಿತ್ತು. ಎಲ್ಲಿ ನೋಡಿದರಲ್ಲಿ ಹಾಡು, ವಾದ್ಯ, ಮೇಳಗಳ ನಾದ-ನಿನಾದ ತುಂಬಿಕೊಂಡಿತ್ತು. ಕಾರ್ಯಕ್ರಮ ನಡೆಯುವ ಮುಖ್ಯ ಕಟ್ಟಡಗಳ ಮುಂದಿರುವ ಗಿಡ-ಮರಗಳಿಗೆ ಬಣ್ಣ, ಬಣ್ಣದ ಬಟ್ಟೆಗಳನ್ನು ಕಟ್ಟಿ ಅಂದ ಚೆಂದಗೊಳಿಸಲಾಗಿತ್ತು. ಆ ಗಿಡ, ಮರಗಳು ನವ ವಧುವಿನಂತೆ ಕಂಗೊಳಿಸುತ್ತಿದ್ದವು.ನಿಗದಿತ ಸ್ಥಳದಿಂದ ಆರಂಭವಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರ ಮೈ-ಮನಗಳು ರೋಮಾಂಚನಗೊಳ್ಳುವಂತೆ ಡೋಲಿನ ಸಪ್ಪಳ ಜೋರಾಗಿಯೇ ಕೇಳಿ ಬರುತ್ತಿತ್ತು. ಅಲ್ಲಿ ಪಾಲ್ಗೊಂಡ ಎಲ್ಲರೂ ವಾದ್ಯ, ಮೇಳಗಳಿಗೆ ತಲೆ ದೂಗುತ್ತಿದ್ದರು. ಇನ್ನೂ ಕೆಲವರು ತಮಗರಿವಿಲ್ಲದಂತೆ ಯುವಕರೊಂದಿಗೆ ಹೆಜ್ಜೆ ಹಾಕುತ್ತ ಮುಂದೆ ಸಾಗುತ್ತಿದ್ದರು.ಹೀಗೆ ಸಾಂಸ್ಕೃತಿಕ ಕಲರವದೊಂದಿಗೆ ಹೊರಟ ಮೆರವಣಿಗೆ ಮುಖ್ಯ ವೇದಿಕೆ ತಲುಪುತ್ತಿದ್ದಂತೆ ಯುವಕರ ಉತ್ಸಾಹ ಮೇರೆ ಮೀರಿತು. ಯುವಕರ ಅಮಿತೋತ್ಸಾಹವನ್ನು ದೂರದಿಂದಲೇ ಗಮನಿಸುತ್ತಿದ್ದ ಕಾರ್ಯಕ್ರಮ ಆಯೋಜಕರು, ಅವರ ತಾಳ, ವಾದ್ಯಗಳನ್ನು ಕೈಗೆತ್ತಿಕೊಂಡರು. 50-60 ವಯಸ್ಸಿನ ಆಸು,ಪಾಸಿನಲ್ಲಿದ್ದರೂ 20-30 ವಯಸ್ಸಿನ ಯುವಕರಂತೆ ಕುಣಿದು ಕುಪ್ಪಳಿಸಿದರು.ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಗುರುವಾರದಿಂದ ಆರಂಭವಾಗಿರುವ ಅಂತರ ಮಹಾವಿದ್ಯಾಲಯ ಯುವಜನೋತ್ಸವ-2011 ಕಾರ್ಯಕ್ರಮ ಆರಂಭಕ್ಕಿಂತ ಮುಂಚೆ ಕಂಡು ಬಂದು ದೃಶ್ಯಗಳಿವು.ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು ಔಪಚಾರಿಕವಾಗಿ ಒಂದೆರಡು ಮಾತನಾಡಿದರು. ನಂತರ `ಎಲ್ಲೋ ಜೋಗಪ್ಪ ನಿನ್ನರಮನೆ, ಬಿದಿರು ನಿನ್ಯಾರಿಗೂ ಅಲ್ಲದವಳು, ಚೆಲ್ಲಿದರು ಮಲ್ಲಿಗೆಯ~ ಎಂಬ ಹಾಡುಗಳನ್ನು ಶುಶ್ರಾವ್ಯವಾಗಿ ಹಾಡುತ್ತಿದ್ದರೆ, ಅಲ್ಲಿದ್ದವರು ಹಾಡಿಗೆ ಹಿನ್ನೆಲೆಯಾಗಿ ಚಪ್ಪಾಳೆಯ ತಾಳ ಹಾಕುತ್ತಿದ್ದರು.

ನಂತರ ವಿಜ್ಞಾನ ವಿಭಾಗದ ವಿವಿಧ ಸಭಾಂಗಣದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಸಕ್ತ ಜನರ ಆಕರ್ಷಣೆ ಕೇಂದ್ರಗಳಾಗಿ ಮಾರ್ಪಟ್ಟವು.ಈ ಭಾಗದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉನ್ನತಿಯ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತದೆ ಎನ್ನುವುದಕ್ಕೆ ಈ ಯವಜನೋತ್ಸವ ಸಾಕ್ಷಿಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.