ಗುರುವಾರ , ಮೇ 19, 2022
20 °C

ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಜ್ಞಾ ಯೋಗಾಶ್ರಮದಲ್ಲಿ ಸೋಮವಾರ ಗುರುಪೂರ್ಣಿಮೆಯ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಲಿಂ.ಮಲ್ಲಿಕಾರ್ಜುನ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಪುಷ್ಪ ಅರ್ಪಿಸಿ ದರು. ಪೂಜೆಯ ನೇತೃತ್ವ ವಹಿಸಿದ್ದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, `ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಗುರುವಿನ ಗುಲಾಮ ನಾಗುವ ತನಕ ಮುಕ್ತಿ ದೊರೆಯಲು ಸಾಧ್ಯವಿಲ್ಲ. ಗುರುವನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ' ಎಂದರು.ಇದೇ ಪ್ರಥಮ ಬಾರಿಗೆ ಸಿದ್ಧೇಶ್ವರ ಸ್ವಾಮೀಜಿ ಅವರ ಅಪೇಕ್ಷೆಯ ಮೇರೆಗೆ ಗುರುಪೂರ್ಣಿಮೆಯ ಅಂಗವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.`ಮಕ್ಕಳನ್ನು ಸಾಹಿತಿ, ಕವಿಗಳನ್ನಾಗಿ ಮಾಡಲು ಅವರಿಗೆ ವೇದಿಕೆ ಒದಗಿಸಬೇಕು. ಈ ಕಾರ್ಯಕ್ರಮ ಪ್ರತಿ ವರ್ಷ ನಡೆಯಲಿ' ಎಂದು ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ, ಜನಪದ ಸಾಹಿತಿ ಡಾ.ಎಂ.ಎನ್. ವಾಲಿ ಹೇಳಿದರು.ಶಾರದಾ ಪಬ್ಲಿಕ್ ಶಾಲೆಯ ಮಕ್ಕಳಿಂದ ಗುರು ಪರಂಪರೆ ರೂಪಕ, ಶಾಂತಿನಿಕೇತನ ಶಾಲೆಯ ಮಕ್ಕಳ ಏಕಲವ್ಯ ನಾಟಕ, ಸಂಸ್ಕೃತಿ ಭಾರತಿ ಸಂಘದ ರಾಮಾಯಣ ರೂಪಕ, ವಿವಿಧ ಶಾಲಾ ಮಕ್ಕಳ ಗುರುವಿನ ಕುರಿತ ಹಾಡು, ದೇಶ ಭಕ್ತಿಗೀತೆ, ವಚನ ಗಾಯನ, ಭರತನಾಟ್ಯ, ಸುಗ್ಗಿಯ ಹಾಡು ಕಾರ್ಯಕ್ರಮ ಗಮನಸೆಳೆದವು.ಎಕ್ಸಲಂಟ್, ಕಮಲಾದೇವಿ ಪಾಟೀಲ, ವಿದ್ಯಾಭಾರತಿ ಶಾಲೆ, ಸಂಸ್ಕೃತಿ ಶಾಲೆ, ಎಸ್.ಎಸ್. ಪ್ರೌಢ ಶಾಲೆ, ಬಂಜಾರಾ ಶಾಲೆ ಸೇರಿದಂತೆ 13 ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.25ರಿಂದ ಪ್ರವಚನ: ಸಿದ್ಧೇಶ್ವರ ಸ್ವಾಮೀಜಿ ಅವರು ಇದೇ 25 ರಿಂದ ನಿತ್ಯ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಇಲ್ಲಿಯ ಜ್ಞಾನ ಯೋಗಾಶ್ರಮದಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಶ್ರೀಗಳ ಪಾದಪೂಜೆ

ತಾಂಬಾ:
ಸಮೀಪದ ಸುಕ್ಷೇತ್ರ ಬಂಥ ನಾಳ ಮಠದಲ್ಲಿ ಸೋಮವಾರ ಗುರು ಪೂರ್ಣಿಮೆಯ ಅಂಗವಾಗಿ ವಿಶೇಷ ಅಭಿಷೇಕ, ಪೂಜೆ ಹಾಗೂ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆ ಬಂಥನಾಳ ಮಠದ ಪ್ರಸ್ತುತ ಪೀಠಾಧಿಪತಿ ವೃಷಭಲಿಂಗೇಶ್ವರ ಶಿವ ಯೋಗಿಗಳ ಸಾನಿಧ್ಯದಲ್ಲಿ ಲಿಂ.ಶಂಕರ ಲಿಂಗ ಶಿವಯೋಗಿಗಳ ಹಾಗೂ ಸಂಗನ ಬಸವ ಶಿವಯೋಗಿಗಳ ಕರ್ತೃ ಗದ್ದುಗೆಗೆ ಭಕ್ತರಿಂದ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಯಿತು.ಬಳಿಕ ವೃಷಭಲಿಂಗ ಶಿವಯೋಗಿಗಳ ಪಾದಪೂಜೆ ಕಾರ್ಯಕ್ರಮವನ್ನು ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಗುಡ್ಡೋಡಗಿ ಗ್ರಾಮದ ಬಸವರಾಜ ಪುಂಡಲೀಕ ವಿಜಾಪುರೆ ದಂಪತಿ ನೆರೆವೇರಿಸಿದರು.ವಿವಿಧ ಗ್ರಾಮದ ಭಜನಾ ಕಲಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆದವು.ಹಲವು ಭಕ್ತರು ನಸುಕಿನ ಜಾವದಿಂದಲೇ ವಿಶೇಷ ಪೂಜೆ ಸಲ್ಲಿಸಿ, ಗುರು ನಾಮಸ್ಮರಣೆ ಮಾಡಿದರು. ಈ ಸಂದರ್ಭದಲ್ಲಿ ದರ್ಶನಕ್ಕೆ ಬಂದ ಭಕ್ತರಿಗಾಗಿ ಮಠದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಣ್ಣಾರಾಯಗೌಡ ಪಾಟೀಲ, ಬಾಬುಗೌಡ ಅಳ್ಳಗಿ, ಷಣುಖಪ್ಪ ಹತ್ತಿ, ಸಂತೋಷ ರೂಗಿ, ಸಂಗಣ್ಣ ಜಾಲ ವಾದಿ, ನಿಂಗಣ್ಣ ಬಿಸನಾಳ, ಮುತ್ತಪ್ಪ ಪೂಜಾರಿ, ಬಲವಂತರಾಯ, ಮಲ್ಲಪ್ಪ ಅಗಟಗಿ, ದತ್ತು ಮುಜ ಗೊಂಡ, ಮೌನೇಶ ಬಡಿಗೇರ, ಶಿವಪ್ಪ ಆಲ ಮೇಲ, ಮಾದೇವಪ್ಪ ಮಳೆಗಾರ, ಹಣಮಂತ್ರಾಯ ಯಳಕೊಟಗಿ, ಸುವರ್ಣ ಕೊಪ್ಪ, ಬಸಮ್ಮ ಸಂಭಾಜಿ, ಶಾಂತಾಬಾಯಿ, ಸೇರಿದಂತೆ ಸ್ಥಳಿಯ ಹಾಗೂ ಸುತ್ತಲಿನ ಚಾಂದಕವಟೆ, ಸುರಗಿಹಳ್ಳಿ, ಓತಿಹಾಳ, ತಾಂಬಾ, ಲಚ್ಯಾಣ, ವಾಡೆ, ತೆನ್ನಿಹಳ್ಳಿ ಗ್ರಾಮಗಳ ಹಲವಾರು ಭಕ್ತರು, ಸಾಧು ಸಂತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.