ಜ್ಞಾನಭಾರತಿ ಆವರಣದಲ್ಲೇ ಅನೇಕ ಅತ್ಯಾಚಾರ

7
ಬಂಧಿತರಿಂದ ತಪ್ಪೊಪ್ಪಿಗೆ ಹೇಳಿಕೆ

ಜ್ಞಾನಭಾರತಿ ಆವರಣದಲ್ಲೇ ಅನೇಕ ಅತ್ಯಾಚಾರ

Published:
Updated:

ಬೆಂಗಳೂರು: ನಗರದ ಜ್ಞಾನಭಾರತಿ ಬಳಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರೋಪಿಗಳು, ಮತ್ತಷ್ಟು ಯುವತಿಯರ ಮೇಲೂ ಸಾಮೂಹಿಕ ಅತ್ಯಾಚಾರ ಎಸಗಿರುವ ಅಂಶ ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ.`ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಏಳೆಂಟು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿತ್ತು. ಆ ಮೊಬೈಲ್‌ಗಳ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿಗಳು, ಜ್ಞಾನಭಾರತಿ ಆವರಣದಲ್ಲೇ ಹಲವು ಯುವತಿಯರ ಮೇಲೆ ಅತ್ಯಾಚಾರ ಎಸಗಿ ಅವರಿಂದ ಮೊಬೈಲ್ ಮತ್ತಿತರ ವಸ್ತುಗಳನ್ನು ದೋಚಿದ್ದೆವು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ' ಎಂದು ತನಿಖಾಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.`ಆರೋಪಿಗಳಿಂದ ಅತ್ಯಾಚಾರಕ್ಕೀಡಾದ ಯುವತಿಯರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ದೂರು ನೀಡುವಂತೆ ಅವರ ಮನವೊಲಿಸುವ ಪ್ರಯತ್ನ ನಡೆದಿದೆ. ದೂರು ನೀಡಿದರೆ ತನಿಖೆಗೆ ಸಹಾಯವಾಗುತ್ತದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ರಾಜಾಜಿನಗರದಲ್ಲಿ ವಾಸವಿರುವ ಬಿ.ಇ ಪದವೀಧರೆಯೊಬ್ಬರು, ಮೇ ತಿಂಗಳಿನಲ್ಲಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಮುಗಿಸಿಕೊಂಡು ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಜ್ಞಾನಭಾರತಿ ಮಾರ್ಗವಾಗಿ ಮನೆಗೆ ಹಿಂದಿರುಗುತ್ತಿದ್ದರು. ಆ ವೇಳೆ ಇದೇ ಆರೋಪಿಗಳು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಅಲ್ಲದೇ, ಆ ವಿದ್ಯಾರ್ಥಿನಿಯನ್ನು ಪೊದೆಗಳ ಬಳಿ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಆದರೆ, ಆ ಯುವತಿ ಅತ್ಯಾಚಾರ ಸಂಬಂಧ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ, ಬದಲಿಗೆ ಮೊಬೈಲ್ ಕಳೆದು ಹೋಗಿದೆ ಎಂದಷ್ಟೇ ರಾಜಾಜಿನಗರ ಠಾಣೆಗೆ ದೂರು ಕೊಟ್ಟಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ಗಳಲ್ಲಿ ಒಂದು ಮೊಬೈಲ್ ಆ ವಿದ್ಯಾರ್ಥಿನಿಯದಾಗಿತ್ತು. ಜತೆಗೆ ಆ ಮೊಬೈಲ್‌ನಲ್ಲಿ ಆಕೆಯ ಭಾವಚಿತ್ರಗಳು ಇದ್ದವು. ಭಾವಚಿತ್ರಗಳು, ಆರೋಪಿಗಳು ಹಾಗೂ ಮೊಬೈಲ್ ಸೇವಾ ಕಂಪೆನಿಗಳು ನೀಡಿದ ಮಾಹಿತಿಯ ನೆರವಿನಿಂದ ಆ ವಿದ್ಯಾರ್ಥಿನಿಯನ್ನು ಪತ್ತೆ ಮಾಡಲಾಯಿತು. ಆರೋಪಿಗಳು ಸಹ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಅಂತೆಯೇ ವಿದ್ಯಾರ್ಥಿನಿಯು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಒಪ್ಪಿಕೊಂಡಿದ್ದಾಳೆ. ಆದರೆ, ಆಕೆ ದೂರು ನೀಡಲು ನಿರಾಕರಿಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಯುವುದಕ್ಕೂ ಕೆಲ ದಿನಗಳ ಹಿಂದೆ ಆರೋಪಿಗಳು, ಆಟೊದಲ್ಲಿ ಹೋಗುತ್ತಿದ್ದ ದಂಪತಿಯನ್ನು ಜ್ಞಾನಭಾರತಿ ಆವರಣದಲ್ಲಿ ಅಡ್ಡಗಟ್ಟಿ ಪತ್ನಿಯ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ್ದರು. ಅದೃಷ್ಟವಶಾತ್ ದಂಪತಿ ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಠಾಣೆಗೆ ದೂರು ನೀಡಿದ್ದರು. ಆರೋಪಿಗಳು ದರೋಡೆ, ಗಂಧದ ಮರ ಕಳವು, ಡಕಾಯಿತಿ ಮತ್ತಿತರ ಅಪರಾಧ ಕೃತ್ಯಗಳನ್ನು ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry