ಬುಧವಾರ, ಏಪ್ರಿಲ್ 14, 2021
24 °C

ಜ್ಞಾನ ವೃದ್ಧಿಗೆ ಓದುವ ಪರಿಪಾಠ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಶಿಕ್ಷಣ ಇಲಾಖೆ ನೂತನವಾಗಿ ರೂಪಿಸಿರುವ `ತೆಗೆಯಿರಿ ಪುಸ್ತಕ ಹೊರಗೆ- ಹಚ್ಚಿರಿ ಜ್ಞಾನದ ದೀವಿಗೆ~ ಕಾರ್ಯಕ್ರಮ ಜಿಲ್ಲೆಯಾದ್ಯಂತ ಬುಧವಾರ ಯಶಸ್ವಿಯಾಗಿ ನಡೆಯಿತು.ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವ್ಯವಸ್ಥಿತವಾಗಿ ಪುಸ್ತಕಗಳನ್ನು ಹೊಂದಿಸಿಟ್ಟು, ಮಕ್ಕಳಿಗೆ ಪುಸ್ತಕ ಪರಿಚಯ ಮಾಡುವುದರ ಜತೆಗೆ ಅವರಿಗೆ ಇಷ್ಟವಾದ ಪುಸ್ತಕಗಳನ್ನು ಓದಲು ನೀಡಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಓದಿನ ನಂತರ ಮಕ್ಕಳಲ್ಲಿ ಪುಸ್ತಕದ ಬಗೆಗಿನ ಅನಿಸಿಕೆಗಳನ್ನು ಹೇಳಿಸಲಾಯಿತು.ಪುಸ್ತಕ ಓದಿದ ವಿದ್ಯಾರ್ಥಿಗಳು, `ದಿನವೂ ಶಾಲಾ ಪಠ್ಯದ ಪುಸ್ತಕಗಳನ್ನು ಓದಿನ ಜತೆಗೆ ಬೇರೆ ಬೇರೆ ವಿಷಯಗಳ ಪುಸ್ತಕ ಓದುವ ಹವ್ಯಾಸ ಕಡಿಮೆ ಇತ್ತು. ಶಾಲಾ ಪುಸ್ತಕ ಬಿಟ್ಟು ಕತೆ, ಕವನ, ಕಾದಂಬರಿಗಳನ್ನು ಓದುವುದರಿಂದ ಹೊಸ ವಿಷಯಗಳ ಪರಿಚಯದ ಜತೆಗೆ ಶಬ್ದ ಭಂಡಾರ ಹೆಚ್ಚಲು ಅನುಕೂಲವಾಗಲಿದೆ ಎಂಬ ಸತ್ಯ ಗೊತ್ತಾಯಿತು. ನಿತ್ಯ ಒಂದಿಲ್ಲ ಒಂದು ಪುಸ್ತಕ ಓದುವ ಪ್ರಯತ್ನ ಮಾಡುತ್ತೇವೆ~ ಎಂದು ಹೇಳಿದರು.ಪರಿಪಾಠಕ್ಕೆ ನಾಂದಿ:  ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ `ತೆಗೆಯಿರಿ ಪುಸ್ತಕ ಹೊರಗೆ- ಹಚ್ಚಿರಿ ಜ್ಞಾನದ ದೀವಿಗೆ~ ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಆಯುಕ್ತ ಎನ್. ಎಂ. ಪಾಟೀಲ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುಸ್ತಕಗಳ ಓದುವ ಪ್ರವೃತ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಓದುವ ಪರಿಪಾಠ ಹುಟ್ಟು ಹಾಕುವ ಉದ್ದೇಶದಿಂದ ಇಲಾಖೆ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಬಿ. ಕೊಡ್ಲಿ ಮಾತನಾಡಿ, ಸರ್ಕಾರ ಶಾಲಾ ಗ್ರಂಥಾಲಯ ನಿರ್ಮಿಸುವ ಉದ್ದೇಶದಿಂದಲೇ ಪುಸ್ತಕ ಖರೀದಿಗಾಗಿ ಹಣಕಾಸಿನ ನೆರವು ನೀಡಿದೆ.ಎರಡು ವರ್ಷಗಳಲ್ಲಿ ಪುಸ್ತಕ ಮೇಳಗಳನ್ನು ನಡೆಸಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಉಪಯುಕ್ತವಾಗುವ ಪುಸ್ತಕಗಳನ್ನು ಖರೀದಿಸುವ ವ್ಯವಸ್ಥೆುನ್ನು ಇಲಾಖೆ ಮಾಡಿದೆ ಎಂದು ಹೇಳಿದರು.ಈಗಾಗಲೇ ಶಾಲೆಯಲ್ಲಿರುವ ಪುಸ್ತಕಗಳನ್ನು ಒಪ್ಪ ಓರಣವಾಗಿ ಇಟ್ಟು  ಅದಕ್ಕೆ `ಶಾಲಾ ಶ್ರದ್ಧಾ ವಾಚನಾಲಯ~ ಎಂದು ನಾಮಕರಣ ಮಾಡಬೇಕು. ಪ್ರತಿ ನಿತ್ಯ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಗ್ರಂಥಾಲಯದ ಪುಸ್ತಕಗಳನ್ನು ನೀಡಿ ಓದುವ ಹವ್ಯಾಸ ಬೆಳೆಸಬೇಕು. ಮಕ್ಕಳು ಕೂಡಾ ಹೊಸ ಹೊಸ ಪುಸ್ತಕಗಳನ್ನು ಓದಿ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಆಶಯದಂತೆ ಪುಸ್ತಕ ಓದಿದ ನಂತರ ಪ್ರತಿ ಶಾಲೆಯ ಇಬ್ಬರು ಮಕ್ಕಳು ಪುಸ್ತಕದ ಓದಿನಿಂದ ಆಗುವ ಪ್ರಯೋಜನದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯವನ್ನು ಪೋಸ್ಟ್‌ಕಾರ್ಡ್‌ನಲ್ಲಿ ಬರೆದು ಕಳುಹಿಸುವಂತೆ ವಿನಂತಿಸಿದರು.ಲಯನ್ಸ್ ಶಾಲೆ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ `ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ~ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ  ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ನಂತರ ಮಾತನಾಡಿ, `ಪುಸ್ತಕಗಳು ಲೋಕ ಜ್ಞಾನವನ್ನು ಕೊಡುವ ಮನುಷ್ಯನ ಒಳಗಿನ ಕಣ್ಣುಗಳು~ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಎಸ್. ಎಚ್. ಕಬ್ಬಿಣಕಂತಿಮಠ ವಹಿಸಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಖಜಾಂಚಿಗಳಾದ ಆರ್. ಎಸ್. ಮಾಗನೂರ, ಮುಖ್ಯಶಿಕ್ಷಕ ಮೃತ್ಯುಂಜಯ ಅಗಡಿ, ಶಿಕ್ಷಕರು ಹಾಜರಿದ್ದರು. ಸಮಾರಂಭದ ನಂತರ ಒಂದು ಗಂಟೆಯ ಕಾಲ ಮೌನ ಓದು ಕಾರ್ಯಕ್ರಮ ಜರುಗಿತು.ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು. ಎಂ. ಎ. ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕ ರವಿ ಬಡಿಗೇರ ಕಾರ್ಯಕ್ರಮ ನಡೆಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.