ಸೋಮವಾರ, ಮೇ 23, 2022
21 °C

ಜ್ಞಾನವಾಣಿಯ ಜ್ಞಾನ ಪ್ರಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ)ದಡಿ 106.40 ತರಂಗಾಂತರಗಳಲ್ಲಿ ಪ್ರಸಾರವಾಗುವ ‘ಜ್ಞಾನವಾಣಿ’, ಶಿಕ್ಷಣದ ನಿಜವಾದ ಆಶಯವನ್ನು ಕೇಳುಗರಿಗೆ ಪ್ರತಿ ನಿತ್ಯ ಪ್ರಸಾರ ಮಾಡುತ್ತಿದೆ. ಪ್ರತಿ ನಿತ್ಯ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಸಂಜೆ 5 ಗಂಟೆಯಿಂದ ರಾತ್ರಿ 10ರ ತನಕ ಪ್ರಸಾರವಾಗುವ ಕಾರ್ಯಕ್ರಮಗಳು ವಿದ್ಯಾರ್ಥಿಯ ಹಿತದೃಷ್ಟಿಯಿಂದ ಉಪಯುಕ್ತವಾದಂತಹವು.ಯಾವುದೇ ಜಾಹೀರಾತುಗಳನ್ನು ಅವಲಂಬಿಸದೇ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆರೋಗ್ಯ ಸಂಬಂಧಿ ವಿಷಯಗಳನ್ನು ಶ್ರೋತೃವರ್ಗಕ್ಕೆ ನಿರಂತರವಾಗಿ ಪ್ರಸಾರ ಮಾಡುತ್ತಿರುವ ಏಕೈಕ ಬಾನುಲಿ ಪ್ರಸಾರ ಕೇಂದ್ರ ಇದಾಗಿದೆ. ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುವ ರೀತಿ ವಿಶೇಷ. ಪ್ರೌಢ ಶಾಲೆಯ ಮಕ್ಕಳ ಪಠ್ಯದಲ್ಲಿರುವ ಎಲ್ಲಾ ವಿಷಯಗಳನ್ನು ಸರಳವಾಗಿ ಅರ್ಥವಾಗುವಂತೆ ತಿಳಿಸಿಕೊಡುತ್ತಾರೆ. ನಮ್ಮ ಮುಂದೆಯೇ ಪಾಠ ಮಾಡುತ್ತಿರುವಂತೆ ಭಾಸವಾಗುವ ರೇಡಿಯೋದ ಧ್ವನಿ ಹೆಚ್ಚು ಸ್ಪಷ್ಟ ಮತ್ತು ಖಚಿತತೆಯಿಂದ ಕೂಡಿರುವುದಲ್ಲದೇ ಏಕಾಂತದಲ್ಲಿರುವಾಗ ಹಲವು ವಿಷಯಗಳನ್ನು ಜ್ಞಾನವಾಣಿಯಿಂದ ತಿಳಿದು ಕೊಳ್ಳಬಹುದಾಗಿದೆ.ಶಿಕ್ಷಣದಿಂದ ಅವಕಾಶ ವಂಚಿತ ಸಮುದಾಯ ಮನೆಯಲ್ಲಿಯೇ ಕೂತು ಕಾರ್ಯಕ್ರಮಗಳನ್ನು ಆಲಿಸುವುದರ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿ ಕೊಳ್ಳಬಹುದು. ಜೊತೆಗೆ ಉದ್ಯೋಗಾವಕಾಶಗಳ ಬಗ್ಗೆ  ಇದು ಮಾಹಿತಿ ಒದಗಿಸುತ್ತಿದೆ. ದೇಶದ ಉದ್ಯಮಿಗಳು ಶಿಕ್ಷಣ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವುದರಿಂದ ಶಿಕ್ಷಣ ಕ್ಷೇತ್ರ  ವ್ಯಾಪಾರೀಕರಣವಾಗುತ್ತಿದೆ. ಅಂತಹದರಲ್ಲಿಯೂ ಶಿಕ್ಷಣದ ನೈಜ ಕಾಳಜಿಯನ್ನು ಶ್ರೋತೃವರ್ಗಕ್ಕೆ ಪ್ರಸಾರ ಮಾಡುತ್ತಿರುವ ಜ್ಞಾನವಾಣಿ - ಶುಭವಾಣಿ, ಲಾಭವಾಣಿಯಾಗಿದೆ. ಪ್ರಸಾರ ಭಾರತಿ ಅಡಿಯಲ್ಲಿ ಶೈಕ್ಷಣಿಕ ಬಾನುಲಿ ಪ್ರಸಾರ ಮಾಡುತ್ತಿರುವ ಜ್ಞಾನವಾಣಿ ನಿತ್ಯ ನೂತನ. ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ವಿದ್ಯಾಭ್ಯಾಸದವರೆಗೆ ಪಠ್ಯಕ್ರಮಗಳನ್ನು ತಿಳಿಯ ಹೇಳಿಸುವಲ್ಲಿ ಸಫಲವಾಗಿದೆ. ಹಾಗೆಯೇ ಮಾನವಿಕ ವಿಷಯಗಳ ಮಹತ್ವ, ಸಮಾಜ ಬದಲಾವಣೆಯ ಆಶೋತ್ತರಗಳು, ರಾಷ್ಟ್ರೀಯ ಭಾವೈಕ್ಯತೆ, ಸ್ವಾತಂತ್ರ್ಯ ಸಂಗ್ರಾಮ, ಚರಿತ್ರೆ, ಪುರಾಣ, ಸಾಹಿತ್ಯ ಮತ್ತು ಸಮಾಜ, ವ್ಯವಹಾರ, ಕೃಷಿ, ವ್ಯವಹಾರ ನಿರ್ವಹಣೆ, ಕೈಗಾರಿಕಾ ಸಂಬಂಧಗಳು ಹೀಗೆ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳು  ಇಲ್ಲಿ ಪ್ರಸಾರವಾಗುತ್ತವೆ.

ಇದರ ನಡುವೆ ಸ್ತುತಿಗೀತೆಗಳು, ಶಾಸ್ತ್ರೀಯ ಸಂಗೀತ, ಸಂಗೀತ ಪಾಠ, ಜುಗಲ್‌ಬಂದಿ, ತಾಳಮದ್ದಲೆ ವಾದ್ಯಗೋಷ್ಠಿ ಇನ್ನಿತರ ಸಂಗೀತ ಸಂಬಂಧಿ ಕಾರ್ಯಕ್ರಮಗಳೂ ಪ್ರಸಾರವಾಗುತ್ತಿರುತ್ತವೆ.

ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ವಿಶೇಷ ಒತ್ತು

ಈ ವಿದ್ಯಾರ್ಥಿಗಳಿಗೆಂದೇ ನಿಗದಿ ಪಡಿಸಿದ ಎಲ್ಲಾ ವಿಷಯಗಳ ಪಾಠಗಳನ್ನು ವಿಷಯ ತಜ್ಞರಿಂದ ಬೋಧಿಸುತ್ತಾರೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪಾಠಗಳು ಕೆಲವು ಸಾರಿ ದೆಹಲಿಯಿಂದ ನೇರ ಪ್ರಸಾರವಾಗುತ್ತವೆ.ಹಳ್ಳಿಗಳ ರಾಷ್ಟ್ರವೆನಿಸಿದ ಭಾರತದಂತಹ ಮುಂದುವರಿಯುತ್ತಿರುವ ದೇಶದಲ್ಲಿ ಮಹಿಳೆಯರ ಸ್ವಾಸ್ಥ್ಯ, ಆರೋಗ್ಯ, ಸ್ವಾಭಿಮಾನದ ಬದುಕು, ಗೃಹೋಪಯೋಗಿ ವಸ್ತುಗಳ ತಯಾರಿಕೆ, ವರದಕ್ಷಿಣೆಯ ಕಿರುಕುಳ, ಅಪರಾಧ, ಮೂಢನಂಬಿಕೆಗಳ ಬಗೆಗೆ ತಿಳುವಳಿಕೆ ...ಒಂದೇ ಎರಡೇ ಸಾವಿರಾರು ವಿಷಯಗಳನ್ನು ಕುರಿತು ಜ್ಞಾನವಾಣಿ ಜ್ಞಾನದ ಸುಧೆಯನ್ನು ಬಿತ್ತರಿಸುತ್ತಿದೆ. ಇತ್ತೀಚೆಗೆ ಚಂದ್ರಯಾನ ಉಡಾವಣೆಯಾದುದರ ಬಗೆಗೆ ಸ್ಪಷ್ಟವಾದ ವಿವರವನ್ನು ರೇಡಿಯೋ ನೀಡಿತ್ತು.

 ಬೇರೊಂದು ಕೆಲಸ ಕಾರ್ಯಗಳನ್ನು ಮಾಡುತ್ತಲೇ ಕೇಳಿಸಿಕೊಳ್ಳಬಹುದಾದ, ಮನಸ್ಸನ್ನು ಕ್ರಿಯಾಶೀಲಗೊಳಿಸುವ ಇಂತಹ ಜ್ಞಾನವಾಣಿ ಮತ್ತಷ್ಟು ಯುವಜನರನ್ನು ತಲುಪುವ ಅಗತ್ಯವಿದೆ. ವಿದ್ಯಾರ್ಥಿಗಳು ಶಾಲೆಗಳಲ್ಲಿ ಪಾಠ ಕೇಳಿದ ಮೇಲೆ ಮನೆಯಲ್ಲಿ ರೇಡಿಯೋದಲ್ಲಿ ಕೇಳುವುದರಿಂದ ವಿಷಯ ಮನನ ಮಾಡಿಕೊಳ್ಳಲು ಸಹಾಯವಾಗುತ್ತದೆ. ಯಾವುದೇ ಗೌಜು ಗದ್ದಲಗಳಿಲ್ಲದೇ ನಿಶ್ಚಿಂತೆಯಿಂದ ಕೇಳಬಹುದು. ಸ್ಪಷ್ಟ ಉಚ್ಚಾರ, ದೀರ್ಘ ಮತ್ತು ಕಠಿಣ ವಿಷಯಗಳನ್ನು ಸರಳವಾಗಿ ಹೇಳಿಕೊಡುವ ಕ್ರಮ ವಿನೂತನ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆಂದೇ ಕನ್ನಡ ಭಾಷಾ ಪಠ್ಯಗಳು, ವ್ಯಾಕರಣ, ಇಂಗ್ಲಿಷ್, ಗಣಿತ, ಸಮಾಜ, ವಿಜ್ಞಾನ, ಭೂಗೋಳ, ಪೌರ ನೀತಿ, ಇತಿಹಾಸ ಮತ್ತಿತರ ವಿಷಯಗಳನ್ನು ಹೇಳಿಕೊಡುವುದರ ಜೊತೆಗೆ ಸಂಬಂಧಪಟ್ಟ ವಿಷಯ ತಜ್ಞರೊಂದಿಗೆ ನೇರ ಫೋನಿನ ಕಾರ್ಯಕ್ರಮಗಳೂ ಉಂಟು. ವಿದ್ಯಾರ್ಥಿಗಳಲ್ಲಿ ಉಂಟಾಗುವ ಗೊಂದಲ ಮತ್ತು ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಅನುಕೂಲ.ಸಾಹಿತ್ಯದ ವಿವಿಧ ಮಜಲುಗಳನ್ನು ಎಲ್ಲ ವಯಸ್ಸಿನ ವ್ಯಕ್ತಿಗಳು ಕೇಳುವಂತೆ ಪ್ರೇರೇಪಿಸುತ್ತಿದೆ. ಒಂದು ಕಾಲದಲ್ಲಿ ಕುಮಾರವ್ಯಾಸನ - ಕರ್ನಾಟಕ ಭಾರತ ಕಥಾಮಂಜರಿ ಅಥವಾ ಕುಮಾರವ್ಯಾಸ ಭಾರತವನ್ನು ಹಳ್ಳಿಗಳಲ್ಲಿ ವಾಚಿಸುತ್ತಾ ಅದನ್ನು ಕೇಳುತ್ತಾ ಸಂಭ್ರಮಿಸುವ ಶೋತೃವರ್ಗವೇ ಇತ್ತು. ಆದರೆ ಗಮಕಿಗಳು ಇಂದು ಬಹಳ ಕಡಿಮೆಯಾಗುತ್ತಿದ್ದಾರೆ. ಕುಮಾರ ವ್ಯಾಸ ಭಾರತವನ್ನು ಹಾಡಿ ಅರ್ಥ ತಿಳಿಸಿದಾಗ ಹೆಚ್ಚು ಅರ್ಥವಾಗುವುದರ ಜೊತೆಗೆ ಕೃತಿಯೂ ಆಪ್ತವಾಗುತ್ತದೆ. ಇಂತಹದ್ದನ್ನು ಭಾರತೀಯ ವಿದ್ಯಾಭವನದ ಕೊಡುಗೆಯಾಗಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ರಾತ್ರಿ 9-30ಕ್ಕೆ ಪ್ರಸಾರ ಮಾಡಲಾಗುತ್ತಿದೆ. ಕೇಶವಮೂರ್ತಿಯವರ ಮಾಧುರ್ಯ ತುಂಬಿದ ಕುಮಾರವ್ಯಾಸನ ಕಾವ್ಯವನ್ನು ಮತ್ತೂರು ಕೃಷ್ಣಮೂರ್ತಿಯವರು ತೊಳೆ ಬಿಡಿಸಿದಂತೆ ಬಿಡಿಸಿ ಸಾಮಾನ್ಯನಿಗೂ ಅರ್ಥವಾಗುವಂತೆ ತಿಳಿಸುವ ಕಾರ್ಯಕ್ರಮ  ಜನಪ್ರಿಯ. ಇದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚು ಅನುಕೂಲ.ಜ್ಞಾನವಾಣಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳು ಬೌದ್ಧಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಇಂದಿನ ವಿದ್ಯಾರ್ಥಿ ಸಮುದಾಯ ರಸ್ತೆಯಲ್ಲಿ ಮತ್ತು ಬಸ್ಸಿನಲ್ಲಿ ಹೋಗುತ್ತಿರಬೇಕಾದರೆ ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಕ್ಷಣಕ್ಕೊಂದು ರೇಡಿಯೋ ಚಾನೆಲ್ ಬದಲಾಯಿಸುತ್ತಾ ಯಾವುದನ್ನೂ ನೆಟ್ಟಗೆ ಕೇಳುವ ವ್ಯವಧಾನ ತೋರುವುದಿಲ್ಲ.  ಇರುವ ಕಡೆಯೇ ಜಗತ್ತಿನ ಎಲ್ಲಾ ಜ್ಞಾನಶಾಖೆಗಳನ್ನು ಧಾರೆ ಎರೆಯುತ್ತಿರುವ ವಿಶಿಷ್ಟ ರೇಡಿಯೊ ಚಾನೆಲ್ ಇದು.ಗಗನದಿಂದ ಹರಿಯುವ ಜ್ಞಾನವಾಣಿ ಶಿಕ್ಷಣದ ನಿಜವಾದ ಮಹತ್ವವನ್ನು ತಿಳಿಪಡಿಸುವುದರ ಜೊತೆಗೆ ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯದ ಜವಾಬ್ದಾರಿ ಏನು ಎಂಬುದನ್ನು ಅರ್ಥಪೂರ್ಣವಾಗಿ ಬಿತ್ತರಿಸುತ್ತಿದೆ. ಅಂತರ್‌ಶಿಸ್ತೀಯ ಅಧ್ಯಯನದ ಕಡೆ ಬೆಳಕು ಚೆಲ್ಲಿ ಹಾಸ್ಯ, ಮನೋರಂಜನೆ, ರಂಗಭೂಮಿಯ ಹೊಸ ಸಾಧ್ಯತೆಯ ಬಗೆಗೂ ಹೊಸ ವಿಚಾರಗಳನ್ನು ತಜ್ಞರಿಂದ ತಿಳಿಸುತ್ತಿದೆ.ಪದವಿ ಹಂತದ ವಿವಿಧ ವಿಷಯಗಳನ್ನು ಕುರಿತು ಚರ್ಚಿಸುವ ವಿದ್ವಾಂಸರ ಚರ್ಚೆಯನ್ನು ಎಲ್ಲಾ ವಯೋಮಾನದವರು ಕೇಳಬಹುದು. ಮೊಬೈಲ್ ಹೊಂದಿದ್ದು ಅದರಲ್ಲಿ ರೇಡಿಯೋ ಬರುವ ವ್ಯವಸ್ಥೆಯಿದ್ದಾಗ ಜ್ಞಾನವಾಣಿಯ ತರಂಗಗಳಿಗೆ ಮುಕ್ತವಾಗಿ ಕಿವಿ ತೆರೆಯುವ ಮನಸ್ಸು ನಮ್ಮದಾಗಬೇಕಿದೆ.  ಬೋಧಿಸುವ ವಿವಿಧ ಆಯಾಮಗಳು, ಬೋಧಿಸುವ ಕ್ರಮ, ಮಕ್ಕಳ ಮನಸ್ಸನ್ನು ಏಕಾಗ್ರಗೊಳಿಸಿ ಸಮ್ಮೋಹನ ಮಾಡುವುದು - ಹೀಗೆ ಹತ್ತು ಹಲವು ಉಪಯುಕ್ತ ಸಲಹೆಗಳನ್ನು ಶಿಕ್ಷಕರೂ ಕೇಳಿ ತಿಳಿಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.