ಶನಿವಾರ, ಫೆಬ್ರವರಿ 27, 2021
20 °C
ಸ್ವಸ್ಥ ಬದುಕು

ಜ್ಞಾನದ ಹೊಸ ಹಾದಿ ತೆರೆದು ಕೊಳ್ಳಲಿ

ಭರತ್‌ ಮತ್ತು ಶಾಲನ್‌ಸವೂರ್ Updated:

ಅಕ್ಷರ ಗಾತ್ರ : | |

ಜ್ಞಾನದ ಹೊಸ ಹಾದಿ ತೆರೆದು ಕೊಳ್ಳಲಿ

ತತ್ವ ಶಾಸ್ತ್ರಜ್ಞ ರಬ್ಬಿ ಜೋಸೆಫ್‌ಕಾರೊ ಯಹೋದ್ಯರ ಪವಿತ್ರಗ್ರಂಥ ತಾಲ್ಮುಡ್ ಅನ್ನು ಓದುತ್ತಿದ್ದ. ಅದರೊಳಗಿನ ಒಂದು ಪ್ಯಾರ ತನ್ನ ಅಂತರಾರ್ಥವನ್ನು ಬಿಟ್ಟುಕೊಡದೆ ಹಲವು ದಿನಗಳಿಂದ ಸತಾಯಿಸುತ್ತಿತ್ತು. ಕಡೆಗೂ ಒಂದು ಬೆಳಗು ಥಟ್ಟನೆ ಅದರರ್ಥ ಹೊಳೆಯಿತು. ಆತನಿಗೆ ಅದೊಂದು ವಿಶೇಷ ಗಳಿಗೆಯೇ. ಭಗವಂತನಿಗೆ ಭರಪೂರ ಧನ್ಯವಾದ ಹೇಳಿದ.ಹಾಗೆ ಸುಮ್ಮನೆ ಪಕ್ಕದ ಟೇಬಲ್ಲಿನತ್ತ ಕಣ್ಣು ಹಾಯಿಸಿದಾಗ ಉದ್ಯಮಿಯೊಬ್ಬ ಅದೇ ಪ್ಯಾರಾವನ್ನು ಓದುತ್ತಿದ್ದ. ರಬ್ಬಿ ಆಸಕ್ತಿಯಿಂದ ಆತನನ್ನೇ ಗಮನಿಸತೊಡಗಿದ. ಉದ್ಯಮಿಗೆ ಅದರ ಅರ್ಥ ಸುಲಭವಾಗಿ ದಕ್ಕಿತು. ರಬ್ಬಿಗೆ ಅಚ್ಚರಿ, ನೋವು ಹಲವು ಭಾವಗಳು ಒಟ್ಟೊಟ್ಟಿಗೆ ಇರುತ್ತವೆ. "ಆತನಿಗೆ ಅಷ್ಟು ಸುಲಭವಾಗಿ ಅರ್ಥವಾದದ್ದು, ನನಗೇಕೆ ಆಗಲಿಲ್ಲ ನನ್ನಲ್ಲೇ ಏನೋ ಕೊರತೆ ಇರಬೇಕು,” ಎಂದು ನೊಂದುಕೊಂಡ.ಆದರೆ ಅಂದು ರಾತ್ರಿಯ ಸ್ವಪ್ನದಲ್ಲಿ ಆತನಿಗೆ ಪರಿಹಾರ ದೊರಕಿತು. ನೀನು ಇದಕ್ಕೆ ಸಂಪೂರ್ಣ ಹೊಸ ವ್ಯಾಖ್ಯಾನವನ್ನೇ ನೀಡಿರುವೆ. ವ್ಯಾಖ್ಯಾನಿಸಿದಂತೆ ಮತ್ಯಾರೂ ವ್ಯಾಖ್ಯಾನ ಮಾಡಲಾಗಲಿಲ್ಲ. ಹಾಗಾಗಿಯೇ ನಿನಗೆ  ಅದನ್ನು ಅರ್ಥೈಸಿಕೊಳ್ಳಲು ಇಷ್ಟು ಸಮಯ ಬೇಕಾಯಿತು. ಇಂಥ ದೈವಿಕ ಜ್ಞಾನ ಲೌಕಿಕ ಜಗತ್ತಿಗೆ ಬರಬೇಕಾದರೆ ಆ ಮಟ್ಟಿನ ಶ್ರಮ ಪಡಬೇಕಾಗಿತ್ತು. ಸತ್ಯ ದರ್ಶನಕ್ಕೆ ನೀನು ಸಾಧನವಾದೆ ಎಂದಿತು ಸ್ವಪ್ನ.ಈ ಕಥೆ ನನಗೆ ಬಲು ಪ್ರೀತಿ. ಭೂಮಿಯ ಮೇಲಿರುವ ಪ್ರತಿಯೊಬ್ಬರೂ ಅನನ್ಯ ಜೀವಿಗಳೇ. ನಮ್ಮ ಶ್ರಮ ಎಂದೂ ವ್ಯರ್ಥವಾಗದು. ವಿಶ್ವದ ಯಾವುದೋ ಸತ್ಯದ ಮೇಲೆ ಅವು ಬೆಳಕು ಚೆಲ್ಲುತ್ತವೆ. ಪ್ರತಿಯೊಬ್ಬರಲ್ಲೂ ಯಾವುದೋ ದೊಡ್ಡ ಗುಣ, ದೈವಿಕ ಅಂಶವಿದೆ. ನಮ್ಮ ಪರಿಶ್ರಮವೇ ಈ ಹುದುಗಿರುವ ಒಳಿತನ ಬೀಜ ಮೊಳಕೆಯೊಡೆಯುವಂತೆ ಮಾಡಿ ಜ್ಞಾನದ ಚಿಗುರು ಮೂಡುವಂತೆ ಮಾಡುತ್ತದೆ. ವಿಶ್ವದ ಅಜ್ಞಾನ ಕತ್ತಲೆಯನ್ನು ತೊಲಗಿಸುವ ಕೆಲಸ ಮಾಡುತ್ತದೆ. ಆ ಮೂಲಕ  ಜ್ಞಾನ ಎಲ್ಲರಿಗೂ ಲಭ್ಯವಾಗುತ್ತದೆ.ಪ್ರತಿನಿತ್ಯವೂ ದೇವರಿಗೆ ತಾನೂ ಸೃಷ್ಟಿಸಿದ ಬೆಳಗು ಅಚ್ಚರಿ ಹುಟ್ಟಿಸುತ್ತದೆ. ಅನಾರೋಗ್ಯವೂ ಆತನ ಆಟ ಸಾರುವ, ತಿಳಿವು ಮೂಡಿಸುವ ಸಾಧನವಾಗುತ್ತದೆ. ಸ್ವಾಮಿ ರಾಮದಾಸ್‌ಗೆ ಲಕ್ವ ಹೊಡೆದಾಗ "ನಾನೆಷ್ಟು ಅಹಂಕಾರಿಯಾಗಿದ್ದೆ! ಬೇರೆಯವರ ನೆರವನ್ನು ನಿರಾಕರಿಸಿದೆ. ನೆರವು, ಘನತೆ ಮತ್ತು ವಿನೀತ ಭಾವಗಳ ಪರಿಚಯವಾದದ್ದು ಆಗಲೇ" ಎನ್ನುತ್ತಾನೆ. ಹೊಸ ಅರಿವು ಎಲ್ಲ ದಿಕ್ಕುಗಳಿಂದಲೂ ಒಳ ತೂರಿ ಬರಲಿ.ಶ್ರದ್ಧೆಯೇ ಸಾಕ್ಷಾತ್ಕಾರದ ಕೀಲಿಕೈ. ಈ ಅಸೀಮ ಶಕ್ತಿಯ ಅರಿವಾಗಬೇಕು. ಯಾವುದೇ ಕೆಲಸ ಮಾಡುವಾಗಲೂ ಶ್ರದ್ಧೆಯಿರಬೇಕು. ಊಟ, ಉಸಿರಾಟ, ವ್ಯಾಯಾಮ, ಎಲ್ಲವನ್ನೂ ನಿಧಾನವಾಗಿ, ಪ್ರಜ್ಞಾಪೂರ್ವಕವಾಗಿ ಮಾಡಿ. ಇದರಿಂದಾಗಿ ನಿಮ್ಮೊಳಗೆ ಒಂದು  ಹೊಸ ಜೀವನೋತ್ಸಾಹ ಮೊಳೆಯುತ್ತದೆ.

ಶ್ರದ್ಧೆ ಮೂರು ಹಂತಗಳಲ್ಲಿ ನೆರವಾಗುತ್ತದೆ. ಸಕಾರಾತ್ಮಕ ಭಾವನೆಗಳನ್ನು ಹೊಂದಿರುವಿರಾದರೆ ಶ್ರದ್ಧೆಯು ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ನೆಲೆಯೂರಲು ಬಿಡುವುದೇ ಇಲ್ಲ. ಪ್ರೀತಿ, ಪ್ರೇಮ, ಕರುಣೆ, ಚೆಲುವು, ಒಪ್ಪಿಕೊಳ್ಳುವಿಕೆ, ಉಲ್ಲಾಸಗಳನ್ನು ಪರಿಚಯಿಸುವ ಜನ, ಪರಿಸ್ಥಿತಿಗಳು, ಶಬ್ದಗಳು ನಿಮ್ಮ ಬಳಿ ಸಾರುತ್ತವೆ.ಹಾಗೊಂದು ವೇಳೆ ನಕಾರಾತ್ಮಕ ಪರಿಸ್ಥಿತಿ ಎದುರಾದರೆ ನಾನೇ ಏಕೆ? ನನಗೇ ಏಕೆ ಹೀಗಾಗುತ್ತಿದೆ ಎಂದು ಸ್ವಾನುಕಂಪದ ಕೂಪದಲ್ಲಿ ನೀವು ಬೀಳುವುದಿಲ್ಲ. ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ನಾನೇನು ಮಾಡಬಲ್ಲೆ ಎಂದು ಆತ್ಮಾವಲೋಕನ ಮಾಡಿಕೊಂಡು, ಸದ್ದಿಲ್ಲದೆ ಸಕಾರಾತ್ಮಕವಾದ ಶಕ್ತಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೀರಿ. ಹಾಗೊಂದು ವೇಳೆ ನಕಾರಾತ್ಮಕ ಭಾವ ಸುಳಿದಾಗ ಒಂದು ಪ್ರಹಸನವನ್ನೋ ನಗೆ ಹಬ್ಬವನ್ನೋ ನೋಡಿ, ಕಿವಿಗಿಂಪಾದ ಸಂಗೀತವನ್ನು ಕೇಳಿ. ಒಂದೊಳ್ಳೆ ಪುಸ್ತಕವನ್ನು ಕೈಗೆತ್ತಿಕೊಂಡು ಓದಿ, ವ್ಯಾಯಾಮ ಮಾಡಿ. ನಿಮ್ಮ ಮನಸ್ಸಿನ ಗತಿ ಬದಲಾಗುತ್ತದೆ. ದೊಡ್ಡ ಪರ್ವತದಂತೆ ಕಂಡ ಸಮಸ್ಯೆ, ರಸ್ತೆಯ ಮೇಲೆ ಬಿದ್ದ ಚಿಕ್ಕ ಬೆಣಚು ಕಲ್ಲಿನಂತೆ ಕಾಣತೊಡಗುತ್ತದೆ.ಶ್ರದ್ಧೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಆ ಕೆಲಸದಲ್ಲೇ ಮುಳುಗಿದಾಗ ಹಠಾತ್ತಾಗಿ ಹೊಸ ಹೊಳಹು ಸಿಕ್ಕುತ್ತದೆ. ಅದು ನಿಮಗೆ ಅಸೀಮ ಆನಂದ ಕೊಡುತ್ತದೆ. ಆನಂದದಿಂದ ನಿಮಗೆ ಕುಣಿಯಬೇಕೆನ್ನಿಸುತ್ತದೆ. ಎಲ್ಲರೊಂದಿಗೂ ಈ ಹೊಸ ಜ್ಞಾನವನ್ನು ಹಂಚಿಕೊಳ್ಳಬೇಕೆನಿಸುತ್ತದೆ. ಇಂಥ ಕ್ಷಣಗಳಲ್ಲಿ ಜ್ಞಾನದ ಮೂಲ ಸೆಲೆಯೊಂದಿಗೆ ನೀವು ಸಂಪರ್ಕ ಪಡೆದಿರುತ್ತೀರಿ. ಉನ್ನತ ಶಕ್ತಿಯ ಪ್ರವಾಹ ನಿಮ್ಮೊಳಗೆ ಹರಿಯುತ್ತಿರುತ್ತದೆ.ರಬ್ಬಿ ಜೋಸೆಫ್‌ ಅನುಭವಿಸಿದಂಥ ಸುಂದರ ಅಂತಃಪ್ರೇರಣೆ, ನಿಮ್ಮಲ್ಲಿ ಅದೊಂದು ಬಗೆಯ ಘನತೆ ತುಂಬುತ್ತದೆ. ನಿಮ್ಮೊಳಗೆ ಅದೊಂದು ಬಗೆಯ ಪರಿಪೂರ್ಣತೆ, ಅಪರಿಮಿತವಾದ ಪ್ರೀತಿಯನ್ನು ತುಂಬುತ್ತದೆ. ಜಗದ ಕತ್ತಲನ್ನು ಕರಗಿಸುತ್ತದೆ ಜ್ಞಾನದ ದೀವಿಗೆ ಹೊತ್ತಿಸುತ್ತದೆ.ವಿಶ್ವದ ಅಪರೂಪದ ಸತ್ಯಗಳು, ಒಳನೋಟಗಳನ್ನು ಕಂಡುಕೊಳ್ಳುವ ಶಕ್ತಿಯನ್ನು ಬಳಸಿಕೊಳ್ಳಿ. ನೀವು ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡಿ. ಹಾಗಾದಾಗ ಅದರ ಫಲಗಳನ್ನು ನೋಡಿ. ನಿಮಗೆ ಹಾಗೂ ಎಲ್ಲರಿಗೂ ಜ್ಞಾನದ ಕಿಟಕಿಗಳನ್ನು ತೆರೆಯುತ್ತದೆ... "ನೀವು ಬೆಳಕನ್ನು ಕಂಡಿಲ್ಲ, ಬೆಳಕಿನಲ್ಲಿ ಮಿಂದ ವಸ್ತುಗಳನ್ನು ಕಂಡಿದ್ದೀರಿ ಅಷ್ಟೆ,” ಎನ್ನುತ್ತಾರೆ ಓಶೊ. ಬೆಳಕನ್ನು ನೋಡುವ ಅವಕಾಶವನ್ನು ನಮಗೆ ನಾವೇ ಕೊಟ್ಟುಕೊಳ್ಳೋಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.