ಶನಿವಾರ, ಜನವರಿ 18, 2020
21 °C

ಜ್ಞಾನಸಾಗರ: ಪ್ರತಿಭೆಗಳ ಅನಾವರಣ

–ಉಮಾಶಂಕರ ಬ. ಹಿರೇಮಠ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ಅದೇ ಮಕ್ಕಳು, ಅದೇ ಶಿಕ್ಷಕರು ಅದೇ ಮಾಮೂಲಿ ಆಟ, ಪಾಠ, ಊಟ ಹಾಗೂ ಇತ್ಯಾದಿ ಚಟುವಟಿಕೆಗಳು ಎಂದಿನಂತಿರದೇ ಒಂದು ದಿನ ಸಂಪೂರ್ಣ ಬದಲಾಗಿತ್ತು ಆ ಶಾಲಾ ಆವರಣ ಬೇರೆ ಬೇರೆ ಶಾಲೆಯ ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಶಿಕ್ಷಕರಲ್ಲಿ ಒಂದು ತರದ ಉಲ್ಲಾಸ, ಹಾಗೆಯೇ ಸ್ಥಳೀಯ ಪಾಲಕರಲ್ಲಿಯೂ ಸಂಭ್ರಮ ಮನೆಮಾಡಿತ್ತು.ಹೌದು! ಇಷ್ಟೆಲ್ಲ ವಿಶೇಷತೆಗೆ ಸಾಕ್ಷಿಯಾಗಿದ್ದು ಸ್ಥಳೀಯ ಜ್ಞಾನಸಾಗರ ಶಿಕ್ಷಣ ಸಂಸ್ಥೆಯ ಶಾಲಾ ಆವರಣ. ವಾರದಲ್ಲಿ ಆಯೋಜಿಸಿದ್ದ ಯಲಬುರ್ಗಾ ವಲಯ ಮಟ್ಟದ ಪ್ರತಿಭಾ ಕಾರಂಜಿ  ಕಾರ್ಯಕ್ರಮದ ಪ್ರಯುಕ್ತ ಕಂಡು ಬಂದ ವಿಶೇಷ ಚಿತ್ರಣ ಅದಾಗಿತ್ತು.ವಲಯ ವ್ಯಾಪ್ತಿಯಲ್ಲಿ ಇರುವ ಐದಾರು ಹಳ್ಳಿಗಳಿಂದ ಬಂದಿದ್ದ ಪ್ರತಿಭೆಗಳ ಸಂಗಮವೇ ಆವರಣದಲ್ಲಿ ಎದ್ದು ಕಾಣುತ್ತಿತ್ತು. ಯಲಬುರ್ಗಾ ಪಟ್ಟಣದ 7 ಖಾಸಗಿ, 7 ಸರ್ಕಾರಿ ಶಾಲೆ ಒಳಗೊಂಡಂತೆ 14 ಶಾಲೆಗಳ ಮತ್ತು ಪಕ್ಕದ ಕುದ್ರಿಕೊಟಗಿ, ಹೊಸಳ್ಳಿ, ಕಲ್ಲೂರು, ಸಂಗನಾಳ ಹಾಗೂ ಮಾರನಾಳ ಗ್ರಾಮದ ಶಾಲೆಗಳು ಸೇರಿ ಒಟ್ಟು 32 ಶಾಲೆಗಳಿಂದ ಬಂದಿದ್ದ ಶಾಲಾ ಮಕ್ಕಳು  ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿ ನೋಡುಗರ ಕಣ್ಮನ ತಣಿಸಿದರು.ಮನಮೋಹಕ ಕೋಲಾಟ: ಪಾಲ್ಗೊಂಡ ಬಹುತೇಕ ತಂಡಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶಿಸಿದ್ದು ಕೋಲಾಟ. ಗ್ರಾಮೀಣ ಸೊಗಡಿನ ಈ ಜಾನಪದ ಕಲಾ ಪ್ರಾಕಾರದ ಬಗ್ಗೆ ಬಹುತೇಕ ಪ್ರತಿಭೆಗಳ ಸೋಗಸಾಗಿಯೇ ಪ್ರದರ್ಶಿಸಿದ್ದು, ತೀರ್ಪುಗಾರರಾಗಿ ಪಾಲ್ಗೊಂಡಿದ್ದ ಅನೇಕ ಜನಪದ ಕಲಾವಿದರ ಮನಕ್ಕೆ ಮುದ ನೀಡುವಲ್ಲಿ ಯಶಸ್ವಿಯಾಗಿದ್ದಂತು ಸತ್ಯ.ಜಾನಪದ ಹಾಡುಗಳಿಗೆ ಒಡಮೂ­ಡಿದ ಬಾಲಕ–ಬಾಲ­ಕಿಯರ ನೃತ್ಯ ರೂಪಕಗಳು, ಛದ್ಮವೇಷ­ಧಾರಿಗಳ ಆಕರ್ಷಕ ನಟನೆ, ಆಧುನಿಕ ಡ್ಯಾನ್ಸ್ನ ವೈಖರಿ, ಭಾವಗೀತೆಗಳ ಹಾಡುಗಾರಿಕೆ ಹೀಗೆ ವೈವಿಧ್ಯಮಯ ಕಲಾ ಪ್ರದರ್ಶನಕ್ಕೆ ನಿರ್ಮಾಣಗೊಂಡಿದ್ದ ಅತ್ಯತ್ತುಮ  ವೇದಿಕೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದ ಮಕ್ಕಳ ಪ್ರತಿಭೆಯೊಂದಿಗೆ ಅವರಲ್ಲಿರುವ ಲವಲವಿಕೆ, ಸಂಭ್ರಮ ಹಾಗೂ ಆತ್ಮವಿಶ್ವಾಸ ಎದ್ದುಕಾಣುತ್ತಿತ್ತು. ಹೀಗೆ ಈ ಎಲ್ಲ ಅಂಶಗಳಿಗೆ ಪ್ರತಿಭಾ ಕಾರಂಜಿಯ ಮೂಲ ಉದ್ದೇಶ ಈಡೇರಿಸುವಲ್ಲಿ ಯಶಸ್ವಿಯಾಗಿತ್ತು ಎಂದು ಹೇಳಿದರೆ ತಪ್ಪಾಗದು.ಮತ್ತೊಮ್ಮೆ ಸಂಘಟಿಸುವಾಸೆ: ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸಂಘಟಿಸಲು ಅವಕಾಶ ಕಲ್ಪಿಸಿದ್ದು ಹೆಚ್ಚು ಸಂಭ್ರಮ ತಂದಿದೆ. ಈ ಅನುಭವ ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ಪ್ರೇರಣೆ ನೀಡಿದೆ. ಹಾಗೆಯೇ ನಮ್ಮ ಸಂಸ್ಥೆಯ ಮಕ್ಕಳು ಹೆಚ್ಚಿನ ಬಹುಮಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದು ಸಂಭ್ರಮಕ್ಕೆ ಕಾರಣವಾಗಿದೆ ಎಂದು ಜ್ಞಾನ ಸಾಗರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಕೊಪ್ಪಳ ಸ್ಮರಿಸಿಕೊಳ್ಳುತ್ತಾರೆ.ಕಲಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಹಾಗೂ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಶಾಲೆಯಲ್ಲಿಯೇ ಉಳಿಯುವಂತೆ ಮಾಡುವ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದ ಮಕ್ಕಳಿಗೆ ಮನೋರಂಜನೆ ನೀಡುವುದರ ಜೊತೆಗೆ ವ್ಯಕಿತ್ವ ವಿಕಾಸಕ್ಕೆ ಹಾಗೂ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಶಾಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರಬೇಕು ಎಂದು ಸ್ಥಳೀಯ ಯುವ ಬರಹಗಾರ ವಿ.ಎಸ್‌. ಶಿವಪ್ಪಯ್ಯನಮಠ ಅವರ ಅಭಿಮತ.ವಲಯ ಮಟ್ಟ, ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದ ಈ ಪ್ರತಿಭಾ ಕಾರಂಜಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಹೆದ್ದಾರಿಯಂತಿದ್ದು, ನಿರೀಕ್ಷೆಗೂ ಮೀರಿ ಯಶಸ್ವಿಯಾಗುವ ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಹಕ್ಕುಗಳು ಯಶಸ್ವಿಗೊಳಿಸುವಲ್ಲಿ ಶ್ರಮಿಸಬೇಕಾಗಿದೆ. ಕಾಟಾಚಾರಕ್ಕೆ ಮಾತ್ರ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತೆ ಮುಂದಿನ ವರ್ಷದ ವರೆಗೂ ಮರೆತು ಕುಳಿತುಕೊಳ್ಳುವ ಬದಲು ನಿತ್ಯ ನಿರಂತರವಾಗಿ ಮಕ್ಕಳು ಚೈತನ್ಯಶೀಲರಾಗಿರುವಂತೆ ನೋಡಿಕೊಳ್ಳುವ ಮೂಲಕ ಮಕ್ಕಳ ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುವುದು ಕೂಡಾ ಅಷ್ಟೇ ಪ್ರಮುಖ ಅಂಶ.

   

ಪ್ರತಿಕ್ರಿಯಿಸಿ (+)