`ಜ್ಞಾನ ಯಾರೂ ಕಸಿದುಕೊಳ್ಳದ ಆಸ್ತಿ'

7

`ಜ್ಞಾನ ಯಾರೂ ಕಸಿದುಕೊಳ್ಳದ ಆಸ್ತಿ'

Published:
Updated:

ಬಳ್ಳಾರಿ: ಜ್ಞಾನವು ದೇವರು ನೀಡುವ ಕೊಡುಗೆಯಾಗಿದ್ದು, ಯಾರೂ ಕಸಿದು ಕೊಳ್ಳಲಾರದಂತಹ ಅಮೂಲ್ಯವಾದ ಆಸ್ತಿಯಾಗಿದೆ ಎಂದು ವಿಜ್ಞಾನಿ ಡಾ. ನಜೀರ್ ಅಹಮದ್ ಅಭಿಪ್ರಾಯಪಟ್ಟರು.

ನಗರದ ಹುದಾ ಶಿಕ್ಷಣ ಸಂಸ್ಥೆಯ ಮಹಮ್ಮದೀಯ ಮಹಾವಿದ್ಯಾಲಯ ದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಮನುಷ್ಯನಿಗೆ ಅನುಭವಗಳೇ ಪಾಠ ಕಲಿಸುತ್ತವೆ. ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡುವ ಮೂಲಕ ಅಧ್ಯಯನ ದಲ್ಲಿ ತೊಡಗಬೇಕು. ತಪ್ಪುಗಳು ಪಾಠವಿದ್ದಂತೆ. ಅವುಗಳ ಮೂಲಕವೇ ಕಲಿಕೆಯಲ್ಲಿ ಆಸಕ್ತಿ ತಾಳಬೇಕು ಎಂದು ಅವರು ಕಿವಿಮಾತು ಹೇಳಿದರು.ಹುಟ್ಟಿದ ಮಗು ಅನೇಕ ಬಾರಿ ಎಡವಿ ಬೀಳುವ ಮೂಲಕವೇ ನಡೆದಾಡುವುದನ್ನು ಕಲಿಯುತ್ತದೆ. ತೊದಲು ಮಾತುಗಳೊಂದಿಗೇ ಆರಂಭಿಸಿ ಚೆನ್ನಾಗಿ ಮಾತನಾಡಲು ಕಲಿಯುತ್ತದೆ. ಅದೇ ರೀತಿ, ತಪ್ಪುಗಳನ್ನು ಮಾಡಿಯೇ ಮನುಷ್ಯ ಪರಿಪಕ್ವನಾಗುತ್ತಾನೆ ಎಂದು ಅವರು ತಿಳಿಸಿದರು.ಸಮಯ ಅತ್ಯಮೂಲ್ಯವಾಗಿದ್ದು ಅದನ್ನು ಹಾಳು ಮಾಡಬಾರದು. ಪರೀಕ್ಷೆ ಬಂದಾಗಲೇ ಓದುವುದಕ್ಕೆ ಅಣಿಯಾಗದೆ, ಶೈಕ್ಷಣಿಕ ವರ್ಷದ ಮೊದಲ ಆರು ತಿಂಗಳಲ್ಲಿ ಪಠ್ಯವನ್ನೆಲ್ಲ ಓದಿ ಮುಗಿಸಿ, ನಂತರದ ಮೂರು ತಿಂಗಳನ್ನು ಪುನರ್ ಮನನಕ್ಕೆ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು.ಬಹುಮುಖ ಪ್ರತಿಭೆಯಾಗಿರುವ ಡಾ.ನಜೀರ್ ಅಹಮದ್ ಅವರು ಪ್ರಾಥಮಿಕ ಶಿಕ್ಷಣದ ಹಂತದಿಂದ ಪಿಎಚ್.ಡಿವರೆಗೆ ಪ್ರಥಮ ರ‌್ಯಾಂಕ್ ಗಳಿಸಿದ್ದರಿಂದ ಅವರನ್ನು `ರ‌್ಯಾಂಕ್' ನಜೀರ್ ಅಹಮದ್ ಎಂದೇ ಗುರುತಿಸಲಾಗುತ್ತಿದೆ ಎಂದು ಜಮಾತೆ ಇಸ್ಲಾಂನ ಸಲಹಾ ಸಮಿತಿ ಸದಸ್ಯ ತನ್ವೀರ್ ಅಹಮದ್ ತಿಳಿಸಿದರು.ಶಿಕ್ಷಣ ತಜ್ಞ ಪ್ರೊ.ಬಿ.ಶೇಷಾದ್ರಿ, ನಿವೃತ್ತ ಉಪನ್ಯಾಸಕ ಡಾ.ಸತ್ಯ ನಾರಾಯಣ ರಾವ್, ಆಡಳಿತ ಮಂಡಳಿ ಮುಖ್ಯಸ್ಥ ಮೌಲಾನಾ ಇದ್ರಿಸ್, ಅಬ್ದುಲ್ ಖಾದಿರ್ ಸಾಬ್ ಉಪಸ್ಥಿತ ರಿದ್ದರು. ಮುಜಮ್ಮಿಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry