ಜ್ಞಾನದ ಹೊಳೆಯಲ್ಲಿ ಮುಳುಗಿ...

7
ಸ್ವಸ್ಥ ಬದುಕು

ಜ್ಞಾನದ ಹೊಳೆಯಲ್ಲಿ ಮುಳುಗಿ...

Published:
Updated:

ಕೆಲವರ ಮನಸ್ಸು ಸದಾ ಚಡಪಡಿಸುತ್ತಿರುತ್ತದೆ. ದೇಹ ಯಾವಾಗಲೂ ಅಸ್ವಸ್ಥವಾಗಿರುತ್ತದೆ. ವಿಶ್ರಾಂತಿಯಿಲ್ಲದ ಮನಸ್ಸು ಹೀಗೆ ಮಾಡುತ್ತಿರುತ್ತದೆ.  ಇದರಿಂದಾಗಿ ದೇಹ ಅನಾರೋಗ್ಯಪೀಡಿತವಾಗುತ್ತದೆ. ಎಂತಹ ಪರಿಸ್ಥಿತಿಯಲ್ಲೂ ಹೀಗಾಗದಂತೆ ನೀವು ನೋಡಿಕೊಳ್ಳಬೇಕು.ಚಡಪಡಿಸುವ ಮನಸ್ಸು ಅಸಂತುಷ್ಟವಾಗಿರು­ತ್ತದೆ. ಅತ್ಯಂತ ಆದರ್ಶಮಯ ಸನ್ನಿವೇಶದಲ್ಲೂ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುತ್ತದೆ. ನನಗೆ ಪರಿಚಿತರೊಬ್ಬರ ಮನೆಯಲ್ಲಿ ಆರು ಸದಸ್ಯರಿದ್ದಾರೆ. ಈ ಆರು ಜನರಿಗೆ ನಾಲ್ಕು ಜನ ಕೆಲಸದವರು ಇದ್ದಾರೆ. ನಾಲ್ಕನೆಯ ಕೆಲಸದಾಕೆಯ ಬಗ್ಗೆ ಮನೆಯ ಒಡತಿ ಗೊಣಗುತ್ತ ಇರುತ್ತಾಳೆ. ‘ಕೆಲವರು ದಿನವಿಡೀ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಮನೆಗೆ ಹೋಗಿ ಮಲಗುವತನಕ ಕೆಲಸ ಮಾಡುತ್ತಲೇ ಇರುತ್ತಾರೆ.

ಒಬ್ಬರೇ ಒಬ್ಬ ಕೆಲಸದವರೂ ಅವರಿಗೆ ಇರುವುದಿಲ್ಲ’ ಎಂದು ಆಕೆಗೆ ನಾನು ಹೇಳಿದೆ.  ಮನಸ್ಸಿಗೆ ಅಪ್ಪಿಕೊಳ್ಳಲು ಉತ್ತಮವಾದ, ಆದರ್ಶಮಯವಾದ ವಿಚಾರ ಇಲ್ಲದೇ ಇದ್ದಾಗ ಚಡಪಡಿಕೆ ಆರಂಭವಾಗುತ್ತದೆ. ತನ್ನದು ಎಂದು ಹೇಳಿಕೊಳ್ಳಲು ಅದಕ್ಕೆ ಪರಿಶುದ್ಧವಾದ, ಆರೋಗ್ಯಕರವಾದ ಅಭ್ಯಾಸವೊಂದು ಬೇಕಿರುತ್ತದೆ. ಅಧ್ಯಯನ ಅಥವಾ ಕಲಿಯುವಿಕೆ ಅತ್ಯುತ್ತಮ ಹವ್ಯಾಸ.   ಕಲಿಯುವಿಕೆಯಲ್ಲಿ ತೊಡಗಿಕೊಂಡ ಮನಸ್ಸು ದಿನೇದಿನೇ ತಣ್ಣಗಾಗುತ್ತದೆ. ಸಂತೃಪ್ತಿ ಹೊಂದುತ್ತದೆ. ಯಾವುದೇ ಬೇಡಿಕೆ ಮುಂದಿಡದೇ ಎಲ್ಲವನ್ನೂ ಸ್ವೀಕರಿಸುತ್ತದೆ. ಇಂತಹ ಮನಸ್ಸು ಅನ್ವೇಷಣೆಯಲ್ಲಿ ತೊಡಗಿಕೊಳ್ಳುತ್ತದೆ. ಅದಕ್ಕೆ ಹೊಸ ಒಳನೋಟಗಳು ಹೊಳೆಯುತ್ತವೆ. ಅಂತಹ ಒಬ್ಬ ಮಹಿಳೆಯ ಬಗ್ಗೆ ನಾನು ಕೇಳಿದ್ದೇನೆ. ಏರೋನಾಟಿಕಲ್‌ ಎಂಜಿನಿಯರ್‌ ಆಗಿರುವ ಅವರು  ಮಕ್ಕಳಿಗೆ ಪುಟ್ಟ ಏರೋಪ್ಲೇನ್‌ ಪ್ರತಿಕೃತಿ ಮಾಡುವುದನ್ನು ಹೇಳಿಕೊಡುತ್ತಾರೆ. ವಿಜ್ಞಾನದ ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ. ಆಕೆಯ ಮನಸ್ಸು ಮುಗ್ಧವಾಗಿದೆ. ಪರಿಶುದ್ಧವಾಗಿದೆ. ಸೃಜನಶೀಲ ವಿಚಾರಗಳ ಬಗ್ಗೆ ಯೋಚಿಸುತ್ತಿರುವಾಗಲೂ ವಿಶ್ರಾಂತ ಸ್ಥಿತಿಯಲ್ಲಿ ಇರುತ್ತದೆ.  ಕಲಿಯುವಿಕೆ ಅಂದರೆ ಏನು? ಯಾವುದನ್ನಾದರೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಅತೀವ ಆಸಕ್ತಿಯಿಂದ ಓದುವುದು, ಕೇಳುವುದು ಅಥವಾ ನೋಡುವುದು. ಪದವಿ ಪಡೆಯುವ ಉದ್ದೇಶದಿಂದ ಮಾತ್ರ ಓದಿದಲ್ಲಿ ನಾವು ಏನನ್ನೂ ಕಲಿಯುವುದಿಲ್ಲ. ಅರ್ಥ ಮಾಡಿಕೊಳ್ಳುವುದಿಲ್ಲ. ಆಗ ನಾವು ಯಂತ್ರಮಾನವರಂತೆ ಓದಿರುತ್ತೇವೆ.  ‘ನನ್ನ ಬಳಿ ಸಮಯವಿಲ್ಲ. ನನಗೆ ಈಗ ಓದಲು ಮೂಡಿಲ್ಲ. ನನ್ನ ಮನಸ್ಸು ಸರಿಯಿಲ್ಲ. ಗಮನವಿಟ್ಟು ಓದಲು ಆಗುತ್ತಿಲ್ಲ’ ಎಂಬಂತಹ ಗೊಣಗಾಟ ಆಗ ಆರಂಭವಾಗಿರುತ್ತದೆ.  ಅಂತಹ ಮನಸ್ಸಿನಲ್ಲಿ ಕಸ, ಕಡ್ಡಿ ತುಂಬಿಕೊಂಡಿರುತ್ತದೆ. ಅದನ್ನು ತೆಗೆದುಹಾಕದ ಹೊರತೂ ನೀವು ಶಾಂತಿಯಿಂದ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮನಸ್ಸು ತಿಳಿಯಾಗಿಸಿಕೊಳ್ಳಲು ನಿತ್ಯ ಅರ್ಧಗಂಟೆ  ವಾಕ್‌ ಮಾಡಿ. ಸೈಕಲ್‌ ತುಳಿಯಿರಿ. ಇಷ್ಟು ಮಾಡಿದರೆ ಸಾಕು ಮನಸ್ಸು ಎಲ್ಲ ಅಸಹನೆ, ಅತೃಪ್ತಿಯನ್ನು ಹೊರದೂಡಿ ಶಾಂತವಾಗುತ್ತದೆ.ಆಗ ನಿಮ್ಮ ಮನಸ್ಸು ಎಲ್ಲವನ್ನೂ ಸ್ವೀಕರಿಸುವ ಸ್ಥಿತಿ ತಲುಪುತ್ತದೆ. ಶಿಸ್ತು ಅಳವಡಿಸಿಕೊಳ್ಳುತ್ತದೆ. ಜ್ಞಾನದ ಹರಿವಿಗೆ ತೆರೆದುಕೊಳ್ಳುತ್ತದೆ. ಸಂತರು ಹೇಳುತ್ತಾರೆ. ನಾವು ಈ ಭೂಮಿಗೆ ಕಲಿಯಲು ಬಂದಿದ್ದೇವೆ.   ಅಧ್ಯಯನ, ಕಲಿಯುವಿಕೆಯಲ್ಲಿ ತೊಡಗಿಕೊಳ್ಳುತ್ತ ಹೋದಂತೆ ನೀವು ‘ಝೆನ್‌’ ಗುರುವಿನಂತೆ ಆಗುತ್ತೀರಿ. ನೀವು ಸ್ಟಡಿ ಟೇಬಲ್‌ ಮುಂದೆ ಕುಳಿತುಕೊಂಡು ಪುಸ್ತಕ ತೆರೆಯಿರಿ. ಬುದ್ಧನ ಕಣ್ಣಿನಿಂದ ಆ ಅಕ್ಷರಗಳನ್ನು, ಪದಗಳನ್ನು ನೋಡಿ. ಅವುಗಳಲ್ಲಿರುವ ಅರ್ಥ, ಜ್ಞಾನ ನಿಮ್ಮೊಳಗೆ ತುಂಬಿಕೊಳ್ಳುತ್ತದೆ.  ಜ್ಞಾನ ನಿಮ್ಮೊಳಗೆ ಇಳಿಯುತ್ತ ಹೋದಂತೆ ಕಲಿಯುವಿಕೆ ಯಾಂತ್ರಿಕವಾಗುವುದಿಲ್ಲ. ಸುಂದರ ಹಾಡಾಗುತ್ತದೆ. ಜ್ಞಾನದ ಮಾಧುರ್ಯ ನಿಮ್ಮ ಹೃದಯವನ್ನು ಆವರಿಸಿಕೊಳ್ಳುತ್ತದೆ. ಪರೀಕ್ಷೆಗಳೆಂದರೆ ಎಲ್ಲರೂ ಮುಖ ಸಿಂಡರಿಸಿಕೊಳ್ಳುತ್ತಾರೆ. ನಿಮ್ಮೊಳಗಿನ ಈ ಜ್ಞಾನದ ಸಂಗೀತವನ್ನು ವ್ಯಕ್ತಪಡಿಸಲೆಂದೇ ಪರೀಕ್ಷೆಗಳು ಇರುತ್ತವೆ.   ಪುಸ್ತಕ ಹಿಡಿದೊಡನೆ ನಿಮ್ಮ ಗಮನ ಇತರ ಸಂಗತಿಗಳೆಡೆ ಇರುವುದಿಲ್ಲ. ಜ್ಞಾನ ನಿಮ್ಮನ್ನು ಆವರಿಸುತ್ತದೆ.

ಅಂತಹ ಏಕಾಗ್ರತೆಯಿಂದ, ಜ್ಞಾನದ ನದಿ ನಿಮ್ಮೊಳಗೆ ಹರಿಯತೊಡಗಿದಾಗ ಕಾಲವೇ ಸ್ತಬ್ಧವಾದಂತೆ ಅನಿಸುತ್ತದೆ. ಅದು ಸಹಜವಾಗಿರುತ್ತದೆ. ಹೊಸ, ಹೊಸ ವಿಚಾರಧಾರೆಗಳನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ. ಜ್ಞಾನದ ಹೊಳೆಯಲ್ಲಿ ಈಸು ಹೊಡೆಯುವ ಈಜುಗಾರನಂತೆ ನೀವು ಆಗುತ್ತೀರಿ.   ನಿಮ್ಮ ಮನಸ್ಸು ಕಲಿಯುವಿಕೆಯಲ್ಲಿ ಹೀಗೆ ತೊಡಗಿಕೊಂಡಾಗ ಯಾವುದೇ ಒತ್ತಡ ಇರುವುದಿಲ್ಲ. ಚಡಪಡಿಕೆ, ಅತೃಪ್ತಿ ಎಲ್ಲವೂ ಮಾಯವಾಗುತ್ತದೆ. ಶಾಂತಿ, ನೆಮ್ಮದಿ ಆವರಿಸುತ್ತದೆ. ಓದುವುದು, ಬರೆಯುವುದು, ಕೇಳುವುದು, ಬರೆಯುವುದು ಮಾಡುತ್ತ ಹೋದಂತೆ ಅದು ನಿಮ್ಮ ಸಹಜ ಗುಣವಾಗಿಬಿಡುತ್ತದೆ.ನಿಮ್ಮ ಮನಸ್ಸು ಕಲಿಯುವ ಪ್ರಕ್ರಿಯೆಯನ್ನು ಅಪ್ಪಿಕೊಳ್ಳುತ್ತದೆ. ತನ್ನದಾಗಿಸಿಕೊಳ್ಳುತ್ತದೆ. ದೇಹದ ನೋವು, ಕಿರಿಕಿರಿಗಳು ಮಾಯವಾಗುತ್ತವೆ. ಇದೊಂದು ಸುಂದರ ಅನುಭವ. ದೇಹ ಆರೋಗ್ಯದಿಂದ ನಳನಳಿಸುತ್ತದೆ. ಮನಸ್ಸು ಸಂಪದ್ಭರಿತವಾಗುತ್ತದೆ. ನಿಮ್ಮ ಚೈತನ್ಯ ಎತ್ತರಕ್ಕೆ ಏರಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry