ಜ್ಞಾನ ಗಂಗೆ ಒಡಲು ಮಲಿನ

7

ಜ್ಞಾನ ಗಂಗೆ ಒಡಲು ಮಲಿನ

Published:
Updated:

ಬೆಂಗಳೂರು ಬಗ್ಗೆ ವಿಶ್ವಸಂಸ್ಥೆಯಿಂದ ಏಕಕಾಲಕ್ಕೆ ಮೆಚ್ಚುಗೆ, ಕಳವಳ



ನವದೆಹಲಿ:  ಬೆಂಗಳೂರು ನಗರವು ಒಂದೆಡೆ `ಜ್ಞಾನ ವಲಯ~ವಾಗಿ ಸದೃಢವಾಗುತ್ತಿದ್ದರೆ ಮತ್ತೊಂದೆಡೆ ಮಾಲಿನ್ಯದ ಕೂಪವಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.



ಬುಧವಾರ ಬಿಡುಗಡೆ ಮಾಡಲಾದ ವಿಶ್ವಸಂಸ್ಥೆ ಹೊಸದಾಗಿ ಸಿದ್ಧಪಡಿಸಿರುವ `ಜಗತ್ತಿನ ಪ್ರಮುಖ ನಗರಗಳ ಕುರಿತ ವರದಿ-2012~ರಲ್ಲಿ ಹೀಗೆ ಹೇಳಲಾಗಿದೆ.



ವಿಶ್ವಸಂಸ್ಥೆಯಿಂದ ಬೆಂಗಳೂರಿನ ಕ್ರಿಯಾಶೀಲತೆ, ಆವಿಷ್ಕಾರ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ಹಾಗೂ ನಗರದ ಪರಿಸರ ದುಃಸ್ಥಿತಿಯ ಬಗ್ಗೆ ಕಳವಳ ಏಕಕಾಲಕ್ಕೆ ವ್ಯಕ್ತವಾಗಿದೆ.



ಅಭಿವೃದ್ಧಿಶೀಲ ರಾಷ್ಟ್ರಗಳ ಕೆಲವು ನಗರಗಳು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ, ಬೋಸ್ಟನ್‌ನ ರೂಟ್ 128ರ ಹಾದಿಯಲ್ಲಿ ಮುನ್ನಡೆದು `ಹೈಟೆಕ್ ವಲಯ~ಗಳಾಗಿ ರೂಪುಗೊಳ್ಳುತ್ತಿವೆ. ಉನ್ನತ ಮಟ್ಟದ ಶೈಕ್ಷಣಿಕ ಹಾಗೂ  ಸಂಶೋಧನಾ ಸಂಸ್ಥೆಗಳು, ಗಣನೀಯ ಪ್ರಮಾಣದ ಸಾರ್ವಜನಿಕ ಮತ್ತು ಕಾರ್ಪೊರೇಟ್ ಬಂಡವಾಳ ಹೂಡಿಕೆಯಿಂದಾಗಿ ಬೆಂಗಳೂರು ಕೂಡ ಈ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.



ಇದೇ ಕಾರಣಗಳಿಗಾಗಿ, ಏಷ್ಯಾದ ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರಿನ ಜತೆಗೆ ಹೈದರಾಬಾದ್ ಕೂಡ ಸ್ಥಾನ ಪಡೆದಿದೆ. ಸಿಂಗಪುರ, ಚೀನಾದ ಶೆಂಝೆನ್, ಚಾಂಗ್‌ಜಿಂಗ್, ಟರ್ಕಿಯ ಗಾಝಿಯಾನ್‌ತೆಪ್ ಮತ್ತು ಫಿಲಿಪ್ಪೀನ್ಸ್‌ನ ಸೆಬು ಏಷ್ಯಾದ ಪಟ್ಟಿಯಲ್ಲಿರುವ ಇತರ ತಾಣಗಳಾಗಿವೆ.



ಸಮರ್ಪಕ ನೀತಿ ನಿರೂಪಣೆ, ಉದ್ಯಮಶೀಲತೆ, ಹೊಸತನ, 66 ಎಂಜಿನಿಯರಿಂಗ್ ಕಾಲೇಜುಗಳು, 55 ಪಾಲಿಟೆಕ್ನಿಕ್‌ಗಳ ಬಲದಿಂದಾಗಿ ಬೆಂಗಳೂರು ಜ್ಞಾನ ವಲಯವಾಗಿ ಹೊರಹೊಮ್ಮಿದೆ. ಈ ನಗರವು ವೈಜ್ಞಾನಿಕ ಆವಿಷ್ಕಾರ, ವೈಮಾನಿಕ ಶಾಸ್ತ್ರ, ಎಲೆಕ್ಟ್ರಾನಿಕ್ಸ್ ಸಂಶೋಧನೆಗಳು, ಹಾಗೂ ಪರಿಣಾಮಕಾರಿ ಸಾರ್ವಜನಿಕ ಸಂಶೋಧನಾ ಸವಲತ್ತು ಕೇಂದ್ರವಾಗಿದೆ ಎಂದು ವಿಶ್ವಸಂಸ್ಥೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

ಹೈದರಾಬಾದ್ ಬಗ್ಗೆಯೂ ವರದಿಯಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಹೈದರಾಬಾದ್ ಬೆಳವಣಿಗೆಯಲ್ಲಿ ಜೈವಿಕ ತಂತ್ರಜ್ಞಾನ, ಕಂಪ್ಯೂಟರ್ ಮತ್ತು ಸಂವಹನ ಉದ್ದಿಮೆಗಳು ಪ್ರಮುಖ ಪಾತ್ರ ವಹಿಸಿವೆ. ಜತೆಗೆ ಕೇಂದ್ರ ಸರ್ಕಾರದ ನೆರವಿನ 40ಕ್ಕೂ ಹೆಚ್ಚು ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು ಈ ನಗರದಲ್ಲಿವೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.



ಕಳಪೆ ಗಾಳಿ: ಆದರೆ, ಬೆಂಗಳೂರಿನ ಪರಿಸರವು ಕಳಪೆಯಾಗಿದೆ. ಆರ್ಥಿಕ ಬೆಳವಣಿಗೆಗೆ ಪೂರಕವಾದ ಮೂಲಸೌಕರ್ಯ ನಿರ್ಮಾಣದಲ್ಲಿ ವಿವಿಧ ಸ್ಥಳಗಳ ನಡುವೆ ಸಾಕಷ್ಟು ಅಂತರವಿದೆ.  ಆರ್ಥಿಕ ಬೆಳವಣಿಗೆಯ ಲಾಭವು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಅಗತ್ಯವಿದೆ ಎಂದು ವರದಿ ತಿಳಿಸಿದೆ.  



 ಬೆಂಗಳೂರಿನ ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, ನಗರದಲ್ಲಿ ಅಂತರ್ಜಲ ಕುಸಿದು, ಕೆರೆಗಳು ಕಣ್ಮರೆಯಾಗುತ್ತಿವೆ ಎಂದೂ ವರದಿಯಲ್ಲಿ ಎಚ್ಚರಿಸಲಾಗಿದೆ.



 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry