ಸೋಮವಾರ, ಅಕ್ಟೋಬರ್ 21, 2019
26 °C

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಿರು ಹೊತ್ತಿಗೆ

Published:
Updated:

ಮೈಸೂರು: ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿರುವ 51 ಸಾಹಿತಿಗಳ ಕಿರು ಪರಿಚಯವುಳ್ಳ ಹೊತ್ತಿಗೆಯನ್ನು ಹೊರತರಲು ರಂಗಾಯಣ ಮುಂದಾಗಿದ್ದು, ಜ. 14 ರಂದು ಪುಸ್ತಕ ಲೋಕಾರ್ಪಣೆಯಾಗಲಿದೆ.ಜ. 14 ರಿಂದ 22ರ ವರೆಗೆ ರಂಗಾಯಣದಲ್ಲಿ ಆಯೋಜಿಸಲಾಗಿರುವ `ಬಹರೂಪಿ ರಾಷ್ಟ್ರೀಯ ನಾಟಕೋತ್ಸವ~ದಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳಲಿದೆ. ಮೊದಲ ಹಂತದಲ್ಲಿ 2 ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದ್ದು, ಈ ಪೈಕಿ ಒಂದು ಸಾವಿರ ಪ್ರತಿಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ರಂಗಾಯಣ ನಿರ್ಧರಿಸಿದೆ. ಉಳಿದ ಒಂದು ಸಾವಿರ ಪ್ರತಿಗಳನ್ನು ಕಡಿಮೆ ಬೆಲೆಯಲ್ಲಿ ಸಾಹಿತ್ಯಾಸಕ್ತರಿಗೆ ತಲುಪಿಸುವ ಮಹಾತ್ವಾಕಾಂಕ್ಷೆ ಹೊಂದಿದೆ.1965 ರಿಂದ ಜ್ಞಾನಪೀಠ ಪ್ರಶಸ್ತಿಯನ್ನು ಆರಂಭಿಸಲಾಗಿದ್ದು, ಮೊದಲ ಬಾರಿಗೆ ಮಲಯಾಳಂ ಲೇಖಕ ಜಿ.ಶಂಕರ್ ಕುರೂಪ್ (1965) ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದುವರೆಗೆ 51 ಮಂದಿಗೆ ಜ್ಞಾನಪೀಠ ಪ್ರಶಸ್ತಿ ಲಭ್ಯವಾಗಿದೆ. ಈ ಪೈಕಿ ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು, ಅಂದರೆ 9 ಮಂದಿ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ.ಎರಡನೇ ಸ್ಥಾನ ಕನ್ನಡಕ್ಕೆ ಸಂದಿದ್ದು, ರಾಷ್ಟ್ರಕವಿ ಕುವೆಂಪು ಅವರಿಂದ (1967) ಡಾ.ಚಂದ್ರಶೇಖರ ಕಂಬಾರರವರೆಗೆ (2010) ಒಟ್ಟು ಎಂಟು ಮಂದಿ ಸಾಹಿತಿಗಳು ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಜ್ಞಾನಪೀಠವನ್ನು ಮುಡಿಗೇರಿಸಿಕೊಂಡಿದ್ದಾರೆ.ಕನ್ನಡಕ್ಕೆ ಸಂದಿರುವ ಜ್ಞಾನಪೀಠ ಪ್ರಶಸ್ತಿಗಳ ಸಾಹಿತಿ ಮತ್ತು ಲೇಖಕರ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಗೊತ್ತಿದೆ. ಆದರೆ, ಬೇರೆ ಸಾಹಿತಿಗಳ ಕುರಿತು ಅಷ್ಟಾಗಿ ಗೊತ್ತಿಲ್ಲ. ಹೆಸರು ಗೊತ್ತಿರಬಹುದಾದರೂ ಅವರ ಕೃತಿಗಳು, ಯಾವ ಕ್ಷೇತ್ರದಲ್ಲಿ ಕೃತಿ ರಚನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಾಹಿತಿಗಳ ಕಿರು ಪರಿಚಯವುಳ್ಳ ಹೊತ್ತಿಗೆಯನ್ನು ರಂಗಾಯಣ ಸಿದ್ಧಪಡಿಸಿದೆ.ಕನ್ನಡ ಸಾಹಿತಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರ ಸೇರಿದಂತೆ ಎಲ್ಲ ಭಾಷೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಹಿನ್ನೆಲೆ, ಪ್ರಕಟಿತ ಕೃತಿಗಳು, ಇದುವರೆಗೆ ಪಡೆದಿರುವ ಪ್ರಶಸ್ತಿಗಳ ವಿವರಗಳನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, `ಇದೇ ಮೊದಲ ಬಾರಿಗೆ ಜ್ಞಾನಪೀಠ ಪುರಸ್ಕೃತರ ಕಿರು ಪರಿಚಯ ಒಳಗೊಂಡ ಪುಸ್ತಕ ಪ್ರಕಟಿಸಲಾಗಿದೆ. ಹಿಂದೆ ಯಾರೂ ಈ ಕೆಲಸ ಮಾಡಿಲ್ಲ. ಸಾಹಿತ್ಯದ ಬಗ್ಗೆ ಯುವಪೀಳಿಗೆಯಲ್ಲಿ ಆಸಕ್ತಿ ಮೂಡಿಸುವುದು ಇದರ ಉದ್ದೇಶ. ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವುದು~ ಎಂದು ತಿಳಿಸಿದರು.

Post Comments (+)